ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು, ವಿತ್ತೀಯ ಕೊಡುಗೆ, ಆರ್ಥಿಕ ಚಟುವಟಿಕೆ ಚೇತರಿಕೆ: ಆರ್‌ಬಿಐ ಆಶಾವಾದ

Last Updated 10 ಏಪ್ರಿಲ್ 2020, 2:50 IST
ಅಕ್ಷರ ಗಾತ್ರ

ಮುಂಬೈ: ದೇಶದಾದ್ಯಂತ ಸಹಜ ಸ್ಥಿತಿ ಜಾರಿಗೆ ಬರುತ್ತಿದ್ದಂತೆ ಇತ್ತೀಚೆಗೆ ಪ್ರಕಟಿಸಲಾಗಿರುವ ಹಣಕಾಸು ಮತ್ತು ವಿತ್ತೀಯ ಕೊಡುಗೆಗಳ ಫಲವಾಗಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿಯಲ್ಲಿ ಆಶಾವಾದ ವ್ಯಕ್ತಪಡಿಸಲಾಗಿದೆ.

ದಿಗ್ಬಂಧನ ಮತ್ತು ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಯು ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ಕುಂಠಿತಗೊಳಿಸಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ವೃದ್ಧಿ ದರದ ಬಗ್ಗೆ ಅಂದಾಜು ಮಾಡುವುದು ಸಾಧ್ಯವಾಗುವುದಿಲ್ಲ.

‘ಕೊರೊನಾ–2’ ವೈರಾಣು ಪಿಡುಗು ವ್ಯಾಪಿಸುವುದರ ಮುಂಚೆ, 2020–21ರ ಸಾಲಿನ ಆರ್ಥಿಕ ವೃದ್ಧಿ ದರದ ಬಗ್ಗೆ ಭರವಸೆ ಕಂಡು ಬಂದಿತ್ತು. ಉತ್ತಮ ಹಿಂಗಾರು ಫಸಲು ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆಯು ಗ್ರಾಮೀಣ ಬೇಡಿಕೆ ಬಲಪಡಿಸಲು ಸೂಕ್ತ ವೇದಿಕೆ ಕಲ್ಪಿಸಿತ್ತು. ಬ್ಯಾಂಕ್‌ ಬಡ್ಡಿ ದರಗಳು ಇಳಿಕೆಯಾಗುತ್ತಿದ್ದವು. ತೆರಿಗೆ ಸಂಗ್ರಹದಲ್ಲಿನ ಸುಧಾರಣೆ, ಮೂಲ ಸೌಕರ್ಯ ವಲಯಗಳಲ್ಲಿನ ವೆಚ್ಚ ಹೆಚ್ಚಳವು ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳಕ್ಕೆ ನೆರವಾಗಲಿದ್ದವು. ಹಠಾತ್ತಾಗಿ ಎರಗಿದ ‘ಕೋವಿಡ್‌–19’ ಪಿಡುಗು, ಆರ್ಥಿಕ ಚೇತರಿಕೆಯ ಇಂತಹ ನಿರೀಕ್ಷೆಗಳನ್ನೆಲ್ಲ ಹುಸಿಗೊಳಿಸಿದೆ.

2020ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಯ ಪ್ರಗತಿಯು ಹಿಂಜರಿತವಾಗಿ ಪರಿವರ್ತನೆಗೊಳ್ಳಲಿದೆ. ಭವಿಷ್ಯದ ದಿನಗಳ ಮೇಲೆ ‘ಕೋವಿಡ್‌–19’ ಭೂತದಂತೆ ಕಾಡಲಿದೆ ಎಂದು ಕೇಂದ್ರೀಯ ಬ್ಯಾಂಕ್‌ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಪ್ರಕಟಿಸಿದ ಹಣಕಾಸು ಹಾಗೂ ವಿತ್ತೀಯ ಬೆಂಬಲದ ಕ್ರಮಗಳು ಸರಕು ಮತ್ತು ಸೇವೆಗಳ ಬೇಡಿಕೆ ಮೇಲಿನ ಪ್ರತಿಕೂಲ ಪರಿಣಾಮಗಳ ತೀವ್ರತೆಯನ್ನು ತಗ್ಗಿಸಲಿವೆ. ಎಲ್ಲೆಡೆ ಸಹಜ ಸ್ಥಿತಿ ಕಂಡು ಬರುತ್ತಿದ್ದಂತೆ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT