ಭಾನುವಾರ, ಅಕ್ಟೋಬರ್ 25, 2020
28 °C
ಹಣಕಾಸು ನೀತಿ ಸಮಿತಿಯಲ್ಲಿ ನಿರ್ಧಾರ

ಜಿಡಿಪಿ ಶೇಕಡ 9.5ರಷ್ಟು ಕುಸಿತ: ಆರ್‌ಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇಕಡ 9.5ರಷ್ಟು ಕುಸಿತಗೊಳ್ಳಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಂದಾಜಿಸಿದೆ.

ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ (ಏಪ್ರಿಲ್‌,ಮೇ, ಜೂನ್‌) ಆರ್ಥಿಕ ವೃದ್ಧಿ ದರ ಋಣಾತ್ಮಕವಾಗಿ ಶೇಕಡ 23.9ರಷ್ಟು ಕುಸಿದಿತ್ತು.

ಶುಕ್ರವಾರ ನಡೆದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ವಿವರ ನೀಡಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌, ‘ಕೊರೊನಾ ವೈರಸ್‌ ಹೋರಾಟದಲ್ಲಿ ಭಾರತದ ಆರ್ಥಿಕತೆ ನಿರ್ಣಾಯಕ ಹಂತಕ್ಕೆ ಪ್ರವೇಶಿಸಿದೆ’ ಎಂದು ಹೇಳಿದರು.

ಹಣದುಬ್ಬರ ದರವು ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಡಿಮೆಯಾಗಬಹುದು ಎಂದು ಅವರು ಅಂದಾಜಿಸಿದ್ದಾರೆ. ಹಣದುಬ್ಬರ ದರವನ್ನು ಶೇಕಡ 4ರಷ್ಟು ಇರುವಂತೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆರ್‌ಬಿಐಗೆ ಸೂಚಿಸಿದೆ.

ಬಡ್ಡಿ ದರ ಬದಲಾವಣೆ ಇಲ್ಲ:

ನಿರೀಕ್ಷೆಯಂತೆ ಪ್ರಮುಖವಾದ ಬಡ್ಡಿ ದರಗಳನ್ನು ಬದಲಾವಣೆ ಮಾಡದಿರಲು ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆ ನಿರ್ಧರಿಸಿದೆ. ಕೊರೊನಾ ವೈರಸ್‌ನಿಂದ ಕುಂಠಿತವಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ರೆಪೊ ದರವನ್ನು ಮತ್ತೆ ಶೇಕಡ 4ಕ್ಕೆ ಉಳಿಸಲಾಗಿದೆ. ಡಿಸೆಂಬರ್‌ ತಿಂಗಳಿಂದ ಆರ್‌ಟಿಜಿಎಸ್‌ ವ್ಯವಸ್ಥೆ ದಿನದ 24ಗಂಟೆಯೂ ಲಭ್ಯವಾಗುವಂತೆ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ.

‘ಆರ್ಥಿಕ ಚಟುವಟಿಕೆ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಕಾರ್ಖಾನೆಗಳು ಸಹ ಪುನಾರಂಭಗೊಂಡಿವೆ. ಜತೆಗೆ, ಈ ಬಾರಿ  ದಾಖಲೆಯ ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗುವ ಸಾಧ್ಯತೆ ಇದೆ. ಸಂಕಷ್ಟದ ನಡುವೆಯೂ ಆರ್ಥಿಕತೆಗೆ ಪುನಶ್ವೇತನ ದೊರೆಯುವ ನಿರೀಕ್ಷೆ ಇದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್ ಅವರು ಹೇಳಿದ್ದಾರೆ.

ಗೃಹ ಸಾಲಕ್ಕೆ ಉತ್ತೇಜನ:

ಗೃಹ ಸಾಲಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್‌ಬಿಐ ಕ್ರಮಕೈಗೊಂಡಿದೆ. ಬ್ಯಾಂಕ್‌ಗಳು ಮಂಜೂರು ಮಾಡಿದ ಗೃಹ ಸಾಲದ ಸುಸ್ತಿಗೆ ತೆಗೆದಿರಿಸಬಹುದಾದ ಮೊತ್ತವನ್ನು ಕಡಿಮೆ ಮಾಡಲಾಗಿದೆ ಇದರಿಂದ ರಿಯಲ್‌ ಎಸ್ಟೇಟ್‌ ವಲಯಕ್ಕೆ ಸಾಲದ ನೆರವು ಹೆಚ್ಚಲಿದೆ. ಆರ್‌ಬಿಐನ ಈ ನಿರ್ಧಾರದಿಂದ ಬ್ಯಾಂಕ್‌ಗಳು ಮತ್ತು ಸಾಲಗಾರರಿಗೆ ಪ್ರಯೋಜನವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ರಿಯಲ್‌ ಎಸ್ಟೇಟ್‌ ವಲಯದಲ್ಲಿ ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ವಲಯಗಳಿಗೂ ಅನುಕೂಲವಾಗಲಿವೆ. ಜತೆಗೆ, ಗೃಹ ಸಾಲಕ್ಕೆ ಹೆಚ್ಚು ಮೊತ್ತ ದೊರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಬಡ್ಡಿ ದರ ಕುರಿತು ನಿರೀಕ್ಷೆಯಂತೆ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಹಣದುಬ್ಬರ ಹೆಚ್ಚಾಗಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಡಿಸೆಂಬರ್‌ ಹೊತ್ತಿಗೆ ಹಣದುಬ್ಬರ ಕಡಿಮೆಯಾಗಬಹುದು. ಮುಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಬಡ್ಡಿ ದರಗಳನ್ನು ಕಡಿಮೆ ಮಾಡಬಹುದು’ ಎಂದು ಆರ್ಥಿಕ ತಜ್ಞ ಸುಜನ್‌ ಹಜ್ರಾ ಅಭಿಪ್ರಾಯಪಟ್ಟಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು