ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಕಡಿತವನ್ನು ಗ್ರಾಹಕರಿಗೆ ವರ್ಗಾಯಿಸಿ: ಆರ್‌ಬಿಐ ಗವರ್ನರ್‌ ಸಲಹೆ

ಬ್ಯಾಂಕ್‌ ಮುಖ್ಯಸ್ಥರ ಜತೆ ಶಕ್ತಿಕಾಂತ್‌ ದಾಸ್‌ ಸಭೆ
Last Updated 22 ಫೆಬ್ರುವರಿ 2019, 12:38 IST
ಅಕ್ಷರ ಗಾತ್ರ

ಮುಂಬೈ: ಅಲ್ಪಾವಧಿ ಬಡ್ಡಿ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಬ್ಯಾಂಕ್‌ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಆರ್‌ಬಿಐ ಬಡ್ಡಿ ದರ ತಗ್ಗಿಸಿರುವಾಗ, ವಾಣಿಜ್ಯ ಬ್ಯಾಂಕ್‌ಗಳು ಗೃಹ, ವಾಹನ, ವೈಯಕ್ತಿಕ ಮತ್ತು ಕಾರ್ಪೊರೇಟ್‌ ವಲಯದ ಸಾಲಗಳ ಮೇಲಿನ ಬಡ್ಡಿ ದರವನ್ನು ಅಷ್ಟೇ ಪ್ರಮಾಣದಲ್ಲಿ ಇಳಿಕೆ ಮಾಡುವ ಅಗತ್ಯ ಇರುವುದನ್ನು ದಾಸ್‌ ಅವರು ಬ್ಯಾಂಕ್‌ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ. ಗುರುವಾರ ಇಲ್ಲಿ ನಡೆದ ಸಭೆಯಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಐಸಿಐಸಿಐ ಬ್ಯಾಂಕ್‌ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಆರ್‌ಬಿಐ ನಿರ್ಧಾರದ ಬೆನ್ನಲ್ಲೆ ಬ್ಯಾಂಕ್‌ಗಳು ವಿವಿಧ ಸಾಲಗಳ ಬಡ್ಡಿ ದರ ತಗ್ಗಿಸುವ ಅಗತ್ಯ ಇದೆ. ಅದರಿಂದ ಗ್ರಾಹಕರಿಗೆ ಪ್ರಯೋಜನ ಆಗಲಿದೆ ಎಂದು ದಾಸ್‌ ಹೇಳಿದ್ದಾರೆ. ಹಣಕಾಸು ನೀತಿಯ ಪರಿಣಾಮಕಾರಿ ಜಾರಿ ಬಗ್ಗೆಯೇ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್‌ಗಳ ಹಿಂದೇಟು: ಆರ್‌ಬಿಐನ ಅಲ್ಪಾವಧಿ ಬಡ್ಡಿ ದರ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಲು ಬ್ಯಾಂಕ್‌ಗಳು ಹಿಂದೇಟು ಹಾಕುವ ಪ್ರವೃತ್ತಿಯನ್ನು ಹಲವಾರು ವರ್ಷಗಳಿಂದ ರೂಢಿಸಿಕೊಂಡು ಬಂದಿವೆ.

ವಸೂಲಾಗದ ಸಾಲದ ಪ್ರಮಾಣದ ಹೊರೆಯಿಂದಾಗಿ ಬ್ಯಾಂಕ್‌ಗಳಿಗೆ ಸಾಲದ ವೆಚ್ಚ ಹೆಚ್ಚುತ್ತಿದೆ. ಇದರಿಂದ ಅವುಗಳ ಲಾಭದ ಪ್ರಮಾಣವೂ ಕುಸಿಯುತ್ತಿದೆ. ಈ ಕಾರಣಕ್ಕೆ ಬಡ್ಡಿ ದರ ಕಡಿತ ಮಾಡಲಾಗುತ್ತಿಲ್ಲ ಎಂದು ಬ್ಯಾಂಕ್‌ಗಳು ಕಾರಣ ನೀಡಿವೆ. ಇತ್ತೀಚಿನ ಶೇ 0.25ರಷ್ಟು ಬಡ್ಡಿ ದರ ಕಡಿತಕ್ಕೆ ಎಸ್‌ಬಿಐ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಆಯ್ದ ಸಾಲಗಳಿಗೆ ಮಾತ್ರ ಶೇ 0.05ರಷ್ಟು ಬಡ್ಡಿ ದರ ಕಡಿಮೆ ಮಾಡಿವೆ.

ಬಡ್ಡಿ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ತಲುಪಿಸುವ ವಿಷಯದಲ್ಲಿ ವಿಳಂಬ ಮಾಡುವುದು ಇಲ್ಲವೇ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರದೆ ಇರುವ ವಿಷಯದಲ್ಲಿ ಬ್ಯಾಂಕ್‌ಗಳು ಮತ್ತು ಆರ್‌ಬಿಐ ಮಧ್ಯೆ ಬಹಳ ವರ್ಷಗಳಿಂದ ಸಂಘರ್ಷ ನಡೆಯುತ್ತಲೇ ಬಂದಿದೆ. ಡಿ. ಸುಬ್ಬರಾವ್‌ ಅವರು ಗವರ್ನರ್‌ ಆಗಿದ್ದ ಸಮಯದಿಂದಲೂ ಇದು ಚಾಲ್ತಿಯಲ್ಲಿ ಇದೆ.

ತನ್ನ ನಿರ್ಧಾರವನ್ನು ಬ್ಯಾಂಕ್‌ಗಳು ಪಾಲಿಸುವಂತೆ ಮಾಡಲು ಆರ್‌ಬಿಐ, ಕಾಲಾಂತರದಲ್ಲಿ ಬಿಪಿಎಲ್‌ಆರ್‌ ಆಧಾರಿತ ಬಡ್ಡಿ ದರ ನಿಗದಿ ಬದಲಿಗೆ ಮೂಲ ದರ (ಬೇಸ್‌ ರೇಟ್‌) ವ್ಯವಸ್ಥೆಯನ್ನು 2013ರಲ್ಲಿ ಕಾರ್ಯರೂಪಕ್ಕೆ ತಂದಿತ್ತು. ಇದನ್ನು ಸಂಪೂರ್ಣವಾಗಿ ಜಾರಿಗೆ ತರುವಲ್ಲಿಯೂ ಬ್ಯಾಂಕ್‌ಗಳು ಸಂಪೂರ್ಣ ಸಹಕಾರ ನೀಡಲಿಲ್ಲ. ಗವರ್ನರ್‌ ರಘುರಾಂ ರಾಜನ್‌ ಅವರು ಮೂಲ ದರ ಬದಲಿಗೆ, ಸಾಲನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ‘ಎಂಸಿಎಲ್‌ಆರ್‌’ ಬಡ್ಡಿ ದರವನ್ನು 2015ರಲ್ಲಿ ಜಾರಿಗೆ ತಂದರು. ಆದಾಗ್ಯೂ, ಬ್ಯಾಂಕ್‌ಗಳು ಬಡ್ಡಿ ದರ ಕಡಿತ ಮಾಡುವಲ್ಲಿ ಹೆಚ್ಚಿನ ಉತ್ಸುಕತೆ ತೋರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT