ಮನೆ, ನಿವೇಶನ ಖರೀದಿದಾರರಿಗೆ ಹೊರೆ

7

ಮನೆ, ನಿವೇಶನ ಖರೀದಿದಾರರಿಗೆ ಹೊರೆ

Published:
Updated:

ರಾಜಧಾನಿಯ ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೆ ಸ್ಥಿರಾಸ್ತಿಯ ಮಾರ್ಗದರ್ಶಿ ದರದ ಪರಿಷ್ಕರಣೆಯು ಅಡ್ಡ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಸರ್ಕಾರದ ಈ ಕ್ರಮ ಉದ್ಯಮದ ಬೆಳವಣಿಗೆಯ ವೇಗಕ್ಕೆ ಕಡಿವಾಣ ಹಾಕಿದಂತಾಗಿದ್ದು, ನಿವೇಶನ, ಮನೆ ಖರೀದಿಸುವವರಿಗೆ ಹೊರೆಯಾಗಲಿದೆ.

ಈಗಾಗಲೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ನೋಟು ರದ್ದತಿಯಿಂದಾಗಿ ಎರಡು ವರ್ಷಗಳಿಂದ ಸೊರಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮ, ಆರು ತಿಂಗಳಿಂದೀಚೆಗೆ ಚೇತರಿಕೆ ಕಂಡುಕೊಂಡಿತ್ತು. ಗ್ರಾಹಕರು ನಿವೇಶನ ಮತ್ತು ಮನೆ ಖರೀದಿಗೆ ಆಸಕ್ತಿ ತೋರುತ್ತಿದ್ದರು. ಆದರೆ ಇದೀಗ ಮಾರ್ಗದರ್ಶಿ ದರದ ಪರಿಷ್ಕರಣೆಯಿಂದಾಗಿ ಈ ಉದ್ಯಮ ಮತ್ತೆ ಸೊರಗುತ್ತದೆ ಎಂಬ ಆತಂಕ ಬಿಲ್ಡರ್‌ಗಳದ್ದು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮೂರು ವರ್ಷಗಳ ನಂತರ ಸ್ಥಿರಾಸ್ತಿಯ ಮಾರ್ಗದರ್ಶಿ ದರವನ್ನು ಪರಿಷ್ಕರಿಸಿದೆ. ರೈತರ ಸಾಲಮನ್ನಾಕ್ಕಾಗಿ ಹಣ ಕ್ರೂಡೀಕರಿಸಲು ಪಣತೊಟ್ಟಿರುವ ಸರ್ಕಾರ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೂ ಹೆಚ್ಚಿನ ಗುರಿ ನಿಗದಿಪಡಿಸಿದೆ. ಹಾಗಾಗಿ ಗುರಿ ಮುಟ್ಟಲು ಅಧಿಕ ರಾಜಸ್ವ ಸಂಗ್ರಹಿಸಬೇಕಾದ್ದರಿಂದ ಇಲಾಖೆ ಸ್ಥಿರಾಸ್ತಿ ಮಾರ್ಗದರ್ಶಿ ದರವನ್ನು ಶೇ 5ರಿಂದ ಶೇ 25ರವರೆಗೂ ಹೆಚ್ಚಿಸಿದೆ.

ಇದರಿಂದ ಸಹಜವಾಗಿಯೇ ನಿವೇಶನ ಮತ್ತು ಮನೆಗಳ ಬೆಲೆಯಲ್ಲಿ ಹೆಚ್ಚಳವಾಗುತ್ತದೆ. ಆಗ ಅವುಗಳ ನೋಂದಣಿಗೆ ತಗಲುವ ಶುಲ್ಕ ಮತ್ತು ಮುದ್ರಾಂಕ ಶುಲ್ಕವೂ ಏರಿಕೆಯಾಗುತ್ತದೆ. ಇವುಗಳ ಹೊರೆ ನೇರವಾಗಿ ಗ್ರಾಹಕರ ಮೇಲಾಗುವುದರಿಂದ ಅವರು ಖರೀದಿಗೆ ನಿರಾಸಕ್ತಿ ತೋರಬಹುದು ಎಂಬ ಆತಂಕ ಬಿಲ್ಡರ್‌ಗಳನ್ನು ಆವರಿಸಿದೆ.

ವೇತನವನ್ನೇ ಅವಲಂಬಿಸಿರುವ ಮಧ್ಯಮ ವರ್ಗದ ಜನರು ಮನೆ ಖರೀದಿಸುವ ಯೋಜನೆಯನ್ನು ಕೆಲ ಕಾಲ ಮುಂದಕ್ಕೆ ಹಾಕುವ ಸಾಧ್ಯತೆ ಇದೆ. ಇನ್ನೂ, ಮನೆ ಖರೀದಿ ಸಂಬಂಧ ಈಗಾಗಲೇ ‘ಸೇಲ್‌ ಅಗ್ರಿಮೆಂಟ್‌’ ಮಾಡಿಕೊಂಡಿರುವ ಗ್ರಾಹಕರು ಮಾರ್ಗದರ್ಶಿ ದರ ಹೆಚ್ಚಳವಾಗಿರುವುದರಿಂದ ಆಗುವ ಹೊರೆ ತಗ್ಗಿಸಿಕೊಳ್ಳಲು ರಿಯಾಯಿತಿ ಕೊಡುವಂತೆ ಬಿಲ್ಡರ್‌ಗಳ ದಂಬಾಲು ಬೀಳಬಹುದು. ಜನವರಿ 1ರಿಂದ ಹೊಸ ಮಾರ್ಗದರ್ಶಿ ದರ ಜಾರಿಯಾಗಲಿದೆ ಎಂಬುದನ್ನು ಅರಿತಿದ್ದ ಕೆಲ ಗ್ರಾಹಕರು ನವೆಂಬರ್‌, ಡಿಸೆಂಬರ್‌ನಲ್ಲಿಯೇ ಸ್ಥಿರಾಸ್ತಿಯನ್ನು ನೋಂದಣಿ ಮಾಡಿಸಿಕೊಂಡಿರುವುದರಿಂದ ಅವರಿಗಷ್ಟೇ ಅನುಕೂಲವಾಗಿದೆ.

‘ಮಾರ್ಗದರ್ಶಿ ದರ ಪರಿಷ್ಕರಿಸುವುದನ್ನು ಸರ್ಕಾರ ಮೊದಲೇ ತಿಳಿಸಿತ್ತು. ಅದು ಯಾವಾಗಿನಿಂದ ಜಾರಿಯಾಗುತ್ತದೆ ಎಂಬುದು ಖಚಿತವಾಗಿ ಗೊತ್ತಿರಲಿಲ್ಲ. ಹಾಗಾಗಿ ನಾವು ಡಿಸೆಂಬರ್‌ ತಿಂಗಳಿನಲ್ಲಿಯೇ ಬನಶಂಕರಿಯಲ್ಲಿ ನಿವೇಶನವೊಂದನ್ನು ನೋಂದಣಿ ಮಾಡಿಸಿಕೊಂಡೆವು. ಈ ಮೂಲಕ ನಾವು ಆಗಬಹುದಾದ ಹೊರೆಯನ್ನು ತಪ್ಪಿಸಿಕೊಂಡಿದ್ದೇವೆ’ ಎನ್ನುತ್ತಾರೆ ಉತ್ತರಹಳ್ಳಿಯ ನಿವಾಸಿ ಸಂಜಯ್‌.

‘ಸರ್ಕಾರದ ನಡೆ ಗೊತ್ತಿತ್ತು. ಆದರೆ ಬ್ಯಾಂಕ್‌ ಸಾಲ ಬೇಗ ಸಿಗಲಿಲ್ಲ. ಹಾಗಾಗಿ ನನಗೆ ಡಿಸೆಂಬರ್‌ನಲ್ಲಿ ಮನೆ ನೋಂದಾಯಿಸಲು ಆಗಲಿಲ್ಲ. ಈಗ ಜನವರಿಯಲ್ಲಿ ನೋಂದಾಯಿಸಬೇಕಾಗಿದೆ. ಇದರಿಂದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಾಗುತ್ತದೆ. ಇದು ನನಗೆ ಹೊರೆಯಾಗುತ್ತದೆ. ಆದರೂ ವಿಧಿಯಿಲ್ಲ, ಪಾವತಿಸಲೇ ಬೇಕು’ ಎನ್ನುತ್ತಾರೆ ರಾಜರಾಜೇಶ್ವರಿ ನಗರದ ನಿವಾಸಿ ಶಿವಕುಮಾರ್‌. 

ಚೇತರಿಕೆಗಿನ್ನೂ 6 ತಿಂಗಳು ಬೇಕು

ವೈಜ್ಞಾನಿಕವಾಗಿ ಮಾರ್ಗದರ್ಶಿ ದರವನ್ನು ಸರ್ಕಾರ ನಿಗದಿ ಮಾಡಿಲ್ಲ. ಕೆಲವೆಡೆ ಮಾರುಕಟ್ಟೆ ದರಕ್ಕಿಂತ ಮಾರ್ಗದರ್ಶಿ ದರವೇ ಹೆಚ್ಚಾಗಿದೆ. ಇದು ನಿವೇಶನ, ಮನೆ ಅಥವಾ ಫ್ಲ್ಯಾಟ್‌ ಖರೀದಿಸುವ ಗ್ರಾಹಕರಿಗೆ ಹೊರೆಯಾಗುತ್ತದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೂ ಇದು ಕೊಂಚ ಹಿನ್ನಡೆಯನ್ನುಂಟು ಮಾಡುತ್ತದೆ.

ಜಿಎಸ್‌ಟಿ, ನೋಟು ರದ್ದತಿಯಿಂದ ರಿಯಲ್‌ ಎಸ್ಟೇಟ್‌ ಉದ್ಯಮದ ವ್ಯಾಪಾರ ಒಂದೂವರೆ ವರ್ಷದಲ್ಲಿ ಶೇ 20ರಷ್ಟು ಕುಸಿತವಾಗಿತ್ತು. ಆದರೆ ಆರು ತಿಂಗಳಿಂದ ಶೇ 10ರಷ್ಟು ಪ್ರಮಾಣದಲ್ಲಿ ಚೇತರಿಕೆ ಕಂಡಿತ್ತು. ಇದೀಗ ಸರ್ಕಾರ ಮಾರ್ಗದರ್ಶಿ ದರ ಹೆಚ್ಚಿಸಿರುವುದು ಉದ್ಯಮವನ್ನು ಮತ್ತೆ ಕುಸಿಯುವಂತೆ ಮಾಡುತ್ತದೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಆರು ತಿಂಗಳಾದರೂ ಬೇಕಾಗುತ್ತದೆ. ಆದರೆ ಈಗಾಗಲೇ ನಿವೇಶನ, ಮನೆ ಖರೀದಿಸಿ ನೋಂದಾಯಿಸಿಕೊಂಡಿರುವ ನಗರದ ಗ್ರಾಹಕರಿಗೆ ಸರ್ಕಾರದ ಈ ನಿರ್ಧಾರ ಖುಷಿ ಕೊಡುತ್ತದೆ. ತಾವು ಖರೀದಿಸಿದ ಭೂಮಿಯ ಮಾರ್ಗದರ್ಶಿ ದರದ ಜತೆಗೆ ಮಾರುಕಟ್ಟೆ ದರವೂ ಇನ್ನಷ್ಟು ಹೆಚ್ಚಾಗುವುದರಿಂದ ಅವರಿಗೆ ಸಹಜವಾಗಿ ಸಂತಸವಾಗುತ್ತದೆ.

ಡಾ.ಎಸ್‌.ಪಿ. ದಯಾನಂದ, ಡಿಎಕ್ಸ್‌ ಮ್ಯಾಕ್ಸ್‌ನ ಕಾರ್ಯಕಾರಿ ನಿರ್ದೇಶಕ

**

ನಿರ್ಧಾರ ಸರಿಯಿಲ್ಲ

ಮಾರ್ಗದರ್ಶಿ ದರ ಪರಿಷ್ಕರಿಸಿದ್ದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಇನ್ನಷ್ಟು ಸೊರಗುತ್ತದೆ. ಪ್ರೋತ್ಸಾಹ ನೀಡಬೇಕಾಗಿದ್ದ ಸರ್ಕಾರಗಳು ಹೀಗೆ ಹೊಡೆತ ಕೊಡುತ್ತಿದ್ದರೆ ಉದ್ಯಮ ಬೆಳೆಯುವುದಾದರೂ
ಹೇಗೆ.

ಪ್ರದೀಪ್‌ ಜೊ, ಕಾನ್ಫಿಡರೇಷನ್‌ ಆಫ್‌ ರಿಯಲ್‌ ಎಸ್ಟೇಟ್‌ ಅಸೋಸಿಯೇಷನ್‌-ಸಿಆರ್‌ಇಎ ಅಧ್ಯಕ್ಷ

**

ಸಾಲದ ಜೊತೆಗೆ ಹೆಚ್ಚಿನ ಹೊರೆ

ಈಗಾಗಲೇ ಶೇ 18ರಷ್ಟು ಜಿಎಸ್‌ಟಿ ಹೊರೆ ಗ್ರಾಹಕರ ಮೇಲೆ ಬೀಳುತ್ತಿದೆ. ಈಗ ಮಾರ್ಗದರ್ಶಿ ದರವನ್ನೂ ಹೆಚ್ಚಿಸಿರುವುದು ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಮಾರಕವಾಗಿ ಪರಿಣಮಿಸಲಿದೆ. ಇದರಿಂದ ಅನಿವಾರ್ಯವಾಗಿ ಮನೆಯನ್ನು ಹೆಚ್ಚಿನ ಬೆಲೆಗೆ ಮಾರಬೇಕಾಗುತ್ತದೆ. ಅಂದಾಜು ಶೇ 3ರಿಂದ 4ರಷ್ಟು ಬೆಲೆ ಹೆಚ್ಚಾಗಬಹುದು. ಜತೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನೂ ಗ್ರಾಹಕರು ಭರಿಸಬೇಕಾಗುತ್ತದೆ. ವೇತನಾಧಾರಿತ ಗ್ರಾಹಕರಿಗೆ ಹೆಚ್ಚಿನ ಹೊರೆ ಆಗುತ್ತದೆ. ಮನೆ ಖರೀದಿಗೆ ಶೇ 80ರಷ್ಟು ಬ್ಯಾಂಕ್‌ ಸಾಲ ಪಡೆಯುವ ಗ್ರಾಹಕರಿಗಂತೂ ಹೆಚ್ಚುವರಿ ಹಣ ಹೊಂದಿಸುವುದು ಕಷ್ಟಸಾಧ್ಯವಾಗುತ್ತದೆ. ಇದೆಲ್ಲವನ್ನೂ ಅರಿತು ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿತ್ತು.

ಶ್ರೀಕಂಠ ಶಾಸ್ತ್ರಿ, ‘ಸಿಟ್ರಸ್‌ ವೆಂಚರ್ಸ್‌’ನ ನಿರ್ದೇಶಕ

**
ಪರಿಷ್ಕರಣೆ ವೈಜ್ಞಾನಿಕವಾಗಿ ಆಗಿಲ್ಲ

ನಗರದ ಕೆಲ ಭಾಗಗಳಲ್ಲಿ ಸರ್ಕಾರ ವೈಜ್ಞಾನಿಕವಾಗಿ ಮಾರ್ಗದರ್ಶಿ ದರ ಪರಿಷ್ಕರಿಸಿಲ್ಲ. ಅಂದರೆ ಕೆಲ ಭಾಗಗಳಲ್ಲಿ ಮಾರ್ಗದರ್ಶಿ ದರವು ಮಾರುಕಟ್ಟೆ ದರಕ್ಕಿಂತ ಹೆಚ್ಚಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ವೈಟ್‌ಫೀಲ್ಡ್‌, ಐಟಿ ಕಾರಿಡಾರ್, ಉತ್ತರಹಳ್ಳಿ ಸುತ್ತಮುತ್ತ ಮಾರುಕಟ್ಟೆ ದರಕ್ಕಿಂತ ಮಾರ್ಗದರ್ಶಿ ಬೆಲೆಯೇ ಹೆಚ್ಚಾಗಿದೆ. ಇದರಿಂದ ಗ್ರಾಹಕರು ಗೊಂದಲಕ್ಕೆ ಸಿಲುಕಿ, ಖರೀದಿಗೆ ಹಿಂದೇಟು ಹಾಕುತ್ತಾರೆ. ಅನಗತ್ಯವಾಗಿ ಭೂಮಿಯ ಬೆಲೆ ಹೆಚ್ಚಳವಾಗುತ್ತದೆ. ಖರೀದಿಸುವವರೇ ಇಲ್ಲದೇ ವಸತಿ ಯೋಜನೆಗಳು ಪಾಳು ಬೀಳುತ್ತವೆ ಎನ್ನುತ್ತಾರೆ ಬಿಲ್ಡರ್‌ಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 1

  Frustrated
 • 3

  Angry

Comments:

0 comments

Write the first review for this !