ಭಾನುವಾರ, ಏಪ್ರಿಲ್ 5, 2020
19 °C
ರಹಸ್ಯ ತಾಣದಲ್ಲಿ ತಜ್ಞ ಸಿಬ್ಬಂದಿಯ ನಿಯೋಜನೆ

ಕೊರೊನಾ ವಿರುದ್ಧ ಆರ್‌ಬಿಐನ ಸಮರ ಕೊಠಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ’ಕೊರೊನಾ–2‘ ವೈರಸ್‌ನಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದ ದೇಶದ ಹಣಕಾಸು ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌, ಸಮರ ಸನ್ನದ್ಧ ರೀತಿಯಲ್ಲಿ ಕಾರ್ಯೋನ್ಮುಖವಾಗಿದೆ.

ಬ್ಯಾಂಕಿಂಗ್‌ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಎದುರಾಗಬಹುದಾದ ಆಕಸ್ಮಿಕ ಅಡಚಣೆಗಳನ್ನು ಸಮರ್ಥವಾಗಿ ನಿರ್ವಹಿಸಿ ಹಣಕಾಸು ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳಲು  ನಗರದ ಸುಸಜ್ಜಿತ ಹೋಟೆಲ್‌ವೊಂದನ್ನು ಬಾಡಿಗೆಗೆ ಪಡೆದು ’ಸಮರ ಕೊಠಡಿ‘ ನಿರ್ಮಿಸಿದೆ. ’ವಹಿವಾಟು ತುರ್ತು ನಿರ್ವಹಣೆ ಯೋಜನೆ‘ಯಡಿ (ಬಿಸಿಪಿ) ಈ ಅಭೂತಪೂರ್ವ ಕ್ರಮ ಕೈಗೊಳ್ಳಲಾಗಿದ್ದು, ರಹಸ್ಯ ತಾಣದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.

ಹಣಕಾಸು ವರ್ಷಾಂತ್ಯದ ಕೊನೆಯಲ್ಲಿ ಕೊರೊನಾ ವೈರಸ್‌ ಹಾವಳಿ ಕಂಡು ಬಂದಿರುವುದರಿಂದ ಎಲ್ಲ ಬಗೆಯ ಹಣಕಾಸು ವಹಿವಾಟುಗಳು ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ನಡೆಯಲು ಇಲ್ಲಿಯ ಸೀಮಿತ ಸಂಖ್ಯೆಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಬ್ಯಾಂಕಿಂಗ್‌ ಚಟುವಟಿಕೆಗಳ ಜತೆಗೆ, ರಿಟೇಲ್‌, ತೆರಿಗೆ ಪಾವತಿ ಸೇರಿದಂತೆ ಇತರ ಹಣಕಾಸು ಚಟುವಟಿಕೆಗಳಿಗೆ  ಐಟಿ ಮೂಲಸೌಕರ್ಯದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳುವುದು ತುರ್ತು ಅಗತ್ಯವಾಗಿದೆ.

ಪರಿಣತರ ತಂಡದ ನಿಯೋಜನೆ: ಈ ಕೊರೊನಾ ವಿರುದ್ಧದ ಸಮರವನ್ನು ಎದುರಿಸಲು ಪರಿಣತರ ತಂಡವನ್ನು ವಿಶೇಷವಾಗಿ ನಿಯೋಜಿಸಿದೆ.  ಈ ತಿಂಗಳ 19ರಿಂದಲೇ ಇದು  ದಿನದ 24 ಗಂಟೆಗಳ ಕಾಲ  ಕಾರ್ಯನಿರ್ವಹಿಸುತ್ತಿದೆ. ನುರಿತ ಮತ್ತು ಆಯ್ದ 90 ನೌಕರರಿಗೆ ಈ ’ಸಮರ ಕೊಠಡಿ‘ ನಿರ್ವಹಿಸುವ ಹೊಣೆಗಾರಿಕೆ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ 45 ನೌಕರರು ಕೆಲಸ ನಿರ್ವಹಿಸುವ ಮತ್ತು ಉಳಿದ 45 ಮಂದಿ ಸನ್ನದ್ಧ ಸ್ಥಿತಿಯಲ್ಲಿ ಇರುವ ಬಗೆಯಲ್ಲಿ ಈ ಯೋಜನೆಯ ಕಾರ್ಯತಂತ್ರ ರೂಪಿಸಲಾಗಿದೆ.

ಹಣಕಾಸು ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುವ ಸಾಲ, ವಿದೇಶಿ ವಿನಿಮಯ ಮೀಸಲು ಮತ್ತು ಹಣಕಾಸು ಕಾರ್ಯಚಟುವಟಿಕೆಗಳನ್ನು ಈ ’ಸಮರ ಕೊಠಡಿ‘ಯು ನಿರ್ವಹಿಸುತ್ತಿದೆ.

‘ಬಿಸಿಪಿ‘ಯಡಿ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ ಟ್ರಾನ್ಸ್‌ಫರ್‌ (ಎನ್‌ಇಎಫ್‌ಟಿ), ಆರ್‌ಟಿಜಿಎಸ್‌ ಮತ್ತು  ಹಣಕಾಸು ಸಂದೇಶ ವ್ಯವಸ್ಥೆಗಳನ್ನು ಆರ್‌ಬಿಐನ ಇತರ ದತ್ತಾಂಶ ನಿರ್ವಹಣಾ ಕೇಂದ್ರಗಳು ನಿರ್ವಹಿಸಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಹಿವಾಟು, ಅಂತರ್‌ಬ್ಯಾಂಕ್‌ ವಹಿವಾಟುಗಳನ್ನೂ ಈ ಕೇಂದ್ರಗಳು ನಿರ್ವಹಿಸಲಿವೆ.

ಅಭೂತಪೂರ್ವ ಕ್ರಮ: ಹಣಕಾಸು ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಯಾವುದೇ ಬಗೆಯ ಅಡಚಣೆ ಎದುರಾಗದಂತೆ ನೋಡಿಕೊಳ್ಳಲು ಆರ್‌ಬಿಐ ಕೈಗೊಂಡಿರುವ ಈ ಕ್ರಮವು ಅಭೂತಪೂರ್ವವಾಗಿದೆ. ಇದುವರೆಗೂ ಯಾವುದೇ ದೇಶದ ಕೇಂದ್ರೀಯ ಬ್ಯಾಂಕ್‌ ಇಂತಹ ಕ್ರಮ ಕೈಗೊಂಡ ಉದಾಹರಣೆಯು ಇತಿಹಾಸದಲ್ಲಿಯೇ ಇಲ್ಲ. ಜಾಗತಿಕ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿಯೂ ಇಂತಹ ಕ್ರಮ ಕೈಗೊಂಡಿರಲಿಲ್ಲ ಎಂದು ಆರ್‌ಬಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

’ದೇಶಿ ಹಣಕಾಸು ವ್ಯವಸ್ಥೆಯಲ್ಲಿ ’ಬಿಸಿಪಿ‘ ಮಾದರಿಯನ್ನು ಇದೇ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. ವಿಶ್ವದ ಯಾವುದೇ ದೇಶದ ಕೇಂದ್ರೀಯ ಬ್ಯಾಂಕ್‌ ಇದನ್ನು ಅನುಸರಿಸಿಲ್ಲ. ಸಾಮಾನ್ಯವಾಗಿ ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ಸಮಸ್ಯೆ ಉದ್ಭವಿಸಿದಾಗ, ನೈಸರ್ಗಿಕ ಪ್ರಕೋಪಗಳು ಸಂಭವಿಸಿದಾಗ ‘ಬಿಸಿಪಿ‘ ಕೈಗೊಳ್ಳಲಾಗುತ್ತದೆ. ಆರ್‌ಬಿಐ ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಕ್ರಮ ಕೈಗೊಂಡಿದೆ.

150 ಜನರಿಗೆ ಸ್ಥಳಾವಕಾಶ ಇರುವ ಹೋಟೆಲ್‌ ಬಾಡಿಗೆಗೆ ಪಡೆದುಕೊಂಡು ‘ಸಮರ ಕೊಠಡಿ’ ಸ್ಥಾಪಿಸಲಾಗಿದೆ.

 ನಿರ್ವಹಣೆ, ಸುರಕ್ಷತೆ, ಅಡುಗೆ ಮನೆ, ಫ್ರಂಟ್ ಡೆಸ್ಕ್‌ ಮತ್ತು ಆಡಳಿತ ನಿರ್ವಹಣೆಗೆ 70 ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ಇವರೆಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ.  ಈ ಕೇಂದ್ರಕ್ಕೆ ಪೂರೈಕೆಯಾಗುವ ಆಹಾರ ಪದಾರ್ಥ ಸೇರಿದಂತೆ ಪ್ರತಿಯೊಂದು ಸರಕಿನ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಪ್ರತ್ಯೇಕ ಸಾರಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಎದುರಾಗುವಂತಹ ಪರಿಸ್ಥಿತಿ ಎದುರಿಸಲು ಇಲ್ಲಿ ಸಕಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.  ಪ್ರತಿಯೊಬ್ಬ ಸಿಬ್ಬಂದಿಯ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು