ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹರಿವಿಗೆ ಪ್ರೇರಣೆ : ಸಾಲ ನೀಡಿಕೆ ಹೆಚ್ಚಿಸಲು ಆರ್‌ಬಿಐ ಕ್ರಮ

Last Updated 17 ಏಪ್ರಿಲ್ 2020, 20:30 IST
ಅಕ್ಷರ ಗಾತ್ರ

ಮುಂಬೈ: ‘ಕೋವಿಡ್‌–19’ ಪಿಡುಗಿನಿಂದ ತೀವ್ರವಾಗಿ ಬಾಧಿತವಾಗಿರುವ ದೇಶಿಯ ಆರ್ಥಿಕತೆಗೆ ಚೇತರಿಕೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್‌ ಶುಕ್ರವಾರ ಎರಡನೇ ಕಂತಿನ ಉತ್ತೇಜನಾ ಕೊಡುಗೆ ಪ್ರಕಟಿಸಿದೆ.

ಬ್ಯಾಂಕ್‌ಗಳು ನೀಡುವ ಸಾಲದ ಪ್ರಮಾಣ ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿಸಿ, ನಗದು ಬಿಕ್ಕಟ್ಟು ನಿವಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ರಿವರ್ಸ್‌ ರೆಪೊ ದರ ಕಡಿತ, ನಬಾರ್ಡ್‌ ಸೇರಿದಂತೆ ಮೂರು ಸಂಸ್ಥೆಗಳಿಗೆ ಮರು ಹಣಕಾಸು ಸೌಲಭ್ಯ, ಲಾಭಾಂಶ ಪಾವತಿಗೆ ತಡೆ ಮತ್ತಿತರ ಉತ್ತೇಜನಾ ಕ್ರಮಗಳನ್ನು ಪ್ರಕಟಿಸಿದೆ.

ಅಲ್ಪಾವಧಿಗೆ ಅನ್ವಯಿಸುವ ಅಗ್ಗದ ರೆಪೊ ದರದಲ್ಲಿ ಬ್ಯಾಂಕ್‌ಗಳು ಆರ್‌ಬಿಐನಿಂದ ಎರಡರಿಂದ ಮೂರು ವರ್ಷಗಳ ಅವಧಿಯ ದೀರ್ಘಾವಧಿ ಸಾಲ ಪಡೆಯುವ (ಎಲ್‌ಟಿಆರ್‌ಒ) ಎರಡನೇ ಕಂತಿನ (2.0) ₹ 50 ಸಾವಿರ ಕೋಟಿ ಮೊತ್ತದ ನೆರವು ಇದರಲ್ಲಿ ಇದೆ. ಇದರ ಶೇ 50ರಷ್ಟನ್ನು ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಮತ್ತು ಕಿರು ಹಣಕಾಸು ಸಂಸ್ಥೆಗಳಿಗೆ ನಿಗದಿಪಡಿಸಲಾಗಿದೆ. ಇದರ ಪರಿಣಾಮವಾಗಿ ಈ ಎರಡೂ ವಲಯಗಳು ಎದುರಿಸುತ್ತಿರುವ ನಗದು ಬಿಕ್ಕಟ್ಟು ದೂರವಾಗಲಿದೆ. ಇವುಗಳು ನೀಡುವ ಸಾಲದ ಪ್ರಮಾಣವೂ ಹೆಚ್ಚಲಿದೆ.

ವಿಶೇಷ ಹಣಕಾಸು ನೆರವು

ಮಾರುಕಟ್ಟೆಯಿಂದ ಹಣ ಸಂಗ್ರಹಿಸಲು ಸಾಧ್ಯವಾಗದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌), ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ (ಎಸ್‌ಐಡಿಬಿಐ) ಮತ್ತು ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ಗೆ (ಎನ್‌ಎಚ್‌ಬಿ) ಒಟ್ಟಾರೆ₹ 50 ಸಾವಿರ ಕೋಟಿ ಮೊತ್ತದ ವಿಶೇಷ ಹಣಕಾಸು ನೆರವು ಪ್ರಕಟಿಸಲಾಗಿದೆ.

‘ಕೊರೊನಾ–2’ ವೈರಾಣು ಸೃಷ್ಟಿಸಿರುವ ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೇಂದ್ರೀಯ ಬ್ಯಾಂಕ್‌ ಬಳಿ ಇರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಾಗಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಭರವಸೆ ನೀಡಿದ್ದಾರೆ.

’ಅರ್ಥವ್ಯವಸ್ಥೆಗೆ ಬೆಂಬಲ ನೀಡಲು ಕಾಲ ಕಾಲಕ್ಕೆ ಹಲವಾರು ಕ್ರಮಗಳನ್ನು ಪ್ರಕಟಿಸಲಾಗುವುದು. ಭವಿಷ್ಯದಲ್ಲಿ ಎದುರಾಗುವ ಪರಿಸ್ಥಿತಿಗೆ ತಕ್ಕಂತೆ ಆರ್ಥಿಕತೆಯ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬಡ್ಡಿ ದರ ಕಡಿತದ ಸುಳಿವನ್ನೂ ನೀಡಿದ್ದಾರೆ.

ಲಾಭಾಂಶ ವಿತರಣೆಗೆ ತಡೆ

ಆರ್ಥಿಕತೆಗೆ ಬೆಂಬಲ ನೀಡಲು ಬಂಡವಾಳ ಕಾಯ್ದುಕೊಳ್ಳುವ ಉದ್ದೇಶಕ್ಕೆ ಮಾರ್ಚ್‌ಗೆ ಅಂತ್ಯಗೊಂಡ ಹಣಕಾಸು ವರ್ಷದ ಲಾಭಾಂಶ ವಿತರಣೆ ಮಾಡದಂತೆ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ಕೇಳಿಕೊಳ್ಳಲಾಗಿದೆ.

ಹಣದ ಪೂರೈಕೆ ನಿಯಂತ್ರಿಸುವ ರಿವರ್ಸ್‌ ರೆಪೊ ದರವನ್ನು ನಗದು ಹೊಂದಾಣಿಕೆ ಸೌಲಭ್ಯದಡಿ (ಎಲ್‌ಎಎಫ್‌) ಶೇ 0.25ರಷ್ಟು ಕಡಿಮೆ ಮಾಡಿದೆ. ಪರಿಷ್ಕೃತ ದರವು ತಕ್ಷಣದಿಂದ ಶೇ4 ರಿಂದ ಶೇ 3.75ಕ್ಕೆ ಇಳಿಯಲಿದೆ.

ಮಾರುಕಟ್ಟೆಯಿಂದ ಹಣ ಸಂಗ್ರಹಿಸಲು ಸಾಧ್ಯವಾಗದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌), ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ (ಎಸ್‌ಐಡಿಬಿಐ) ಮತ್ತು ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ಗೆ (ಎನ್‌ಎಚ್‌ಬಿ) ಒಟ್ಟಾರೆ₹ 50 ಸಾವಿರ ಕೋಟಿ ಮೊತ್ತದ ವಿಶೇಷ ಹಣಕಾಸು ನೆರವು ಪ್ರಕಟಿಸಲಾಗಿದೆ.

‘ಕೊರೊನಾ–2’ ವೈರಾಣು ಸೃಷ್ಟಿಸಿರುವ ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೇಂದ್ರೀಯ ಬ್ಯಾಂಕ್‌ ಬಳಿ ಇರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಾಗಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಭರವಸೆ ನೀಡಿದ್ದಾರೆ.

'ಅರ್ಥವ್ಯವಸ್ಥೆಗೆ ಬೆಂಬಲ ನೀಡಲು ಕಾಲ ಕಾಲಕ್ಕೆ ಹಲವಾರು ಕ್ರಮಗಳನ್ನು ಪ್ರಕಟಿಸಲಾಗುವುದು. ಭವಿಷ್ಯದಲ್ಲಿ ಎದುರಾಗುವ ಪರಿಸ್ಥಿತಿಗೆ ತಕ್ಕಂತೆ ಆರ್ಥಿಕತೆಯ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬಡ್ಡಿ ದರ ಕಡಿತದ ಸುಳಿವನ್ನೂ ನೀಡಿದ್ದಾರೆ.

ಷೇರುಪೇಟೆ ಸೂಚ್ಯಂಕ ಜಿಗಿತ

ಆರ್‌ಬಿಐನ ಹಣಕಾಸು ಶಕ್ತಿವರ್ಧಕ ಕೊಡುಗೆಗಳ ಕಾರಣಕ್ಕೆ ಮುಂಬೈ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಕಂಡು ಬಂದಿತು. ಸಂವೇದಿ ಸೂಚ್ಯಂಕವು 986 ಅಂಶಗಳ ಜಿಗಿತ ದಾಖಲಿಸಿತು. ಡಾಲರ್‌ ಎದುರು ರೂಪಾಯಿ ಬೆಲೆ 48 ಪೈಸೆ ಚೇತರಿಕೆ ಕಂಡಿತು.

ಸಂಪತ್ತು ವೃದ್ಧಿ

ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 2.83 ಲಕ್ಷ ಕೋಟಿಗಳಷ್ಟು ಹೆಚ್ಚಾಯಿತು. ಮಾರುಕಟ್ಟೆಯ ಬಂಡವಾಳ ಮೌಲ್ಯವು ₹ 123.50 ಲಕ್ಷ ಕೋಟಿಗೆ ತಲುಪಿತು.

ಪ್ರಶಂಸನೀಯ: ಉದ್ಯಮದ ಸ್ವಾಗತ

ಬ್ಯಾಂಕಿಂಗ್‌ ವಲಯದ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ಆರ್‌ಬಿಐ ಕೈಗೊಂಡಿರುವ ಉತ್ತೇಜನಾ ಕ್ರಮಗಳನ್ನು ಉದ್ಯಮ ಮತ್ತು ಬ್ಯಾಂಕಿಂಗ್‌ ವಲಯಗಳು ಸ್ವಾಗತಿಸಿವೆ.

‘ಹಣಕಾಸು ನೆರವಿನ ಬಿಕ್ಕಟ್ಟು ಎದುರಿಸುತ್ತಿರುವ ವಲಯಗಳಲ್ಲಿ ನಗದು ಲಭ್ಯತೆ ಹೆಚ್ಚಿಸಿರುವುದು ಪ್ರಶಂಸನೀಯ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮಹಾ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

‘ಮಾರುಕಟ್ಟೆಯ ಪರಿಸ್ಥಿತಿಗೆ ಆರ್‌ಬಿಐ ಅತ್ಯುತ್ತಮ ರೀತಿಯಲ್ಲಿ ಸ್ಪಂದಿಸಿದೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT