ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನಲ್ಲಿ ರ‍್ಯಾಪಿಡೊ ಪ್ರಧಾನ ಕಚೇರಿ ಉದ್ಘಾಟನೆ

Published : 12 ಸೆಪ್ಟೆಂಬರ್ 2024, 13:04 IST
Last Updated : 12 ಸೆಪ್ಟೆಂಬರ್ 2024, 13:04 IST
ಫಾಲೋ ಮಾಡಿ
Comments

ಬೆಂಗಳೂರು: ‘ಪ್ರಯಾಣಿಕರು ಮತ್ತು ಚಾಲಕರ ಸುರಕ್ಷತೆಯೇ ನಮಗೆ ಮುಖ್ಯ. ಅದಕ್ಕೆ ಬೇಕಾದ ಅಗತ್ಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ರ‍್ಯಾಪಿಡೊ ಸಹ–ಸಂಸ್ಥಾಪಕ ಅರವಿಂದ್‌ ಸಾಕಾ ಹೇಳಿದರು.

ನಗರದ ಬೆಳ್ಳಂದೂರು ಬಳಿ ರ‍್ಯಾಪಿಡೊದ ನೂತನ ಕಾರ್ಪೊರೇಟ್ ಕೇಂದ್ರ ಕಚೇರಿಯನ್ನು ಬುಧವಾರ ಚಾಲಕರಿಂದಲೇ ಉದ್ಘಾಟಿಸಿದ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, 2015ರಲ್ಲಿ ರ‍್ಯಾಪಿಡೊವನ್ನು ಬೆಂಗಳೂರಿನಲ್ಲಿ ಆರಂಭಿಸಿದೆವು. ದ್ವಿಚಕ್ರ ವಾಹನ ಸವಾರಿ ಸೇವೆಯಿಂದ ಆರಂಭವಾದ ಪಯಣ ಇಂದು ಆಟೊ, ಕ್ಯಾಬ್ ಸೇವೆ ಒದಗಿಸುವ ಜೊತೆಗೆ ವಸ್ತುಗಳ ವಿತರಣೆ ಮಾಡುವ ಮಟ್ಟಕ್ಕೆ ಬೆಳೆದಿದ್ದು, ಸೇವೆ ವಿಸ್ತರಣೆಗೊಂಡಿದೆ ಎಂದರು.

ಪ್ರತಿ ತಿಂಗಳು ದೇಶದಾದ್ಯಂತ ಸರಾಸರಿ 20 ಲಕ್ಷ ಚಾಲಕರು ಕಾರ್ಯ ನಿರ್ವಹಿಸುತ್ತಿದ್ದು, ಕೋಟ್ಯಂತರ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದೇವೆ. ಪ್ರಯಾಣಿಕರಿಗಾಗಲೀ ಇಲ್ಲವೇ ವಾಹನ ಚಾಲಕರಿಗಾಗಲೀ (ಕ್ಯಾಪ್ಟನ್‌ಗಳು) ಚಾಲನೆ ವೇಳೆ ಯಾವುದೇ ಅಪಘಾತ ಸಂಭವಿಸಿದರೆ, ಕಂಪನಿಯೇ ಅದರ ಖರ್ಚು ಭರಿಸುತ್ತದೆ ಎಂದರು.

ರ‍್ಯಾಪಿಡೊ ಸೇವೆ ಬಳಸುವ ಪ್ರತಿಯೊಬ್ಬ ಪ್ರಯಾಣಿಕರು ಮತ್ತು ಚಾಲಕರಿಗೆ ₹3 ಲಕ್ಷದವರೆಗೆ ವಿಮೆ ದೊರೆಯುತ್ತದೆ. ಚಾಲಕರ ಕುಟುಂಬಕ್ಕೂ ರಿಯಾಯಿತಿ ದರದಲ್ಲಿ ಆರೋಗ್ಯ ವಿಮೆಯನ್ನು ಸಂಸ್ಥೆಯೇ ಒದಗಿಸುತ್ತಿದೆ ಎಂದು ಹೇಳಿದರು.

ರಾತ್ರಿ ವೇಳೆ ಮಹಿಳೆಯರು ಪ್ರಯಾಣ ಮಾಡುತ್ತಿದ್ದರೆ, ಅವರ ತಮ್ಮ ನಿಗದಿತ ಸ್ಥಳ ತಲುಪುವವರೆಗೂ ವಾಹನದ ಕಣ್ಗಾವಲು ಇಟ್ಟಿರುತ್ತೇವೆ. ಚಾಲಕರು ಬೇರೆ ಮಾರ್ಗಕ್ಕೆ ಹೋದರೆ ಕೂಡಲೇ ಅವರಿಗೆ ಮಾರ್ಗ ಬದಲಾವಣೆ ಕುರಿತು ಎಚ್ಚರಿಕೆಯ ಸಂದೇಶ ಕಳಿಸುತ್ತೇವೆ. ಪ್ರಯಾಣಿಕರಿಗೂ ಸಹ ಕರೆ ಮಾಡಿ ಸುರಕ್ಷಿತವಾಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುತ್ತೇವೆ. ಇದಕ್ಕಾಗಿ ಚಾಲಕರ ನೇಮಕಾತಿ ವೇಳೆ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕವಷ್ಟೇ ಅವರನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ. ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದರೆ,  ಕೆಲಸದಿಂದ ತೆಗೆದು ಹಾಕುತ್ತೇವೆ ಎಂದರು.

ರಾಜ್ಯದಲ್ಲಿ ಬೆಂಗಳೂರು ಮತ್ತು ಮೈಸೂರು ನಮಗೆ ಪ್ರಮುಖ ಮಾರುಕಟ್ಟೆಯಾಗಿವೆ. ಬೆಂಗಳೂರಲ್ಲಿ 4 ಲಕ್ಷ ಚಾಲಕರು ಪ್ರತಿ ತಿಂಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸ ಕಚೇರಿಯು 40,554 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಕಚೇರಿ ಆರಂಭದಿಂದ ಆ್ಯಪ್‌ ಡೆವಲಪ್‌ಮೆಂಟ್‌, ಮಾರುಕಟ್ಟೆ ಚಟುವಟಿಕೆಗಳು, ಯೋಜನೆಗಳ ರೂಪಿಸುವಿಕೆ ಸೇರಿದಂತೆ ಹಲವು ಕಾರ್ಯಕ್ಕೆ ಸಹಕಾರಿಯಾಗಿದೆ. ಪ್ರಸ್ತುತ ಈ ಕಚೇರಿಯಲ್ಲಿ 700ಕ್ಕೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಕಂಪನಿಯ ಬೆಳವಣಿಗೆ ಮತ್ತು ಯಶಸ್ಸಿಗೆ ಚಾಲಕರು ಮತ್ತು ಪ್ರಯಾಣಿಕರೇ ಆಧಾರ ಸ್ತಂಭವಾಗಿದ್ದಾರೆ. ಕಂಪನಿಯು ಗಿಗ್ ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತಿದ್ದು, ಮಹಿಳೆಯರಿಗೆ ಸ್ವತಂತ್ರ ಮತ್ತು ಆರ್ಥಿಕ ಸಬಲರಾಗಲು ಅವಕಾಶ ಕಲ್ಪಿಸುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT