ಮಂಗಳವಾರ, ಸೆಪ್ಟೆಂಬರ್ 28, 2021
22 °C

ಬ್ಯಾಂಕ್‌ ಲಾಕರ್‌: ಆರ್‌ಬಿಐನಿಂದ ಹೊಸ ನಿಯಮ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬ್ಯಾಂಕ್‌ ಲಾಕರ್‌ಗಳಿಗೆ ಅನ್ವಯವಾಗುವ ಪರಿಷ್ಕೃತ ನಿಯಮಗಳನ್ನು ಆರ್‌ಬಿಐ ಬುಧವಾರ ಹೊರಡಿಸಿದೆ. ಇದರ ಅನ್ವಯ, ಅಗ್ನಿ ಅನಾಹುತ, ಕಳ್ಳತನ, ಕಟ್ಟಡ ಕುಸಿತ ಅಥವಾ ಬ್ಯಾಂಕ್‌ನ ಸಿಬ್ಬಂದಿಯಿಂದ ವಂಚನೆ ನಡೆದಲ್ಲಿ ಬ್ಯಾಂಕ್‌ಗಳು ಭರಿಸಬೇಕಾದ ಮೊತ್ತವು ಲಾಕರ್‌ನ ವಾರ್ಷಿಕ ಬಾಡಿಗೆ ಮೊತ್ತದ ನೂರು ಪಟ್ಟು ಮೊತ್ತಕ್ಕೆ ಸೀಮಿತ ಆಗಲಿದೆ.

ಪರಿಷ್ಕೃತ ನಿಯಮಗಳು 2022ರ ಜನವರಿ 1ರಿಂದ ಜಾರಿಗೆ ಬರಲಿವೆ. ಇದರ ಅಡಿಯಲ್ಲಿ, ಅಕ್ರಮವಾದ ಅಥವಾ ಅಪಾಯಕಾರಿಯಾದ ಯಾವುದೇ ವಸ್ತುವನ್ನು ಲಾಕರ್‌ನಲ್ಲಿ ಇರಿಸುವುದಿಲ್ಲ ಎಂಬ ಒಪ್ಪಂದಕ್ಕೆ ಬ್ಯಾಂಕ್‌ಗಳು ಲಾಕರ್‌ ಸೌಲಭ್ಯ ಪಡೆಯುವವರಿಂದ ಸಹಿ ಮಾಡಿಸಿಕೊಳ್ಳಬೇಕಾಗುತ್ತದೆ. ಹೊಸ ನಿಯಮಗಳು ಈಗಾಗಲೇ ಇರುವ ಲಾಕರ್‌ಗಳಿಗೂ, ಹೊಸ ಲಾಕರ್‌ಗಳಿಗೂ ಅನ್ವಯವಾಗಲಿದೆ.

ಬ್ಯಾಂಕ್‌ಗಳು ಲಾಕರ್‌ ಹಂಚಿಕೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ. ‘ಹಂಚಿಕೆ ಮಾಡಲು ಲಾಕರ್‌ಗಳು ಲಭ್ಯವಿಲ್ಲದಿದ್ದರೆ, ಲಾಕರ್‌ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದವರಿಗೆ, ಅರ್ಜಿ ಸ್ವೀಕೃತಿ ಪತ್ರ ನೀಡಬೇಕು, ಕಾಯುವಿಕೆ ಸಂಖ್ಯೆಯನ್ನು ಕೂಡ ಅವರಿಗೆ ನೀಡಬೇಕು’ ಎಂದು ಪರಿಷ್ಕೃತ ನಿಯಮಗಳಲ್ಲಿ ಹೇಳಲಾಗಿದೆ.

‘ಯಾವುದೇ ಪ್ರಾಕೃತಿಕ ವಿಕೋಪದಿಂದಾಗಿ, ಭೂಕಂಪ, ಪ್ರವಾಹ, ಸಿಡಿಲು ಅಥವಾ ಮನುಷ್ಯನ ನಿಯಂತ್ರಣಕ್ಕೆ ಮೀರಿದ ಸಂಗತಿಗಳಿಂದಾಗಿ, ಗ್ರಾಹಕನ ಪೂರ್ಣ ಅಜಾರೂಕತೆಯಿಂದಾಗಿ ಲಾಕರ್‌ನಲ್ಲಿ ಇರಿಸಿದ ವಸ್ತುವಿಗೆ ಹಾನಿಯಾದರೆ ಬ್ಯಾಂಕ್‌ ಹೊಣೆಗಾರ ಅಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಲಾಕರ್‌ ಇರುವ ಸ್ಥಳದ ಸುರಕ್ಷತೆಯ ಮೇಲೆ ನಿಗಾ ಇಡಬೇಕಾಗಿರುವುದು ಬ್ಯಾಂಕ್‌ನ ಹೊಣೆ ಎಂದು ಹೇಳಲಾಗಿದೆ.

‘ಗ್ರಾಹಕರ ವಿಚಾರದಲ್ಲಿ ತಮಗೆ ಯಾವುದೇ ಹೊಣೆ ಇಲ್ಲವೆಂದು ಬ್ಯಾಂಕ್‌ಗಳು ಹೇಳುವಂತಿಲ್ಲ. ಅಗ್ನಿ ಅನಾಹುತ, ಕಳ್ಳತನ ಅಥವಾ ಬ್ಯಾಂಕ್‌ ಸಿಬ್ಬಂದಿಯಿಂದ ವಂಚನೆ ನಡೆದಲ್ಲಿ ಬ್ಯಾಂಕ್‌ ಹೊಣೆ ಹೊರಬೇಕಾಗುತ್ತದೆ. ಆ ಹೊಣೆಯು ಲಾಕರ್‌ನ ಅಂದಿನ ವಾರ್ಷಿಕ ಬಾಡಿಗೆ ಮೊತ್ತದ ನೂರುಪಟ್ಟಿಗೆ ಸೀಮಿತ ಆಗಿರುತ್ತದೆ’ ಎಂದು ನಿಯಮಗಳಲ್ಲಿ ಹೇಳಲಾಗಿದೆ.

ಲಾಕರ್ ಸೌಲಭ್ಯ ಪಡೆದವರು ಸತತ ಮೂರು ವರ್ಷ ಬಾಡಿಗೆ ನೀಡದಿದ್ದಲ್ಲಿ, ನಿಯಮಗಳ ಅನುಸಾರ ಲಾಕರ್‌ ಒಡೆಯುವ ಅಧಿಕಾರವು ಬ್ಯಾಂಕ್‌ಗಳ ಬಳಿ ಇರಲಿದೆ.

ಸರ್ಕಾರಿ ಸ್ವಾಮ್ಯದ ದೊಡ್ಡ ಬ್ಯಾಂಕೊಂದು ಸಣ್ಣ ಗಾತ್ರದ ಲಾಕರ್‌ ಸೌಲಭ್ಯಕ್ಕೆ ವಾರ್ಷಿಕ ₹ 2,000, ಮಧ್ಯಮ ಗಾತ್ರದ ಲಾಕರ್‌ಗೆ ₹ 4,000 (ನಗರ ಮತ್ತು ಮಹಾನಗರಗಳಲ್ಲಿ) ಹಾಗೂ ದೊಡ್ಡ ಪ್ರಮಾಣದ ಲಾಕರ್‌ಗೆ ₹ 8,000 ಬಾಡಿಗೆ ಪಡೆಯುತ್ತದೆ. ಈ ಮೊತ್ತದಲ್ಲಿ ಜಿಎಸ್‌ಟಿ ಸೇರಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು