ಮಂಗಳವಾರ, ಡಿಸೆಂಬರ್ 10, 2019
26 °C

ಬಡ್ಡಿ ದರ ಬದಲಿಸದ ಆರ್‌ಬಿಐ

Published:
Updated:

ಮುಂಬೈ: ಅಲ್ಪಾವಧಿ ಬಡ್ಡಿ ದರ ಹೆಚ್ಚಿಸಲಿದೆ ಎನ್ನುವ ನಿರೀಕ್ಷೆ ಹುಸಿ ಮಾಡಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌, ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಜಾಗತಿಕ ಹಣಕಾಸು ಪರಿಸ್ಥಿತಿಯು ಕಠಿಣಗೊಳ್ಳುತ್ತಿರುವುದು ಆರ್ಥಿಕ ವೃದ್ಧಿ ದರ ಏರಿಕೆಗೆ ಕಡಿವಾಣ ವಿಧಿಸಲಿದೆ ಮತ್ತು ಹಣದುಬ್ಬರವು ಆತಂಕ ಹೆಚ್ಚಿಸಲಿದೆ ಎಂದು ಎಚ್ಚರಿಸಿದೆ.

ಆರು ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಕನಿಷ್ಠ ಶೇ 0.25ರಷ್ಟು ಬಡ್ಡಿ ದರ ಹೆಚ್ಚಿಸಲಿದೆ ಎಂದು ವಿಶ್ಲೇಷಕರು ಮತ್ತು  ಬ್ಯಾಂಕ್‌ ಮುಖ್ಯಸ್ಥರು ಬಹುವಾಗಿ ನಿರೀಕ್ಷಿಸಿದ್ದರು. ಡಾಲರ್‌ ಎದುರು ರೂಪಾಯಿ ವಿನಿಮಯ ದರದಲ್ಲಿನ ದಾಖಲೆ ಕುಸಿತದ ಕಾರಣಕ್ಕೆ ಬಡ್ಡಿ ದರ ಹೆಚ್ಚಳವು ಶೇ 0.50ರಷ್ಟು ಇರಬಹುದು ಎಂದೂ ಊಹಿಸಲಾಗಿತ್ತು.

ಆರ್‌ಬಿಐ ನಿರ್ಧಾರ ಪ್ರಕಟಗೊಂಡ ಬೆನ್ನಲ್ಲೇ, ಡಾಲರ್‌ ಎದುರಿನ ರೂಪಾಯಿ ಬೆಲೆ ಮೊದಲ ಬಾರಿಗೆ 74ರ ಗಡಿ ದಾಟಿತು. ಇದರಿಂದ ಆಮದು ದುಬಾರಿಯಾಗಿ ಪರಿಣಮಿಸಲಿದೆ. ಚಾಲ್ತಿ ಖಾತೆ ಕೊರತೆ (ಸಿಎಡಿ) ಹೆಚ್ಚಿಸಲಿದೆ.

ಬ್ಯಾಂಕ್‌ಗಳಿಗೆ ಅಲ್ಪಾವಧಿಗೆ ಸಾಲ ನೀಡುವ ರೆಪೊ ದರವು ಶೇ 6.5 ಮತ್ತು  ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ಹೆಚ್ಚುವರಿ ಹಣದ ಚಲಾವಣೆಗೆ ಕಡಿವಾಣ ಹಾಕಲು ಬ್ಯಾಂಕ್‌ಗಳಿಗೆ ಬಡ್ಡಿ ಪಾವತಿಸುವ ರಿವರ್ಸ್‌ ರೆಪೊ ದರವನ್ನು ಶೇ 6.5ರಲ್ಲಿಯೇ ಕಾಯ್ದುಕೊಳ್ಳಲಾಗಿದೆ.

ಹಣಕಾಸು ನೀತಿ ಸಮಿತಿಯು ಯಥಾಸ್ಥಿತಿ ಕಾಯ್ದುಕೊಳ್ಳಲು 5;1 ನಿಲುವು ತಳೆದಿದೆ. ಸದಸ್ಯ ಚೇತನ್‌ ಘಾಟೆ ಅವರೊಬ್ಬರು ಮಾತ್ರ ಶೇ 0.25 ಬಡ್ಡಿ ದರ ಹೆಚ್ಚಳದ ಪರ ಮತ ಚಲಾಯಿಸಿದ್ದರು.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವು, ಹಣದುಬ್ಬರ ನಿಯಂತ್ರಿಸಲು ನೆರವಾಗಲಿದೆ.ಸೆಪ್ಟೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ ಹಣದುಬ್ಬರವು ಶೇ 3.7ಕ್ಕೆ ತಲುಪಲಿದೆ ಎಂದು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಹೇಳಿದ್ದಾರೆ.

ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಕಚ್ಚಾ ತೈಲದ ಬೆಲೆಮಟ್ಟ ಮತ್ತು ಕರೆನ್ಸಿಗಳ ಬೆಲೆ ಏರಿಳಿತವು ಬೆಲೆ ಏರಿಕೆ ಪರಿಸ್ಥಿತಿ ಮೇಲೆ ಪರಿಣಾಮ ಬೀರಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು