ಭಾನುವಾರ, ಸೆಪ್ಟೆಂಬರ್ 15, 2019
27 °C
ಅಮೆರಿಕದ ಹಣಕಾಸು ಸೇವಾ ಕಂಪನಿ ಮೂಡಿಸ್‌ ವಿಶ್ಲೇಷಣೆ

ರೆಪೊ ಆಧರಿಸಿದ ಬಡ್ಡಿ ದರ ಲಾಭದಾಯಕವಲ್ಲ

Published:
Updated:

ನವದೆಹಲಿ: ಕೆಲ ಸಾಲಗಳ ಬಡ್ಡಿ ದರವನ್ನು ರೆಪೊ ದರ ಆಧರಿಸಿ ನಿಗದಿಪಡಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೊರಡಿಸಿರುವ ಸುತ್ತೋಲೆಯು ಬ್ಯಾಂಕ್‌ಗಳ ಪಾಲಿಗೆ ಲಾಭದಾಯಕವಾಗಿರುವುದಿಲ್ಲ ಎಂದು ಅಮೆರಿಕದ ಹಣಕಾಸು ಸೇವಾ ಕಂಪನಿಯಾಗಿರುವ ಮೂಡಿಸ್‌ ಇನ್‌ವೆಸ್ಟರ್‌ ಸರ್ವೀಸ್‌ ವಿಶ್ಲೇಷಿಸಿದೆ.

ಆರ್‌ಬಿಐನ ಈ ಸುತ್ತೋಲೆಯು ಅಕ್ಟೋಬರ್‌ 1 ರಿಂದ ಜಾರಿಗೆ ಬರಲಿದೆ. ಸದ್ಯಕ್ಕೆ ಜಾರಿಯಲ್ಲಿ ಇರುವ, ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿ ದರವು ಹಲವಾರು ಕಾರಣಗಳಿಂದ ತೃಪ್ತಿದಾಯಕವಾಗಿಲ್ಲ.  ರೆಪೊ ದರ ಕಡಿತದ ಪ್ರಯೋಜನದ ವರ್ಗಾವಣೆಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಕೇಂದ್ರೀಯ ಬ್ಯಾಂಕ್‌ ಅಭಿಪ್ರಾಯಪಟ್ಟಿತ್ತು.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ  (ಎಂಎಸ್‌ಎಂಇ) ಅಕ್ಟೋಬರ್‌ 1ರಿಂದ ಮಂಜೂರು ಮಾಡಲಾಗುವ ರಿಟೇಲ್‌ ಸಾಲ ಮತ್ತು ಬದಲಾಗುವ ಬಡ್ಡಿ ದರದ ಸಾಲಗಳು ರೆಪೊ ದರ ಆಧರಿಸಿರಬೇಕು ಎಂದು ಸೂಚಿಸಲಾಗಿದೆ.

ಈ ನಿರ್ಧಾರವು, ಬಡ್ಡಿ ದರಗಳನ್ನು ನಿರ್ವಹಿಸುವ  ಬ್ಯಾಂಕ್‌ಗಳ ಅಧಿಕಾರಕ್ಕೆ ಕಡಿವಾಣ ಹಾಕಲಿದೆ. ಸಾಲ ಸುಸ್ತಿ, ತಡವಾಗಿ ಸಾಲ ಮರು ಪಾವತಿ ಇಲ್ಲವೆ ಸಾಲ ಪಡೆದವರು ದಿವಾಳಿ ಏಳುವ ಸಾಧ್ಯತೆಗಳು ಇರುತ್ತವೆ ಎಂದು ಮೂಡಿಸ್‌ ಅಭಿಪ್ರಾಯಪಟ್ಟಿದೆ.

ರೆಪೊ ದರ, 3 ಅಥವಾ 6 ತಿಂಗಳ ಟ್ರೆಷರಿ ಬಿಲ್‌ ಆದಾಯ ಇಲ್ಲವೆ ಫೈನಾನ್ಶಿಯಲ್‌ ಬೆಂಚ್‌ಮಾರ್ಕ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಫ್‌ಬಿಐಎಲ್‌) ಪ್ರಕಟಿಸುವ ಬಡ್ಡಿ ದರಗಳು ಸೇರಿದಂತೆ ವಿವಿಧ ಬಗೆಯ ಬಡ್ಡಿ ದರಗಳನ್ನು ಬ್ಯಾಂಕ್‌ಗಳು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

 

 

Post Comments (+)