ಸೋಮವಾರ, ಜನವರಿ 20, 2020
27 °C
ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿಕೆ

ಕುಂಠಿತ ಆರ್ಥಿಕತೆ; ಫೆಬ್ರುವರಿ ತಿಂಗಳಲ್ಲೇ ಆರ್‌ಬಿಐ ಅಂದಾಜು

ಪಿಟಿಐ Updated:

ಅಕ್ಷರ ಗಾತ್ರ : | |

ಶಕ್ತಿಕಾಂತ್‌ ದಾಸ್‌

ಮುಂಬೈ: ದೇಶದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಮಂದಗತಿಯ ಬೆಳವಣಿಗೆ ದಾಖಲಿಸಲಿದೆಯೆಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಫೆಬ್ರುವರಿಯಲ್ಲಿಯೇ ಅಂದಾಜಿಸಿತ್ತು.

‘ಆರ್ಥಿಕ ವೃದ್ಧಿ ದರವು ಕುಸಿತದ ಹಾದಿಯಲ್ಲಿ ಸಾಗಲಿರುವುದನ್ನು ಕೇಂದ್ರೀಯ ಬ್ಯಾಂಕ್‌ ಮುಂಚಿತವಾಗಿಯೇ ಅಂದಾಜಿಸಿತ್ತು. ಇದೇ ಕಾರಣಕ್ಕೆ ನಾವು ಅಲ್ಪಾವಧಿ ಬಡ್ಡಿ ದರ ಕಡಿತದ ವಿಷಯದಲ್ಲಿ  ಫೆಬ್ರುವರಿ ತಿಂಗಳಿನಲ್ಲಿಯೇ ಮುಂದಾಲೋಚನೆಯ ನಿರ್ಧಾರ ಕೈಗೊಂಡಿದ್ದೆವು. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲೆಂಬ ಉದ್ದೇಶದಿಂದ ನಿರಂತರವಾಗಿ ರೆಪೊ ದರ ಇಳಿಕೆ ಮಾಡುತ್ತ ಬರಲಾಗಿತ್ತು’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಫೆಬ್ರುವರಿಯಲ್ಲಿ ನಾವು ಬಡ್ಡಿ ದರ ಕಡಿತ ಮಾಡಿದಾಗ ಷೇರುಪೇಟೆ ವಹಿವಾಟುದಾರರು ಅದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದರು. ನಾವು ಈಗ ಬಡ್ಡಿ ದರ ಕಡಿತ ಮಾಡದಿರುವಾಗಲೂ ಷೇರುಪೇಟೆಯಲ್ಲಿ ಅದೇ ಬಗೆಯ ಆಶ್ಚರ್ಯ ಕಂಡುಬಂದಿರುವುದು ಚಕಿತಗೊಳಿಸುವ ಸಂಗತಿಯಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಹಣದುಬ್ಬರವು ನಿಯಂತ್ರಣದಲ್ಲಿ ಇರುವವರೆಗೆ ಆರ್ಥಿಕ ಪ್ರಗತಿಯೇ ಆರ್‌ಬಿಐನ ಆದ್ಯತೆಯಾಗಿರುತ್ತದೆ’ ಎಂದು 6 ತಿಂಗಳ ಹಿಂದೆಯೇ ತಾವು ಹೇಳಿಕೆ ನೀಡಿರುವುದನ್ನು ದಾಸ್‌ ಅವರು ಇದೇ ಸಂದರ್ಭದಲ್ಲಿ ನೆನಪು ಮಾಡಿಕೊಂಡಿದ್ದಾರೆ.

‘ಆರ್ಥಿಕತೆಗೆ ಉತ್ತೇಜನ ನೀಡಲು ರೆಪೊ ದರ ಕಡಿತದ ಜತೆಗೆ ಬ್ಯಾಂಕಿಂಗ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ (ಎನ್‌ಬಿಎಫ್‌ಸಿ) ಹಲವಾರು ಬಗೆಯಲ್ಲಿ ನೆರವು ಕಲ್ಪಿಸಲಾಗಿದೆ. ಕುಂಠಿತ ಆರ್ಥಿಕತೆ ಸಮಸ್ಯೆ ಎದುರಿಸಲು ಅಗತ್ಯವಾಗಿರುವ ಕ್ರಮಗಳನ್ನೆಲ್ಲ ಕೈಗೊಳ್ಳಲು ಆರ್‌ಬಿಐ ಬದ್ಧವಾಗಿದೆ’ ಎಂದೂ ದಾಸ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು