ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 5ನೆ ಬಾರಿಗೆ ರೆಪೊ ದರ ತಗ್ಗಿಸಿದ ಆರ್‌ಬಿಐ; ಗೃಹ, ವಾಹನ ಸಾಲ ಅಗ್ಗ

Last Updated 4 ಅಕ್ಟೋಬರ್ 2019, 20:33 IST
ಅಕ್ಷರ ಗಾತ್ರ

ಮುಂಬೈ: ರೆಪೊ ದರ ಆಧರಿಸಿರುವ ಗೃಹ, ವಾಹನ ಖರೀದಿ, ವೈಯಕ್ತಿಕ ಮತ್ತಿತರ ಸಾಲಗಳ ಬಡ್ಡಿ ದರಗಳು ಇನ್ನು ಮುಂದೆ ಇನ್ನಷ್ಟು ಅಗ್ಗವಾಗಲಿವೆ.

ಆರ್ಥಿಕತೆಯು ತೀವ್ರವಾಗಿ ಕುಸಿದಿರುವುದನ್ನು ಒಪ್ಪಿಕೊಂಡಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌, ಚೇತರಿಕೆ ನೀಡಲು ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ದಾಖಲೆಯ ಸತತ ಐದನೇ ಬಾರಿಗೆ ಕಡಿತಗೊಳಿಸಿದೆ. ಹಬ್ಬಗಳ ದಿನಗಳಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆ ಹಾಗೂ ಬಳಕೆ ಹೆಚ್ಚಿಸಲು ದೀಪಾವಳಿ ಕೊಡುಗೆ ರೂಪದಲ್ಲಿ ಈ ನಿರ್ಧಾರ ಕೈಗೊಂಡಿದೆ. ಗೃಹ ಮತ್ತು ವಾಹನ ಖರೀದಿ ಸಾಲದ ವೆಚ್ಚ ತಗ್ಗಿಸುವುದು ಅದರ ಉದ್ದೇಶವಾಗಿದೆ.

ಬದಲಾಗುವ ಬಡ್ಡಿ ದರ ಆಧರಿಸಿದ ಸಾಲಗಳು ಇನ್ನು ಮುಂದೆ ರೆಪೊ ದರ ಆಧರಿಸಿರುವುದರಿಂದ ಹೊಸ ಸಾಲಗಾರರಿಗೆ ಬಡ್ಡಿ ಹೊರೆ ಕಡಿಮೆಯಾಗಿರಲಿದೆ. ಆದರೆ, ಸ್ಥಿರ ಠೇವಣಿ ಮೇಲಿನ ಬಡ್ಡಿ ದರವೂ ಕಡಿಮೆಯಾಗಲಿವೆ.

ಆರ್ಥಿಕ ವೃದ್ಧಿ ದರವು (ಜಿಡಿಪಿ) ಆರು ವರ್ಷಗಳ ಹಿಂದಿನ ಮಟ್ಟವಾದ ಶೇ 5ರಷ್ಟಕ್ಕೆ ಕುಸಿದಿರುವುದರಿಂದ ಖರೀದಿ ಉತ್ಸಾಹ ಹೆಚ್ಚಿಸಲು ಕೇಂದ್ರೀಯ ಬ್ಯಾಂಕ್‌ ಈ ನಿರ್ಧಾರಕ್ಕೆ ಬಂದಿದೆ. ಬ್ಯಾಂಕ್‌ಗಳಿಗೆ ಆರ್‌ಬಿಐ ಸಾಲ ನೀಡುವ ಬಡ್ಡಿ ದರವಾದ ರೆಪೊವನ್ನು ಶೇ 0.25ರಷ್ಟು ಕಡಿಮೆ ಮಾಡಲಾಗಿದೆ. ಶೇ 5.15ರಷ್ಟು ರೆಪೊ ದರವು 10 ವರ್ಷಗಳಲ್ಲಿನ ಕಡಿಮೆ ಮಟ್ಟವಾಗಿದೆ. 2010ರ ಮಾರ್ಚ್‌ನಲ್ಲಿನ ರೆಪೊ ದರ ಶೇ 5ರಷ್ಟಿತ್ತು. ರಿವರ್ಸ್‌ ರೆಪೊ ದರವು ಈಗ ಶೇ 4.9ಕ್ಕೆ ಇಳಿದಿದೆ.

2019ರಲ್ಲಿನ ಇದುವರೆಗಿನ 5ನೆ ದರ ಕಡಿತ ಇದಾಗಿದೆ. ಈ ವರ್ಷದಲ್ಲಿನ ಇದುವರೆಗಿನ ಒಟ್ಟಾರೆ ಕಡಿತವು ಶೇ 1.35ರಷ್ಟಾಗಿದೆ.

‘ಆರ್ಥಿಕ ಬೆಳವಣಿಗೆಗೆ ಅಗತ್ಯ ಇರುವವರೆಗೂ ಬಡ್ಡಿ ದರ ಕಡಿತಕ್ಕೆ ಬದ್ಧವಾಗಿರುವುದಕ್ಕೆ ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧರಿಸಿದೆ. ಹಣದುಬ್ಬರವು ನಿಗದಿತ ಗುರಿಯ ಮಿತಿಯ (ಶೇ 4) ಒಳಗೇ (ಶೇ 3.4) ಇರಲಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಹೇಳಿದ್ದಾರೆ.

ಜೂನ್‌ ತ್ರೈಮಾಸಿಕದಲ್ಲಿನ ವೃದ್ಧಿ ದರವು ಶೇ 5ಕ್ಕೆ ಕುಸಿದಿತ್ತು. ಉಪಭೋಗದಲ್ಲಿನ ಕುಸಿತ, ಹೊಸ ಬಂಡವಾಳ ಹೂಡಿಕೆ ಇಲ್ಲದಿರುವುದು ಮತ್ತು ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಯು ಇದಕ್ಕೆ ಕಾರಣವಾಗಿತ್ತು. ಡಿಸೆಂಬರ್‌ 5ಕ್ಕೆ ಮುಂದಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಯಲಿದೆ.

ಪರಿಷ್ಕೃತ ವೃದ್ಧಿ ದರ

ತನ್ನ ಹಣಕಾಸು ನೀತಿಯ ನಾಲ್ಕನೆ ದ್ವೈಮಾಸಿಕ ಪರಾಮರ್ಶೆಯಲ್ಲಿ ಆರ್‌ಬಿಐ, ಆರ್ಥಿಕ ವೃದ್ಧಿ ದರದ ಅಂದಾಜನ್ನು ಪರಿಷ್ಕರಿಸಿ ಗಮನಾರ್ಹವಾಗಿ ತಗ್ಗಿಸಿದೆ. 2019–20ನೆ ಹಣಕಾಸು ವರ್ಷದಲ್ಲಿ ಈ ಮೊದಲು ಅಂದಾಜಿಸಿದ್ದ ಶೇ 6.9ರಷ್ಟು ವೃದ್ಧಿ ದರವನ್ನು ಈಗ ಶೇ 6.1ಕ್ಕೆ ತಗ್ಗಿಸಿದೆ.

ಹಣದುಬ್ಬರ ಅಂದಾಜು ಶೇ 3.4ರಷ್ಟು

ದ್ವಿತೀಯ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇ 3.4ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ಆರ್‌ಬಿಐ ನಿಗದಿಪಡಿಸಿರುವ ಶೇ 4ರ ಮಿತಿ ಒಳಗೆ ಇರಲಿದೆ. ಮುಂದಿನ ಹಣಕಾಸು ವರ್ಷದ ಪೂರ್ವಾರ್ಧದವರೆಗೂ ಹಿತಕರ ಮಟ್ಟದಲ್ಲಿಯೇ ಇರಲಿದೆ. ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಇದು ಶೇ 3.5 ರಿಂದ ಶೇ 3.7ರಷ್ಟು ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT