ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿಯಾದರೂ ಉತ್ತಮ ಪ್ರೊಜೆಕ್ಟರ್...

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ಮನೆಯ ಬಳಕೆಗೆ ಅಥವಾ ವ್ಯವಹಾರದ ಬಳಕೆಗೆ ಅಂದರೆ ಎಂಟರ್‌ಟೇನ್‌ಮೆಂಟ್‌ ಅಥವಾ ಬ್ಯುಸಿನೆಸ್ ಪ್ರೊಜೆಕ್ಟರ್ ಕೊಳ್ಳುವ ಮುನ್ನ ಏನೇನೆಲ್ಲಾ ಗಮನಿಸಬೇಕು ಎಂಬುದನ್ನು ಗ್ಯಾಜೆಟ್ ಲೋಕದ ಮಾರ್ಚ್ 12, 2015 ರ ಸಂಚಿಕೆಯಲ್ಲಿ ವಿವರಿಸಲಾಗಿತ್ತು. ಪ್ರೊಜೆಕ್ಟರ್ ಬೇಕು ಎಂದು ತೀರ್ಮಾನಿಸಿದ ನಂತರ ಎಂತಹ ಪ್ರೊಜೆಕ್ಟರ್ ಎಂಬುದನ್ನು ತೀರ್ಮಾನಿಸಲು ಆ ಲೇಖನ ಸಹಾಯಕಾರಿಯಾಗಬಹುದು. ಎಪ್ಸನ್ ಕಂಪನಿಯ ಇಬಿ-1776ಡಬ್ಲ್ಯು (Epson PowerLite EB-1776W) ಪ್ರೊಜೆಕ್ಟರ್ ಬಗ್ಗೆ ಮಾರ್ಚ್ 19, 2015 ರ ಸಂಚಿಕೆಯಲ್ಲಿ ವಿವರಿಸಲಾಗಿತ್ತು. ಎಪ್ಸನ್ ಇಎಚ್-ಟಿಡಬ್ಲ್ಯು 6700 ಪ್ರೊಜೆಕ್ಟರ್ (Epson EH-TW6700 Projector) ನಮ್ಮ ಈ ವಾರದ ಗ್ಯಾಜೆಟ್.

ಇದು ಮನೆ ಬಳಕೆಗಾಗಿ ಇರುವ ಪ್ರೊಜೆಕ್ಟರ್ ಎಂದು ಎಪ್ಸನ್ ಕಂಪನಿಯವರು ಮಾರಾಟ ಮಾಡುತ್ತಿದ್ದಾರೆ. ಈ ಪ್ರೊಜೆಕ್ಟರ್ ಮೂರು ಆಯಾಮದಲ್ಲಿ ಪ್ರೊಜೆಕ್ಟ್ ಮಾಡುವ ಸೌಲಭ್ಯವನ್ನು ಒಳಗೊಂಡಿದೆ. ಅದನ್ನು ಬಳಸಬೇಕಾದರೆ ಕಂಪನಿಯವರೇ ನೀಡುವ ವಿಶೇಷ ಕನ್ನಡಕ ಬಳಸಬೇಕು. ನನಗೆ ವಿಮರ್ಶೆಗೆ ಬಂದ ಮಾದರಿಯ ಜೊತೆ ಆ ಕನ್ನಡಕವನ್ನು ನೀಡಿರಲಿಲ್ಲ. ಆದುದರಿಂದ ಈ ಮೂರು ಆಯಾಮದ ಪ್ರೊಜೆಕ್ಷನ್‌ ಗುಣಮಟ್ಟ ಹೇಗಿದೆ ಎಂದು ತಿಳಿದಿಲ್ಲ.

ಇದು ಮನೆಬಳಕೆಗೆ ಎಂದು ಹೇಳಿಕೊಂಡರೂ ಇದೇನೂ ಸಣ್ಣ ಅಥವಾ ಹಗುರದ ಪ್ರೊಜೆಕ್ಟರ್ ಅಲ್ಲ. ಇದನ್ನು ಅತ್ತಿಂದಿತ್ತ ಕೊಂಡೊಯ್ಯುವುದು ಸುಲಭವಲ್ಲ. ಅಂದರೆ ನೀವು ಊರೂರು ತಿರುಗಿ ಪ್ರಸೆಂಟೇಶನ್ ಕೊಡುವವರಾದರೆ ನಿಮಗೆ ಇದು ಸೂಕ್ತವಲ್ಲ. ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ಮುಂಭಾಗವನ್ನು ಎತ್ತರಿಸಲು ಸೌಲಭ್ಯವಿದೆ. ಇದು ಸಾಮಾನ್ಯವಾಗಿ ಎಲ್ಲ ಪ್ರೊಜೆಕ್ಟರ್‌ಗಳಲ್ಲಿ ಇರುವಂತಹುದೇ. ತಾರಸಿಗೆ ಜೋಡಿಸಲೂ ಬಹುದು. ಆದರೆ ಅದಕ್ಕಾಗಿ ಕೆಲವು ಅಗತ್ಯ ಸಲಕರಣೆಗಳನ್ನು ಪ್ರತ್ಯೇಕವಾಗಿಕೊಳ್ಳಬೇಕು. ಇದರಲ್ಲಿರುವ ಒಂದು ವಿಶೇಷ ಸವಲತ್ತೆಂದರೆ ಇದರ ಲೆನ್ಸ್ ಅನ್ನು ಸ್ವಲ್ಪ ಎಡ-ಬಲ ಅಥವಾ ಮೇಲೆ-ಕೆಳಗೆ ಸರಿಸಬಹುದು. ಇದು ನಿಜಕ್ಕೂ ತುಂಬ ಉಪಯುಕ್ತ ಸೌಲಭ್ಯ. ಪ್ರೊಜೆಕ್ಟರನ್ನು ಮೇಜಿನ ಮೇಲೆ ಎಡ-ಬಲ ಸರಿಸಿ ಅನುಭವವಿದ್ದವರಿಗೆ ಇದು ವೇದ್ಯವಾಗಬಹುದು.

ಈ ಪ್ರೊಜೆಕ್ಟರ್‌ನ ಪ್ರಖರತೆ 3000 ಲುಮೆನ್ಸ್. ಇದೇನೂ ಕಡಿಮೆ ಪ್ರಖರತೆ ಅಲ್ಲ. ಸಾಮಾನ್ಯ ಮಟ್ಟಿನ ಬೆಳಕಿರುವ ಕೋಣೆಯಲ್ಲಿ ಯಾವ ದೀಪಗಳನ್ನೂ ಆರಿಸದೆ ಪ್ರೆಸೆಂಟೇಶನ್ ಮಾಡಬಹುದು. ಹೊರಗಡೆಯೂ ಇದನ್ನು ಬಳಸಬಹುದು. ಇದರಲ್ಲಿ ನೀಡಿರುವ ಸ್ಪೀಕರ್ ಶಕ್ತಿಯದಾಗಿದ್ದು ಸ್ಟೀರಿಯೋ ಸ್ಪೀಕರ್ ಆಗಿದೆ. ಸ್ಪೀಕರಿನ ಗುಣಮಟ್ಟ ಚೆನ್ನಾಗಿಯೇ ಇದೆ. ಲ್ಯಾಪ್‌ಟಾಪ್‌ನಿಂದ ಪ್ರೊಜೆಕ್ಟರಿಗೆ ಎಚ್‌ಡಿಎಂಐ ಕೇಬಲ್ ಮೂಲಕ ಜೋಡಿಸಿದರೆ ಇದರ ಸ್ಪೀಕರ್ ಮೂಲಕ ಧ್ವನಿಯನ್ನು ಆಲಿಸಬಹುದು. ಉತ್ತಮ ಆಡಿಯೊ ಇರುವ ಯಾವುದಾದರೂ ಸಿನಿಮಾ ವೀಕ್ಷಿಸಿದಾಗ ಈ ಸ್ಪೀಕರುಗಳ ಗುಣಮಟ್ಟದ ಅನುಭವವಾಗುತ್ತದೆ.

ಪ್ರೊಜೆಕ್ಟರನ್ನು ಗಣಕಕ್ಕೆ ಅಥವಾ ಇನ್ಯಾವುದಾದರೂ ಆಕರಕ್ಕೆ ಸಂಪರ್ಕಿಸಲು ಇದರಲ್ಲಿ ಹಲವು ವಿಧಾನಗಳಿವೆ. ಹಳೆಯ ಲ್ಯಾಪ್‌ಟಾಪ್‌ಗೆ ವಿಜಿಎ, ಆಧುನಿಕ ವಿಧಾನದಲ್ಲಿ ಜೋಡಿಸಲು ಯುಎಸ್ಬಿ ಮತ್ತು ಎಚ್‌ಡಿಎಂಐ ಕಿಂಡಿಗಳಿವೆ. ಇತ್ತೀಚೆಗೆ ಎಲ್ಲ ಲ್ಯಾಪ್‌ಟಾಪ್‌ಗಳು 16:9 ರ ಅನುಪಾತದ ರೆಸೊಲೂಶನ್ ಹೊಂದಿರುತ್ತವೆ. ಹೈಡೆಫಿನಿಶನ್ ವೀಡಿಯೊಗಳೂ ಸಾಮಾನ್ಯವಾಗುತ್ತಿವೆ. ಅವುಗಳನ್ನು ಎಚ್‌ಡಿಎಂಐ ಕೇಬಲ್ ಅನ್ನು ಬಳಸಿ ಪ್ರೊಜೆಕ್ಟರಿನ ಎಚ್‌ಡಿಎಂಐ ಕಿಂಡಿಗೆ ಜೋಡಿಸಿ ವೀಕ್ಷಿಸಬಹುದು. ವೀಡಿಯೊ ಮಾತ್ರವಲ್ಲ, ಲ್ಯಾಪ್‌ಟಾಪ್‌ನ ಪರದೆಯನ್ನು 16:9ರ ಅನುಪಾತದಲ್ಲೇ ವೀಕ್ಷಿಸಬಹುದು. ಇದರಲ್ಲಿ ಯುಎಸ್ಬಿ ಕಿಂಡಿಯೂ ಇದೆ. ಅದರ ಮೂಲಕವೂ ಸಂಪರ್ಕಿಸಬಹುದು. ವೈಫೈ ಕೂಡ ಇದೆ. ಲ್ಯಾಪ್‌ಟಾಪ್‌ಗೆ ಅಥವಾ ಕಂಪನಿಯ ಗಣಕ ಜಾಲಕ್ಕೆ ವೈಫೈ ಮೂಲಕ ಜೋಡಿಸಬಹುದು. ಕಚೇರಿಯಲ್ಲಿ ಹಲವು ಜನ ಒಟ್ಟಿಗೆ ಕುಳಿತು ಸಭೆ ನಡೆಸುತ್ತಿರುವಾಗ ಒಬ್ಬರ ನಂತರ ಇನ್ನೊಬ್ಬರ ಲ್ಯಾಪ್‌ಟಾಪ್‌ಗೆ ಜೋಡಿಸಿ ವೀಕ್ಷಿಸಬೇಕಾದರೆ ಈ ವೈಫೈ ಸಂಪರ್ಕ ಉಪಯೋಗಿಯಾಗುತ್ತದೆ. ಕೇಬಲ್ ಹಾಕಿ ತೆಗೆದು ಮಾಡುವ ತಾಪತ್ರಯವಿಲ್ಲ.

ಇದರಲ್ಲಿರುವ ಯುಎಸ್ಬಿ ಕಿಂಡಿಗೆ ಯುಎಸ್ಬಿ ಡ್ರೈವ್ ಅನ್ನು ನೇರವಾಗಿ ಚುಚ್ಚಿ ಪ್ರಸೆಂಟೇಶನ್ ಮಾಡಬಹುದು. ಇದು ನಿಜಕ್ಕೂ ಉತ್ತಮ ಸೌಲಭ್ಯ. ಆದರೆ ಯುಎಸ್ಬಿ ಡ್ರೈವ್‌ನಲ್ಲಿ ವೀಡಿಯೊ ಅಥವಾ ಚಲನಚಿತ್ರ ಇದ್ದರೆ ಅದನ್ನು ಪ್ಲೇ ಮಾಡಲು ಆಗುವುದಿಲ್ಲ.

ಎಪ್ಸನ್ ಕಂಪನಿಯವರೇ ಆಪಲ್ ಸ್ಟೋರ್ ಮತ್ತು ಗೂಗ್ಲ್ ಪ್ಲೇ ಸ್ಟೋರಿನಲ್ಲಿ ಒಂದು ಕಿರುತಂತ್ರಾಂಶ ನೀಡಿದ್ದಾರೆ. ಅದನ್ನು ನಿಮ್ಮ ಐಫೋನ್ ಅಥವಾ ಆಂಡ್ರೋಯಿಡ್ ಫೋನಿಗೆ ಹಾಕಿಕೊಂಡರೆ ಫೋನನ್ನು ವೈಫೈ ಮೂಲಕ ಪ್ರೊಜೆಕ್ಟರಿಗೆ ಜೋಡಿಸಬಹುದು. ಆಗ ಪ್ರೊಜೆಕ್ಟರನ್ನು ನಿಮ್ಮ ಫೋನಿನಿಂದಲೇ ನಿಯಂತ್ರಿಸಬಹುದು. ಆದರೆ ಫೋನಿನಿಂದ ಪ್ರೆಸೆಂಟೇಶನ್ ಮಾಡಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ಸ್ವಲ್ಪ ದುಬಾರಿ ಅನ್ನಿಸಿದರೂ ಉತ್ತಮ ಪ್ರೊಜೆಕ್ಟರ್ ಎಂದು ಹೇಳಬಹುದು. ಮೂರು ಆಯಾಮದ ಸಿನಿಮಾ ವೀಕ್ಷಣೆ ಮಾಡುವುದಿಲ್ಲವಾದಲ್ಲಿ ಇದು ದುಬಾರಿಯೇ.

*

ವಾರದ ಆಪ್ (app): ಮಾತನಾಡುವ ಟೈಮರ್ (Talking Timer)
ನೀವು ಹಲ್ವ ಕಾಯಿಸುತ್ತಿದ್ದೀರಿ ಎಂದುಕೊಳ್ಳೋಣ. ಅದು ತುಂಬ ಸಮಯ ತೆಗೆದುಕೊಳ್ಳುವ ಕೆಲಸ. ಪ್ರತಿ ಐದು ನಿಮಿಷಕ್ಕೊಮ್ಮೆ ಅದನ್ನು ಮಗುಚಬೇಕು. ಅದನ್ನು ನಿಮಗೆ ಜ್ಞಾಪಿಸುವವರು ಯಾರು? ಅದಕ್ಕಾಗಿ ಮಾತನಾಡುವ ಟೈಮರ್ ಲಭ್ಯವಿದೆ. ಇದನ್ನು ನಿಮ್ಮ ಆಂಡ್ರೋಯಿಡ್ ಫೋನಿನಲ್ಲಿ ಹಾಕಿಕೊಳ್ಳಿ. ಎಷ್ಟು ಸಮಯದ ತನಕ ಪ್ರತಿ ಐದು ನಿಮಿಷಕ್ಕೊಮ್ಮೆ ಎಚ್ಚರಿಸಬೇಕು ಎಂದು ಆಯ್ಕೆ ಮಾಡಿಕೊಳ್ಳಿ. ನಂತರ ಅದು ನಿರ್ಧರಿತ ಸಮಯದಲ್ಲಿ ಮಾತನಾಡುವ ಮೂಲಕ ನಿಮ್ಮನ್ನು ಎಚ್ಚರಿಸುತ್ತದೆ. ಈ ಕಿರುತಂತ್ರಾಂಶ (ಆಪ್) ಬೇಕಿದ್ದಲ್ಲಿ ನೀವು ಗೂಗ್ಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Talking Timer ಎಂದು ಹುಡುಕಬೇಕು ಅಥವಾ http://bit.ly/gadgetloka328 ತಾಲತಾಣಕ್ಕೆ ಭೇಟಿ ನೀಡಬೇಕು. ಇದೇ ಮಾದರಿಯಲ್ಲಿ ಕೆಲಸ ಮಾಡುವ ಇನ್ನೂ ಹಲವಾರು ಕಿರುತಂತ್ರಾಂಶಗಳು ಲಭ್ಯವಿವೆ.

ಗ್ಯಾಜೆಟ್ ಪದ: Data = ದತ್ತಾಂಶ
ಮಾಹಿತಿಯ ತುಣುಕು. Data ಎನ್ನುವುದು ಲ್ಯಾಟಿನ್ ಪದ datum ಎನ್ನುವುದರ ಬಹುವಚನ. ಆದರೂ ಬಳಕೆಯಲ್ಲಿ ಇದು ಏಕವಚನ ಮತ್ತು ಬಹುವಚನ ಎರಡಕ್ಕೂ ಅನ್ವಯವಾಗುತ್ತಿದೆ.

*
ಗ್ಯಾಜೆಟ್ ತರ್ಲೆ
ಹೆಂಗಸರಿಗೆ ಒಲೆಯ ಮೇಲೆ ಹಾಲಿಟ್ಟು ಅದು ಎಷ್ಟು ಸಮಯದಲ್ಲಿ ಉಕ್ಕತ್ತದೆ ಎಂದು ಖಚಿತವಾಗಿ ಗೊತ್ತಿರುತ್ತದೆ. ನಮಗೆ ಕಂಪ್ಯೂಟರ್ನ ಆನ್ ಬಟನ್ ಒತ್ತಿ ಎಷ್ಟು ಸಮಯದಲ್ಲಿ ಪಾಸ್ವರ್ಡ್ಬಾಕ್ಸ್ ಬರುತ್ತದೆ ಎಂದು ನಿಖರವಾಗಿ ಗೊತ್ತಿರುತ್ತದೆ!

*
ಗ್ಯಾಜೆಟ್ ಸಲಹೆ
ಅಕ್ಷಯ ಅವರ ಪ್ರಶ್ನೆ:
4K ವಿಡಿಯೋ ತುಣುಕುಗಳನ್ನು ಯಾವ ಜಾಲತಾಣಗಳಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಅವನ್ನು ವಿಕ್ಷೀಸುವ ಬಗೆ ಹೇಗೆ?
ಉ: www.videvo.net ಜಾಲತಾಣದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು VLC Player ಮೂಲಕ ಪ್ಲೇ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT