4
ಕಪ್ಪಾಗಿ ಉದುರುವ ರೋಬಸ್ಟಾ: ಬೆಳೆ ಕುಸಿಯುವ ಭೀತಿ

ಮಳೆ ಹೊಡೆತಕ್ಕೆ ಕಾಫಿ ಗಿಡ ಬರಿದು

Published:
Updated:
ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದ ಮಹೇಶ್‌ ಎಂಬುವವರ ಕಾಫಿ ತೋಟದಲ್ಲಿ ಮಳೆ ಹೆಚ್ಚಳದಿಂದ ಕೊಳೆತು ಹೋಗುತ್ತಿರುವ ರೋಬಾಸ್ಟ ಕಾಫಿ.

ಮೂಡಿಗೆರೆ: ಜೂನ್‌ನಲ್ಲಿ ಸುರಿದ ಬಾರಿ ಮಳೆಯು ಕಾಫಿ ಬೆಳೆಗಾರರಿಗೆ ಕಹಿಯಾಗಿ ಪರಿಣಮಿಸಿದ್ದು, ಗಿಡದಲ್ಲಿ ಹೀಚುಕಟ್ಟಿರುವ ಕಾಫಿಯೆಲ್ಲವೂ ಕಪ್ಪಾಗಿ ಉದುರ ತೊಡಗಿದೆ.

ತಾಲ್ಲೂಕಿನ ಭೈರಾಪುರ, ಗುತ್ತಿ, ಏರಿಕೆ, ಮೇಕನಗದ್ದೆ, ದೇವರುಂದ, ಹೊಸ್ಕೆರೆ, ಹಂತೂರು, ಕಣಚೂರು, ಮೂಲರಹಳ್ಳಿ, ಬಾಳೆಗದ್ದೆ ಭಾಗಗಳಲ್ಲಿ ಜೂನ್‌ ಒಂದೇ ತಿಂಗಳಿನಲ್ಲಿ ಸಮಾರು 50 ಇಂಚಿಗೂ ಅಧಿಕ ಮಳೆ ಸುರಿದಿದೆ. ಇದರಿಂದಾಗಿ ಕಾಫಿ ತೋಟಗಳಿಗೆ ಶೀತ ಹೆಚ್ಚಾಗಿ ಹೀಚುಕಟ್ಟಿರುವ ಕಾಫಿ ಹಾನಿಗೊಳಗಾಗುತ್ತಿದೆ. ಈ ಭಾಗದಲ್ಲಿ ಜೂನ್‌ 13ರಂದು ಒಂದೇ ರಾತ್ರಿಯಲ್ಲಿ ಸರಾಸರಿ 20 ಇಂಚಿಗೂ ಅಧಿಕ ಮಳೆ ಸುರಿದಿದ್ದು, ಮಳೆಯ ಹೊಡೆತಕ್ಕೆ ಬಹುತೇಕ ತೋಟಗಳಲ್ಲಿ ಕಾಫಿ ಎಲೆಗಳು ಉದುರಿ, ಗಿಡಗಳೆಲ್ಲವೂ ಬರಿದಾಗಿ ನಿಂತಿವೆ.

ತಾಲ್ಲೂಕಿನಲ್ಲಿ ರೋಬಸ್ಟಾ ಬೆಳೆಯ ಪ್ರಮಾಣವೇ ಅಧಿಕವಾಗಿದ್ದು, ಬಹುತೇಕ ರೋಬಸ್ಟಾ ತೋಟಗಳಲ್ಲಿ ಕಾಫಿ ಹೀಚುಕಟ್ಟುತ್ತಿದ್ದು, ಈ ಹೀಚು ಹಣ್ಣಾಗಲು ಮುಂದಿನ ನಾಲ್ಕೈದು ತಿಂಗಳ ಕಾಲಾವಕಾಶ ಅಗತ್ಯವಿದೆ. ಆದರೆ ಧಾರಾಕಾರ ಮಳೆಯಿಂದಾಗಿ ನಾಲ್ಕೈದು ತಿಂಗಳು ಕಾಫಿಯನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತಾಗಿದೆ.

ಹರ ಸಾಹಸ: ಕಾಫಿ ಉದುರುವುದನ್ನು ತಡೆಯಲು ರೈತರು ಹರಸಾಹಸ ಪಡುತ್ತಿದ್ದು, ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳಿಗೆ ಕಾಫಿ ತೋಟಗಳು ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿವೆ.

ಉದುರುತ್ತಿರುವ ಕಾಫಿ ತೋಟಗಳಿಗೆ ದೌಡಾಯಿಸುತ್ತಿರುವ ಔಷಧಿ ಅಂಗಡಿಗಳ ಮಾಲೀಕರು ನಾನಾ ನಮೂನೆಯ ಔಷಧಿ ಪರಿಚಯಿಸಿದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘ತಾಲ್ಲೂಕಿನಲ್ಲಿ ಕಾಫಿ ಬೆಳೆಯು ಶಾಪವಾಗಿ ಪರಿಣಮಿಸಿದೆ. ಕಳೆದ ವರ್ಷ ಹೂವಿನ ಮಳೆ ಸರಿಯಾಗಿ ಸುರಿಯದೇ ಶೇ 60ರಷ್ಟು ಕಾಫಿ ಬೆಳೆ ಹಾನಿಯಾಗಿತ್ತು. ನೀರು ಹಾಯಿಸಿದ್ದ ರೈತರು ಕೂಡ ನಿಗದಿತ ಬೆಳೆ ಪಡೆಯಲಾಗಲಿಲ್ಲ. ಈ ಬಾರಿ ಹೂವಿನ ಮಳೆ ರೈತರಿಗೆ ಅನುಕೂಲವಾಗಿದ್ದು, ಬಹಳ ವರ್ಷಗಳ ನಂತರ ಉತ್ತಮ ಬೆಳೆ ಬರಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ, ಜೂನ್‌ ತಿಂಗಳೊಂದರಲ್ಲೇ ದುಪ್ಪಟ್ಟು ಮಳೆಯಾಗಿದ್ದು, ಹಳೆಯ ಕಾಫಿ ಗಿಡಗಳು ಕೂಡ ಶೀತ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಯಲಿನಲ್ಲಿರುವ ಕಾಫಿ ತೋಟಗಳಂತೂ ಎಲೆಗಳಿಲ್ಲದೇ ಗಿಡಗಳೇ ಸಾಯುವ ಮಟ್ಟಕ್ಕೆ ತಲುಪಿವೆ. ನಾಲ್ಕೈದು ವರ್ಷಗಳಿಂದ ಸೂಕ್ತವಾಗಿ ಬೆಳೆ ಹಾಗೂ ಬೆಲೆಯಿಲ್ಲದೇ ಬ್ಯಾಂಕ್‌ಗಳಲ್ಲಿ ಸಾಲದ ಮೊತ್ತ ಬೆಳೆಯುತ್ತಲೇ ಇದೆ’ ಎಂದು ಹಂತೂರು ಗ್ರಾಮದ ರೈತ ಮಹೇಶ್‌ ಕಾಫಿ ಉದುರುತ್ತಿರುವ ಬಗ್ಗೆ ಅಳಲು ತೋಡಿಕೊಂಡರು.

ತಾಲ್ಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಕಾಫಿಯೊಂದಿಗೆ, ಕಾಳು ಮೆಣಸು, ಭತ್ತದ ಬೆಳೆಗಳಿಗೂ ಹಾನಿಯಾಗಿದ್ದು, ರೈತರಿಗೆ  ಸಂಕಷ್ಟ ಎದುರಾಗಿದೆ. 

**

ಜೂನ್‌ ತಿಂಗಳೊಂದರಲ್ಲೇ ವರ್ಷದ ಶೇ 80 ರಷ್ಟು ಮಳೆಯಾಗಿದ್ದು, ಶೀತ ಹೆಚ್ಚಳವಾಗಿ ಕಾಫಿ, ಕಾಳು ಮೆಣಸು ಉದುರತೊಡಗಿದೆ.

-ಮಹೇಶ್‌, ಕಾಫಿ ಬೆಳೆಗಾರ, ಹಂತೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !