ಗುರುವಾರ , ಡಿಸೆಂಬರ್ 3, 2020
20 °C
ಹಣಕಾಸು ಕಾರ್ಯದರ್ಶಿ ಅಭಿಪ್ರಾಯ

ಜಿಎಸ್‌ಟಿ: ಸಾಲದ ಮೊತ್ತ ಸಕಾರಣದ್ದಾಗಿರಲಿ: ಕೇಂದ್ರ ಹಣಕಾಸು ಕಾರ್ಯದರ್ಶಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯಗಳು ಎದುರಿಸುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೊರತೆಯನ್ನು ಭರ್ತಿ ಮಾಡಿಕೊಳ್ಳಲು ಮಾಡುವ ಸಾಲದ ಮೊತ್ತವು ‘ಸಕಾರಣದ್ದಾಗಿರಬೇಕು’ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ. ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿರುವ ಸಾಲದ ಮೊತ್ತವನ್ನು ಒಪ್ಪಿಕೊಳ್ಳುವಂತೆ ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಮನವಿ ಮಾಡುವುದನ್ನು ಮುಂದುವರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಸಾಲದ ಮೊತ್ತವನ್ನು ಈಗ ಸಂಗ್ರಹಿಸಲಾಗುತ್ತಿರುವ ಜಿಎಸ್‌ಟಿ ಪರಿಹಾರ ಸೆಸ್‌ನಿಂದಲೇ ಮರುಪಾವತಿಸಲು ಅನುಕೂಲ ಆಗುವಂತೆ ಕೇಂದ್ರವು ರಾಜ್ಯಗಳಿಂದ ಒಪ್ಪಿಗೆ ಪಡೆದುಕೊಳ್ಳಲಿದೆ ಎಂದು ಅವರು ತಿಳಿಸಿದರು. ರಾಜ್ಯಗಳು ಎದುರಿಸುತ್ತಿರುವ ₹ 1.83 ಲಕ್ಷ ಕೋಟಿ ಜಿಎಸ್‌ಟಿ ಕೊರತೆಯನ್ನು ಭರ್ತಿ ಮಾಡಿಕೊಳ್ಳಲು ಕೇಂದ್ರ ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು 21 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳು ಇದುವರೆಗೆ ಒಪ್ಪಿವೆ. ಪ್ರಸ್ತಾವನೆಯ ಅನ್ವಯ, ಕೇಂದ್ರವು ಒಟ್ಟು ₹ 1.10 ಲಕ್ಷ ಕೋಟಿಯನ್ನು ಸಾಲವಾಗಿ ತಂದುಕೊಡಲಿದೆ. ಈ ಮೊತ್ತವು ಜಿಎಸ್‌ಟಿ ವ್ಯವಸ್ಥೆಯ ಅನುಷ್ಠಾನದಿಂದ ಆದ ಆದಾಯ ಕೊರತೆ ಎಂದು ಅಂದಾಜಿಸಲಾಗಿದೆ.

ಆದರೆ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸಗಡ, ಜಾರ್ಖಂಡ್ ರಾಜ್ಯಗಳು ಈ ಪ್ರಸ್ತಾವಕ್ಕೆ ಇನ್ನೂ ಒಪ್ಪಿಗೆ ಸೂಚಿಸಿಲ್ಲ. ‘ಕೇಂದ್ರವು ₹ 1.83 ಲಕ್ಷ ಕೋಟಿಯನ್ನು ಸಾಲ ಪಡೆದು ರಾಜ್ಯಗಳಿಗೆ ನೀಡಬೇಕು. ತೆರಿಗೆ ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ಕೋವಿಡ್–19ರಿಂದ ಆಗಿದ್ದು ಹಾಗೂ ಜಿಎಸ್‌ಟಿ ವ್ಯವಸ್ಥೆಯಿಂದಾಗಿ ಆಗಿದ್ದು ಎಂದು ವರ್ಗೀಕರಿಸುವುದು ಅಸಾಂವಿಧಾನಿಕ’ ಎಂದು ಈ ರಾಜ್ಯಗಳು ಹೇಳುತ್ತಿವೆ.

ಸಾಲವಾಗಿ ಪಡೆಯುವ ಮೊತ್ತವು ಹೆಚ್ಚಾಗಬಾರದು. ಸಮತೋಲನದ ಮಾರ್ಗವನ್ನು ಅನುಸರಿಸದೆ ಇದ್ದರೆ ಸಾಲದ ಮೇಲಿನ ಬಡ್ಡಿಯ ಹೊರೆಯು ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಂಡೆ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು