ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಗ್ರಾಹಕರ ವಿಶ್ವಾಸ; ಭಾರತೀಯ ರಿಸರ್ವ್‌ ಬ್ಯಾಂಕ್‌ ಸಮೀಕ್ಷೆ

Last Updated 5 ಅಕ್ಟೋಬರ್ 2019, 20:01 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಳೆದಿರುವ ಧೋರಣೆ ಕುರಿತ ಗ್ರಾಹಕರ ವಿಶ್ವಾಸವು ಆರು ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ.

ಹಣಕಾಸು ಪರಿಸ್ಥಿತಿ, ಉದ್ಯೋಗ ಅವಕಾಶ, ಬೆಲೆ ಮಟ್ಟ, ಆದಾಯ ಮತ್ತು ವೆಚ್ಚದ ಮೇಲೆ ಪ್ರಭಾವ ಬೀರುವ ಸರ್ಕಾರ ಕೈಗೊಳ್ಳುವ ನಿರ್ಧಾರಗಳ ಕುರಿತು ಗ್ರಾಹಕರ ವಿಶ್ವಾಸವು ಸೆಪ್ಟೆಂಬರ್‌ ತಿಂಗಳಲ್ಲಿ ಕುಸಿದಿರುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿಯಲ್ಲಿ ದೃಢಪಟ್ಟಿದೆ. ಐದು ಆರ್ಥಿಕ ಮಾನದಂಡಗಳ ಕುರಿತು ಸರ್ಕಾರ ತಳೆದಿರುವ ನಿಲುವಿನ ಬಗ್ಗೆ ಗ್ರಾಹಕರಲ್ಲಿ ನಿರಾಶೆ ಮನೆ ಮಾಡಿದೆ.

ಕೇಂದ್ರೀಯ ಬ್ಯಾಂಕ್‌, ದೇಶದ 13 ನಗರಗಳಲ್ಲಿನ 5 ಸಾವಿರ ಗ್ರಾಹಕರಿಂದ ಅಭಿಪ್ರಾಯ ಸಂಗ್ರಹಿಸಿ ನಡೆಸಿದ ಗ್ರಾಹಕರ ವಿಶ್ವಾಸ ಸಮೀಕ್ಷೆಯಲ್ಲಿ ಈ ಸಂಗತಿ ದಾಖಲಾಗಿದೆ.

‘ಸಿಸಿಐ’ 100ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದು ಗ್ರಾಹಕರಲ್ಲಿನ ಆಶಾವಾದವನ್ನು ಪ್ರತಿಫಲಿಸುತ್ತದೆ. ಸೆಪ್ಟೆಂಬರ್‌ ತಿಂಗಳಲ್ಲಿ ಇದು 89.4ರಷ್ಟು ದಾಖಲಾಗಿದೆ. ಇದು ನಿರಾಶೆಯ ಪ್ರತೀಕವಾಗಿದೆ. ಈ ಹಿಂದೆ 2013ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಗ್ರಾಹಕರ ವಿಶ್ವಾಸ ಇದೇ ಮಟ್ಟದಲ್ಲಿತ್ತು.

ನರೇಂದ್ರ ಮೋದಿ ನೇತೃತ್ವದಲ್ಲಿನ ಸರ್ಕಾರವು ಕೇಂದ್ರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬರುವ ಮೊದಲು ಗ್ರಾಹಕರಲ್ಲಿ ನಿರಾಶೆ ಮನೆ ಮಾಡಿತ್ತು. ಮೋದಿ ಸರ್ಕಾರದ ಅಧಿಕಾರಾವಧಿಯಲ್ಲಿ 2016ರವರೆಗೆ ಗ್ರಾಹಕರು ಆಶಾವಾದಿಗಳಾಗಿದ್ದರು.

ನೋಟು ರದ್ದತಿ ನಂತರದ ದಿನಗಳಲ್ಲಿ ಗ್ರಾಹಕರಲ್ಲಿ ನಿರಾಶೆ ಮನೆ ಮಾಡಿತ್ತು. ನಂತರದ ದಿನಗಳಲ್ಲೂ ಇದೇ ಪರಿಸ್ಥಿತಿ ಮುಂದುವರೆದಿತ್ತು. 2019ರ ಲೋಕಸಭಾ ಚುನಾವಣೆ ಮುಂಚೆ ಗ್ರಾಹಕರಲ್ಲಿ ಮತ್ತೆ ಆಶಾವಾದ ಗರಿಗೆದರಿತ್ತು. ಆಗ ‘ಸಿಸಿಐ’ 104.6ರಷ್ಟಿತ್ತು. ಈ ಬದಲಾವಣೆ ತಾತ್ಕಾಲಿಕವಾಗಿತ್ತು. ಚುನಾವಣೆ ನಂತರದ ದಿನಗಳಲ್ಲಿ ಗ್ರಾಹಕರ ವಿಶ್ವಾಸ ಕುಸಿಯುತ್ತಲೇ ಸಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿನ ವಿಶ್ವಾಸವು ನೋಟು ರದ್ದತಿ ನಂತರದ ಪರಿಸ್ಥಿತಿಗಿಂತ ಕೆಳಮಟ್ಟದಲ್ಲಿ ಇದೆ.

ಭವಿಷ್ಯದ ನಿರೀಕ್ಷೆಗಳ ಸೂಚ್ಯಂಕವು ಜುಲೈ ತಿಂಗಳಲ್ಲಿ 124.8 ರಷ್ಟಿತ್ತು. ಸೆಪ್ಟೆಂಬರ್‌ನಲ್ಲಿ 118ಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT