ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಾ ಬಂಧನ ಉಳಿತಾಯವೇ ಉಡುಗೊರೆ

Last Updated 30 ಜುಲೈ 2019, 19:30 IST
ಅಕ್ಷರ ಗಾತ್ರ

ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸ ಅತ್ಯಂತ ಪವಿತ್ರ ತಿಂಗಳು. ಕಾರಣ ಇದೇ ತಿಂಗಳಲ್ಲಿ ವರಮಹಾಲಕ್ಷ್ಮೀ ವ್ರತ, ಶ್ರೀಕೃಷ್ಣ ಜನ್ಮಾಷ್ಟಮಿ, ನಾಗರ ಪಂಚಮಿ ಮತ್ತು ರಕ್ಷಾ ಬಂಧನ ಹಬ್ಬಗಳನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಈ ಹಬ್ಬಗಳನ್ನು ಸಂಭ್ರಮದಿಂದಲೇ ಆಚರಿಸಲಾಗುತ್ತದೆ.

ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಬಾಂಧವ್ಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಇಂತಹ ಬಾಂಧವ್ಯಗಳನ್ನು ವೃದ್ಧಿಸುವ ಹಬ್ಬಗಳಲ್ಲಿ ರಕ್ಷಾ ಬಂಧನವೂ ಒಂದು. ಅಕ್ಕ–ತಂಗಿಯರು, ತಮ್ಮ ಅಥವಾ ಅಣ್ಣನಿಗೆ ರಾಖಿ ಕಟ್ಟಿ ಈ ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಸಹೋದರನ ಬಗ್ಗೆ ಸಹೋದರಿ ತೋರಿಸುವ ಕಾಳಜಿಯ ಪ್ರತೀಕ ಈ ರಾಖಿ.ಇದಕ್ಕೆ ಪ್ರತಿಯಾಗಿ ಸಹೋದರಿಯರಿಗೆ ಏನಾದರೂ ಉಡುಗೊರೆ ಕೊಡುವುದು ವಾಡಿಕೆ. ನಾವು ಚಿಕ್ಕವರಾಗಿದ್ದಾಗ ಗಮನಿಸಿದಂತೆ, ಬಹುತೇಕ ಸಹೋದರರು ರಾಖಿ ಕಟ್ಟಿದ ತಂಗಿ ಅಥವಾ ಅಕ್ಕನಿಗೆ ಹಣ ನೀಡುತ್ತಿದ್ದರು. ಈ ಹಣ ಅವರ ಉಳಿತಾಯಕ್ಕೆ ಜಮೆಯಾಗುತ್ತಿತ್ತು. ಅವರ ಉಳಿತಾಯದ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು.

ಆದರೆ ಕೈಗೆ ಒಂದಿಷ್ಟು ಹಣ ಕೊಟ್ಟು ಸುಮ್ಮನಾಗುವ ಬದಲು ಅವರ ಭವಿಷ್ಯದ ಕುರಿತು ಕಾಳಜಿ ತೋರುವ ಅನಿವಾರ್ಯತೆಯೂ ಅನೇಕ ಸಂದರ್ಭಗಳಲ್ಲಿ ಇರುತ್ತದೆ. ಹಣವಲ್ಲದೇ, ವಸ್ತುಗಳನ್ನು ಉಡುಗೊರೆಯಾಗಿ ಬಯಸುವವರೂ ಇರುತ್ತಾರೆ. ಇವಕ್ಕೆಲ್ಲಾ ಗಮನ ಕೊಡದೆ, ಅವರು ಯಾವುದೇ ಆರ್ಥಿಕ ಸಮಸ್ಯೆಗಳನ್ನು ಎದುರಿಸದಂತೆ ನೆರವಾಗಬೇಕಾಗುತ್ತದೆ. ಇದಕ್ಕೆ ವ್ಯವಸ್ಥಿತ ಹೂಡಿಕೆ ಯೋಜನೆಯು (SIP–Systamatic Investment plan) ಉತ್ತಮ ಪರಿಹಾರವಾಗಿರುತ್ತದೆ.

ಉಳಿತಾಯ ಖಾತೆಯನ್ನು ಆರಂಭಿಸಿ ಒಂದಿಷ್ಟು ಹಣ ಇಟ್ಟು, ಭವಿಷ್ಯಕ್ಕೆ ನೆರವಾಗುತ್ತದೆ ಎಂದು ಯೋಚಿಸುವವರು ಹಲವರು ಇದ್ದಾರೆ. ಆದರೆ ಎಲ್ಲರೂ ಇದೊಂದೇ ಮಾರ್ಗಕ್ಕೆ ಅಂಟಿಕೊಳ್ಳುವುದು ಜಾಣತನವಲ್ಲ. ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಲು ಆಗದವರಿಗೆ ಈ ‘ಎಸ್‌ಐಪಿ’ ಯೋಜನೆಯು ವರದಾನವಾಗಿ ಚಾಲ್ತಿಗೆ ಬಂದಿದೆ. ಇದನ್ನು ಆರಂಭಿಸುವ ವಿಧಾನವೂ ಸುಲಭವಾಗಿದ್ದು, ನಿರ್ದಿಷ್ಟ ಕಂತುಗಳಲ್ಲಿ ಹಣ ಉಳಿತಾಯ ಮಾಡಿಕೊಂಡು ಹೋಗುವ ಅವಕಾಶವನ್ನು ಕಲ್ಪಿಸುವುದರಿಂದ ಜನಪ್ರಿಯವೂ ಆಗುತ್ತಿದೆ.

ತಿಂಗಳಿ ₹ 500 ಅಥವಾ ₹1,000 ಪಾವತಿಸಿ ಈ ಯೋಜನೆ ಆರಂಭಿಸಬಹುದು. ಮುಂದೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಉಳಿತಾಯದ ಪ್ರಮಾಣ ಹೆಚ್ಚಿಸಿಕೊಳ್ಳಬಹುದು. ದೀರ್ಘವಧಿವರೆಗೆ ಕಡಿಮೆ ಮೊತ್ತದ ಕಂತುಗಳಲ್ಲಿ ಹಣ ಉಳಿತಾಯ ಮಾಡುವ ಅವಕಾಶ ಇರುವುದರಿಂದ ಆದಾಯ ಗಳಿಸುವ ಮಾರ್ಗವಾಗಿಯೂ ಈ ಯೋಜನೆ ನೆರವಾಗಲಿದೆ. ದೀರ್ಘಾವಧಿಗೆ ಉಳಿತಾಯ ಮಾಡಿದರೆ, ಅದರ ಮೇಲೆ ಸಿಗುವ ಬಡ್ಡಿ ಪ್ರಮಾಣವೂ ಉತ್ತಮವಾಗಿರುತ್ತದೆ. ಅಂದರೆ ಇಲ್ಲಿ ಸಮಯವೇ ನಿಮಗೇ ಹಣ ಸಂಪಾದಿಸಿಕೊಡುತ್ತದೆ.

ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಕಾರಣ ಷೇರು ಮಾರುಕಟ್ಟೆಯ ಏರಿಳಿತಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು, ಲಾಭ ಸಿಗುವಂತಹ ಷೇರುಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡುವುದು ಸುಲಭದ ವಿಷಯವೇನಲ್ಲ.

ಆದರೆ, ಮ್ಯೂಚುವಲ್‌ ಫಂಡ್‌ಗಳ ಮೇಲಿನ ಹೂಡಿಕೆ ಭಿನ್ನ. ಇಲ್ಲಿ ಫಂಡ್ ಮ್ಯಾನೇಜರ್‌ಗಳು ಸೂಚಿಸಿದ ಕೆಲವು ನಿರ್ದಿಷ್ಟ ಷೇರುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ ಹೇಗೆ ಹೂಡಿಕೆ ಮಾಡಬೇಕು, ಎಲ್ಲಿ ಹೂಡಿಕೆ ಮಾಡಬೇಕು ಎಂಬ ವಿಷಯಗಳ ಬಗ್ಗೆ ಇಲ್ಲಿ ಸುಲಭವಾಗಿ ಮಾಹಿತಿ ಸಿಗುತ್ತದೆ.ಅಲ್ಲದೇ, ಹೂಡಿಕೆ ಮಾಡಿದ ಫಂಡ್‌ಗಳ ಕಾರ್ಯನಿರ್ವಹಣೆಯಿಂದ ನಿರೀಕ್ಷಿತ ಆದಾಯ ಸಿಗದೇ ಇದ್ದಲ್ಲಿ, ಹಣ ಹಿಂಪಡೆಯುವ ಅವಕಾಶವೂ ಇರುತ್ತದೆ. ಹೀಗಾಗಿ ಈ ಯೋಜನೆಯನ್ನು ನಿಮ್ಮ ಸಹೋದರಿಗೆ ಉಡುಗೊರೆಯಾಗಿ ನೀಡುವುದು ಉತ್ತಮ.

ಒಂದು ವೇಳೆ ನಿಮ್ಮ ಸಹೋದರಿಗೆ ಈಗಾಗಲೇ ಎಸ್‌ಐಪಿ ಯೋಜನೆ ಇದ್ದರೂ ಮತ್ತೊಂದು ಎಸ್‌ಐಪಿಯನ್ನು ನೀವೇ ಆರಂಭಿಸಿ ಅವರನ್ನು ಮತ್ತಷ್ಟು ಆರ್ಥಿಕವಾಗಿ ಸಬಲರನ್ನಾಗಿಸಬಹುದು. ಅಲ್ಲದೇ ಹಲವು ಬ್ಯಾಂಕ್‌ಗಳು ಪ್ರತಿ ತಿಂಗಳೂ ಸ್ವಯಂಚಾಲಿತವಾಗಿ ಉಳಿತಾಯಕ್ಕಾಗಿ ಹಣ ಕಡಿತಗೊಳಿಸುವ ವ್ಯವಸ್ಥೆ ಹೊಂದಿರುವುದರಿಂದ ನಿರ್ವಹಣೆ ಕೂಡ ಸುಲಭ.

ರಾಖಿ ಕಟ್ಟಿದಾಗ, ‘ಎಲ್ಲ ವಿಧದಲ್ಲೂ, ಎಲ್ಲ ಸಂದರ್ಭಗಳಲ್ಲೂ ನಿನಗೆ ನೆರವಾಗುತ್ತೇನೆ’ ಎಂದು ಮಾತು ಕೊಟ್ಟಿರುತ್ತೀರಿ. ಹೀಗಾಗಿ ನಿಮ್ಮ ಸಹೋದರಿಗೆ ಆರ್ಥಿಕ ಸಮಸ್ಯೆಗಳು ಕಾಡದಂತೆ ಮತ್ತು ತುರ್ತು ಸಂದರ್ಭಗಳಲ್ಲಿ ಹಣ ಪಡೆಯಲು ನೆರವಾಗುವ ಈ ಎಸ್‌ಐಪಿ ಯೋಜನೆ ಆರಂಭಿಸುವುದು ಸೂಕ್ತ.

(ಲೇಖಕ: ಆ್ಯಕ್ಸಿಸ್ ಮ್ಯೂಚುವಲ್ ಫಂಡ್‌ನ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT