ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಸ್ವಾಮಿಗೆ ಟಿಕೆಟ್ ನೀಡದಂತೆ ಆಗ್ರಹ

ಸ್ಪರ್ಧೆಗೆ ಅವಕಾಶ ನೀಡಿದರೆ ಚುನಾವಣೆಯಲ್ಲಿ ಫಲಿತಾಂಶದ ಮೇಲೆ ಗಂಭೀರ ಪರಿಣಾಮ
Last Updated 10 ಮಾರ್ಚ್ 2018, 5:28 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿರುವ ಮಾಜಿ ಶಾಸಕ ವೆಂಕಟಸ್ವಾಮಿಗೆ ಟಿಕೆಟ್ ನೀಡಬಾರದು’ ಎಂದು ಕೆಪಿಸಿಸಿ ಸದಸ್ಯ ಭುವನಹಳ್ಳಿ ಮುನಿರಾಜು ವರಿಷ್ಠರನ್ನು ಒತ್ತಾಯಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿಯ ನಾಲ್ಕು ಸದಸ್ಯರು ಮತ್ತು ತಾಲ್ಲೂಕು ಪಂಚಾಯಿತಿಯ ಪಕ್ಷದ ಎಲ್ಲ ಸದಸ್ಯರು ಈಗಾಗಲೇ ಸ್ಥಳೀಯ ಕ್ಷೇತ್ರದ ಸಂಸದ ಎಂ.ವೀರಪ್ಪ ಮೊಯಿಲಿಯರನ್ನು ಭೇಟಿ ಮಾಡಿದ್ದಾರೆ. ಪಕ್ಷದಲ್ಲಿನ ಕೆಲವು ಅಂತರಿಕ ಸಮಸ್ಯೆಗಳು ಮತ್ತು ವೆಂಕಟಸ್ವಾಮಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಫಲಿತಾಂಶದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಸಮಗ್ರವಾಗಿ ವಿವರಿಸಲಾಗಿದೆ. ವೆಂಕಟಸ್ವಾಮಿ ಹೊರತು ಪಡಿಸಿ ಯಾರಿಗೆ ಟಿಕೆಟ್ ನೀಡಿದರೂ ಅಭ್ಯಂತರವಿಲ್ಲ ಎಂದರು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶೇಕಡವಾರು ಅಭಿಪ್ರಾಯ ಇದೇ ಆಗಿದೆ. ಈಗಾಗಲೇ ಎರಡು ಬಾರಿ ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದೆ. ಪ್ರಸ್ತುತ ಐದಾರು ಅರ್ಹ ಅಕಾಂಕ್ಷಿತ ಅಭ್ಯರ್ಥಿಗಳಿದ್ದಾರೆ. 2019 ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಂ.ವೀರಪ್ಪ ಮೊಯಿಲಿ ಅವರು ಸೂಕ್ತ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು. ಆಗ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶೇ100 ರಷ್ಟು ಶ್ರಮಿಸಲಿದ್ದಾರೆ ಎಂದರು.

ಕೃಷಿಕ ಸಮಾಜ ತಾಲ್ಲೂಕು ಘಟಕ ಖಜಾಂಚಿ ಲಕ್ಷ್ಮಿನರಸಿಂಹಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ವರ್ಷದಲ್ಲಿ ಅಭೂತಪೂರ್ವ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನರಿತು ಬಿಜೆಪಿ ಕೇಂದ್ರ ಸಚಿವರು ಗೆಲುವಿಗೆ ನಿರಂತರ ಯಾತ್ರೆ ನಡೆಸುತ್ತಿದ್ದಾರೆ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಉತ್ತಮವಾಗಿ ಕಾಂಗ್ರೆಸ್ ಪರ ಅಲೆ ಇದ್ದರೂ ವೆಂಕಟಸ್ವಾಮಿ ತಪ್ಪು ನಿರ್ಧಾರದಿಂದ ಸೋತಿದ್ದಾರೆ ಎಂದರು.

ಗೆಲುವಿನ ಕ್ಷೇತ್ರವಾಗಿರುವ ದೇವನಹಳ್ಳಿಯ ಬಗ್ಗೆ ವರಿಷ್ಠರು ಮತ್ತೆ ತಪ್ಪು ನಿರ್ಧಾರ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟ. ವೆಂಕಟಸ್ವಾಮಿಗೆ ಟಿಕೆಟ್ ನೀಡದಂತೆ ಶೀಘ್ರದಲ್ಲಿಯೇ ಮುಖಂಡರು ಮತ್ತೊಮ್ಮೆ ವರಿಷ್ಠರನ್ನು ಮತ್ತು ಸಂಸದ ವೀರಪ್ಪ ಮೊಯಿಲಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ ಎಂದರು.

ಕೆಪಿಸಿಸಿ ರಾಜ್ಯ ಘಟಕ ಸದಸ್ಯ ರಾಮಚಂದ್ರಪ್ಪ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡೇವಿಡ್ ನಾರಾಯಣಸ್ವಾಮಿ, ಮುಖಂಡ ಕೃಷ್ಣಪ್ಪ, ನರಸಿಂಹನಾಯಕ ಇದ್ದರು.

**

ಮತ್ತೆ ತಪ್ಪು ಆಗಬಾರದು

ಕೃಷಿಕ ಸಮಾಜ ತಾಲ್ಲೂಕು ಘಟಕ ಖಜಾಂಚಿ ಲಕ್ಷ್ಮಿನರಸಿಂಹಸ್ವಾಮಿ ಮಾತನಾಡಿ, ‘ಎಲ್ಲಿ ತಪ್ಪು ಮಾಡಿಕೊಂಡಿದ್ದೇನೆ ಎಂಬುದರ ಅರಿವಿಲ್ಲದೆ ಮತ್ತೆ ತಪ್ಪು ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆಗೆ ಈವರೆವಿಗೂ ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆ ಆಗದಿದ್ದರೂ 2018ರ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಬಂಟಿಂಗ್, ಬ್ಯಾನರ್, ಕರಪತ್ರಗಳ ಮೂಲಕ ಪ್ರಚಾರಕ್ಕೆ ಮುಂದಾಗಿದ್ದಾರೆ. ಅವರ ಪ್ರತಿಯೊಂದು ಹಂತದ ತಪ್ಪುಗಳನ್ನು ಕೆಲವೇ ದಿನಗಳಲ್ಲಿ ಸಮಗ್ರ ಮಾಹಿತಿಯೊಂದಿಗೆ ಬಹಿರಂಗ ಪಡಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT