ಹಣಕಾಸು ವಹಿವಾಟಿನ ಸುರಕ್ಷತೆಗೆ ವಿಳಂಬ: 3 ಬ್ಯಾಂಕ್‌ಗಳಿಗೆ ₹ 8 ಕೋಟಿ ದಂಡ

ಮಂಗಳವಾರ, ಮಾರ್ಚ್ 26, 2019
22 °C

ಹಣಕಾಸು ವಹಿವಾಟಿನ ಸುರಕ್ಷತೆಗೆ ವಿಳಂಬ: 3 ಬ್ಯಾಂಕ್‌ಗಳಿಗೆ ₹ 8 ಕೋಟಿ ದಂಡ

Published:
Updated:
Prajavani

ನವದೆಹಲಿ: ಹಣಕಾಸು ವಹಿವಾಟು ಮಾಹಿತಿಯ ವಿನಿಮಯಕ್ಕೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕ ಜಾಲ ಬಳಸುವುದಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಪಾಲಿಸದ ಕಾರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ಮೂರು ಬ್ಯಾಂಕ್‌ಗಳಿಗೆ ಒಟ್ಟು ₹ 8 ಕೋಟಿ ದಂಡ ವಿಧಿಸಿದೆ.

ಕರ್ಣಾಟಕ ಬ್ಯಾಂಕ್‌ (₹ 4 ಕೋಟಿ), ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ (₹ 3 ಕೋಟಿ) ಮತ್ತು ಕರೂರ್‌ ವೈಶ್ಯ ಬ್ಯಾಂಕ್‌ಗೆ ₹ 1 ಕೋಟಿ ದಂಡ ವಿಧಿಸಲಾಗಿದೆ.

ಹಣಕಾಸು ವಹಿವಾಟಿನ ಮಾಹಿತಿಯ ಸುರಕ್ಷಿತ ವಿನಿಮಯದ ನಿಯಮಗಳನ್ನು ತಡವಾಗಿ ಜಾರಿಗೆ ತಂದಿರುವುದಕ್ಕೆ ಆರ್‌ಬಿಐ ₹ 4 ಕೋಟಿಗಳ ದಂಡ ವಿಧಿಸಿದೆ ಎಂದು ಕರ್ಣಾಟಕ ಬ್ಯಾಂಕ್‌, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಮಾಹಿತಿ ನೀಡಿದೆ.

ವಹಿವಾಟಿನ ಸುರಕ್ಷತೆಗೆ ಸಂಬಂಧಿಸಿದ ಸೌಲಭ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಅಳವಡಿಸಿಕೊಳ್ಳದ ಕಾರಣಕ್ಕೆ ದಂಡ ಪಾವತಿಸಲಾಗಿದೆ ಎಂದು ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ತಿಳಿಸಿದೆ.

ಸುರಕ್ಷಿತ ಹಣಕಾಸು ವಹಿವಾಟಿಗೆ ಸ್ವಿಫ್ಟ್‌:

ಜಾಗತಿಕ ಅಂತರ್‌ ಬ್ಯಾಂಕ್‌ ಹಣಕಾಸು ದೂರಸಂಪರ್ಕ ಸಂಸ್ಥೆಯು (ಎಸ್‌ಡಬ್ಲ್ಯುಐಎಫ್‌ಟಿ– ಸ್ವಿಫ್ಟ್‌) ಬ್ಯಾಂಕ್‌ಗಳಲ್ಲಿ ನಡೆಯುವ ಹಣಕಾಸು ವಹಿವಾಟಿನ ಮಾಹಿತಿಯ ಪರಸ್ಪರ ವಿನಿಮಯಕ್ಕೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕ ಜಾಲ ಒದಗಿಸುತ್ತದೆ.

ನಕಲಿ ಸಾಲ ಖಾತರಿ ಪತ್ರಗಳ (ಎಲ್‌ಒಯು) ಬಳಕೆ ಮತ್ತು ಕೆಲ ಅಧಿಕಾರಿಗಳು ‘ಸ್ವಿಫ್ಟ್‌’ ವಹಿವಾಟಿನ ದೃಢೀಕರಣವನ್ನು ದುರ್ಬಳಕೆ ಮಾಡಿಕೊಂಡಿದ್ದರಿಂದ  ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ)  ₹ 14 ಸಾವಿರ ಕೋಟಿಗೂ ಹೆಚ್ಚು ವಂಚನೆ ಎಸಗಲಾಗಿತ್ತು. 

ಸಾಲ ಪಡೆದವರು ಸುಸ್ತಿದಾರರಾದರೆ ಅದನ್ನು  ತುಂಬಿಕೊಡುವ ಬಗ್ಗೆ ಬ್ಯಾಂಕ್‌ ಖಾತರಿ ಪತ್ರ (ಎಲ್‌ಒಯು) ನೀಡುವ ವ್ಯವಸ್ಥೆ ಜಾರಿಯಲ್ಲಿ ಇದೆ. ಇಂತಹ ಖಾತರಿ ಪತ್ರಗಳನ್ನು ಅಂತರ ಬ್ಯಾಂಕ್‌ ದೂರಸಂಪರ್ಕ ವ್ಯವಸ್ಥೆಯಾಗಿರುವ ’ಸ್ವಿಫ್ಟ್‌’ ಮೂಲಕ ರವಾನಿಸಲಾಗುತ್ತದೆ. ಇದೊಂದು ಸುರಕ್ಷಿತ ಸಂದೇಶ ವ್ಯವಸ್ಥೆಯಾಗಿದೆ.

2018ರ ಫೆಬ್ರುವರಿಯಲ್ಲಿ ಪಿಎನ್‌ಬಿ ವಂಚನೆ ಬೆಳಕಿಗೆ ಬಂದ ನಂತರ, ಬ್ಯಾಂಕ್‌ಗಳು ತಮ್ಮೆಲ್ಲ ವಹಿವಾಟಿನ 
ಪ್ರಕ್ರಿಯೆಯನ್ನು ಬಿಗಿಗೊಳಿಸಲು ಆರ್‌ಬಿಐ 
ಸೂಚಿಸಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !