ಆರ್‌ಬಿಐ ಅಲ್ಪಾವಧಿ ಬಡ್ಡಿ ದರ ಹೆಚ್ಚಳ: ಗೃಹ, ಕಾರು ಸಾಲ ತುಟ್ಟಿ

7

ಆರ್‌ಬಿಐ ಅಲ್ಪಾವಧಿ ಬಡ್ಡಿ ದರ ಹೆಚ್ಚಳ: ಗೃಹ, ಕಾರು ಸಾಲ ತುಟ್ಟಿ

Published:
Updated:
Deccan Herald

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ಹೆಚ್ಚಿಸಿದ್ದು,  ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳು ಮತ್ತು ಸಾಲ ಮರುಪಾವತಿಯ ತಿಂಗಳ ಸಮಾನ ಕಂತುಗಳು (ಇಎಂಐ) ತುಟ್ಟಿಯಾಗಲಿವೆ.

ಕೇಂದ್ರೀಯ ಬ್ಯಾಂಕ್‌ ತನ್ನ ಬಡ್ಡಿ ದರ ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಈಗಾಗಲೇ  ಸಾಲ ಪಡೆದವರ ಮತ್ತು ಇನ್ನು ಮುಂದೆ ಸಾಲ ಪಡೆಯುವವರ ‘ಇಎಂಐ’ ಹೆಚ್ಚಲಿದೆ.

ಷೇರುಪೇಟೆ ಸಂವೇದಿ ಸೂಚ್ಯಂಕದ ನಿರಂತರ ಏಳು ದಿನಗಳ ನಾಗಾಲೋಟಕ್ಕೂ ‘ಆರ್‌ಬಿಐ’ನ ಈ ನಿರ್ಧಾರ ತಡೆ ಒಡ್ಡಿದೆ.

ಪರಿಣಾಮಗಳು: ಆರ್‌ಬಿಐನ ರೆಪೊ ಮತ್ತು ರಿವರ್ಸ್‌ ರೆಪೊ ದರಗಳು ಹೆಚ್ಚಳಗೊಂಡಿದ್ದರಿಂದ ಬ್ಯಾಂಕ್‌ ಠೇವಣಿಗಳ ಬಡ್ಡಿ ದರಗಳೂ ಏರಿಕೆಯಾಗುವ ಸಾಧ್ಯತೆ ಇದೆ. ಎಸ್‌ಬಿಐ ಈಗಾಗಲೇ ಬಡ್ಡಿ ದರಗಳನ್ನು ಹೆಚ್ಚಿಸಿದೆ.

ಮನೆ, ಕಾರ್‌ ಖರೀದಿ, ಉದ್ಯಮ ಮತ್ತು ವೈಯಕ್ತಿಕ ಸಾಲ ಪಡೆದವರ ಪಾಲಿಗೆ ಆರ್‌ಬಿಐನ ಈ ನಿರ್ಧಾರವು ಕಹಿಯಾಗಿರಲಿದೆ. ಗೃಹ ಸಾಲಗಳ ಮರುಪಾವತಿ ದೀರ್ಘಾವಧಿಯಲ್ಲಿ ಇರುವುದರಿಂದ ಅವುಗಳ ಮೇಲೆ ಇದು ಗರಿಷ್ಠ ಪ್ರಭಾವ ಬೀರಲಿದೆ.

ಬುಧವಾರ ಇಲ್ಲಿ ನಡೆದ ಬ್ಯಾಂಕ್‌ನ ಪ್ರಸಕ್ತ ಹಣಕಾಸು ವರ್ಷದ ಮೂರನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ತಿಂಗಳಲ್ಲಿ ಎರಡನೆ ಬಾರಿಗೆ ಬಡ್ಡಿ ದರ ಹೆಚ್ಚಿಸಿದಂತಾಗಿದೆ. ಇತರ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಅಲ್ಪಾವಧಿ ಸಾಲಗಳ ಮೇಲಿನ ಬಡ್ಡಿ (ರೆಪೊ) ದರವು ಈಗ ಶೇ 6.50ಕ್ಕೆ ತಲುಪಿದೆ.  ಹೆಚ್ಚುವರಿ ಹಣದ ಹರಿವಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ‘ರಿವರ್ಸ್‌ ರೆಪೊ’ ದರವು ಈಗ ಶೇ 6.25ಕ್ಕೆ ಏರಿಕೆಯಾಗಿದೆ. ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ನೇತೃತ್ವದಲ್ಲಿನ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಈ ನಿರ್ಧಾರಕ್ಕೆ ಬಂದಿದೆ.

ಹಣದುಬ್ಬರ ಶೇ 4.2: ಜುಲೈ – ಸೆಪ್ಟೆಂಬರ್‌ ಅವಧಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರವು ಶೇ 4.2 ಇರಲಿದೆ. ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಇದು ಶೇ 4.8ಕ್ಕೆ ಏರಿಕೆಯಾಗಲಿದೆ. 2019–20ರ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಇದು ಶೇ 5ಕ್ಕೆ ಏರಲಿದೆ ಎಂದು ಸಮಿತಿ ಅಂದಾಜಿಸಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳದ ಕಾರಣಕ್ಕೆ ಆಹಾರ ಬೆಲೆ ಏರಿಕೆಯಾಗಲಿರುವುದರಿಂದ ಹಣದುಬ್ಬರ ತುಟ್ಟಿಯಾಗಲಿದೆ.

ಜಿಡಿಪಿ ಅಂದಾಜು: ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 7.4ರಷ್ಟು ಇರುವ ಅಂದಾಜಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಕಾರ್ಪೊರೇಟ್‌ಗಳ ಉತ್ತಮ ಹಣಕಾಸು ಸಾಧನೆ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಹೆಚ್ಚಳದ ಕಾರಣಕ್ಕೆ ವೃದ್ಧಿ ದರವು ತೃಪ್ತಿದಾಯಕ ಮಟ್ಟದಲ್ಲಿ ಇರಲಿದೆ. ಇಲ್ಲಿಯವರೆಗೆ ದೇಶದಾದ್ಯಂತ ಉತ್ತಮ ಮಳೆಯಾಗಿರುವುದು ಮತ್ತು ಮುಂಗಾರು ಬೆಳೆಗಳ ‘ಎಂಎಸ್‌ಪಿ’ ಹೆಚ್ಚಿಸಿರುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ವೇಗ ದೊರೆಯಲಿದೆ.

ಇತ್ತೀಚಿನ ದಿನಗಳಲ್ಲಿ ವಿದೇಶಿ ಬಂಡವಾಳದ ನೇರ ಹೂಡಿಕೆಯಲ್ಲಿನ (ಎಫ್‌ಡಿಐ) ಹೆಚ್ಚಳ ಮತ್ತು ಷೇರುಪೇಟೆಯಲ್ಲಿನ ಉತ್ಸಾಹದ ವಾತಾವರಣವು ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನಕಾರಿಯಾಗಿವೆ. ತಯಾರಿಕಾ ವಲಯದಲ್ಲಿನ ಚಟುವಟಿಕೆಗಳೂ ಆಶಾದಾಯಕವಾಗಿವೆ ಎಂದೂ ಆರ್‌ಬಿಐ ಹೇಳಿದೆ.

 

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !