ನವದೆಹಲಿ: ದತ್ತಾಂಶ ಸಂಗ್ರಹಣೆ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾದ ಕಾರಣ ಜುಲೈ 22 ರಿಂದ ಜಾರಿಗೆ ಬರುವಂತೆ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್ ಕಂಪನಿ ಹೊಸ ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ನೀಡುವುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನಿರ್ದಿಷ್ಟಾವಧಿಗೆ ತಡೆಹಿಡಿದಿದೆ.
ದತ್ತಾಂಶ ಸಂಗ್ರಹಣೆ ವಿಷಯದಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪ್ ಮತ್ತು ಡೈನರ್ಸ್ ಕ್ಲಬ್ ಇಂಟರ್‌ನ್ಯಾಷನಲ್ ನಂತರ ಹೊಸ ಗ್ರಾಹಕರನ್ನು ಪಡೆದುಕೊಳ್ಳುವುದಕ್ಕೆ ಆರ್‌ಬಿಐ ನಿರ್ಬಂಧ ಹೇರಿದ ಮೂರನೇ ಕಂಪನಿ ಮಾಸ್ಟರ್‌ಕಾರ್ಡ್.
ಆರ್‌ಬಿಐ ತೆಗೆದುಕೊಂಡ ನಿಲುವಿನಿಂದ ಕಂಪನಿ ನಿರಾಶೆಗೊಂಡಿದೆ ಎಂದು ಮಾಸ್ಟರ್‌ಕಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ.
‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾಸ್ಟರ್ ಕಾರ್ಡ್ ಏಷ್ಯಾ / ಪೆಸಿಫಿಕ್ ಪ್ರೈವೇಟ್ ಲಿಮಿಟೆಡ್ (ಮಾಸ್ಟರ್ ಕಾರ್ಡ್) ಗೆ ಹೊಸ ದೇಶೀಯ ಗ್ರಾಹಕರನ್ನು (ಡೆಬಿಟ್, ಕ್ರೆಡಿಟ್ ಅಥವಾ ಪ್ರಿಪೇಯ್ಡ್) ಜುಲೈ 22, 2021 ರಿಂದ ತನ್ನ ಕಾರ್ಡ್ ನೆಟ್ವರ್ಕ್‌ಗೆ ಸೇರಿಸಿಕೊಳ್ಳುವುದಕ್ಕೆ ನಿರ್ಬಂಧಗಳನ್ನು ವಿಧಿಸಿದೆ’ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ, ಈ ಮೇಲ್ವಿಚಾರಣಾ ಕ್ರಮವು ದೇಶದಲ್ಲಿ ಅಸ್ತಿತ್ವದಲ್ಲಿರುವ ಮಾಸ್ಟರ್‌ಕಾರ್ಡ್‌ನ ಗ್ರಾಹಕರ ಸೇವೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಮಾಸ್ಟರ್‌ಕಾರ್ಡ್ ಮೇಲಿನ ನಿಷೇಧವನ್ನು ಪ್ರಕಟಿಸಿದ ಆರ್‌ಬಿಐ, ‘ಸಾಕಷ್ಟು ಸಮಯ ಕಳೆದುಹೋಗಿದ್ದು, ಕಂಪನಿಗೆ ಹಲವು ಅವಕಾಶಗಳನ್ನು ನೀಡಲಾಗಿದ್ದರೂ, ಘಟಕವು ಪಾವತಿ ವ್ಯವಸ್ಥೆಯ ದತ್ತಾಂಶವನ್ನು ಸಂಗ್ರಹಿಸುವ ನಿರ್ದೇಶನಗಳಿಗೆ ಅನುಗುಣವಾಗಿಲ್ಲ ಎಂದು ಕಂಡುಬಂದಿರುವುದಾಗಿ’ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.