ಶನಿವಾರ, ಫೆಬ್ರವರಿ 27, 2021
19 °C

ಇಂಧನ ತೆರಿಗೆ ಇಳಿಸಿ: ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ತಗ್ಗಿಸಲು ಸುಂಕ ಕಡಿಮೆ ಮಾಡುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಪನೆ ನೀಡಿದ್ದರೂ, ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ತೈಲೋತ್ಪನ್ನಗಳ ಮೆಲಿನ ತೆರಿಗೆ, ಸುಂಕವನ್ನು ಕಡಿಮೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಪೆಟ್ರೋಲ್ ಮತ್ತು ಡೀಸೆಲ್‌ನ ಮಾರುಕಟ್ಟೆ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಗ್ಗಿಸುವುದರಿಂದ ಬೆಲೆ ಹೆಚ್ಚಳದ ಒತ್ತಡ ತುಸು ತಗ್ಗಬಹುದು. ಹಣದುಬ್ಬರ ದರವು ಹೆಚ್ಚಿನ ಅವಧಿಗೆ ಕಡಿಮೆ ಮಟ್ಟದಲ್ಲಿ ಇರುವಂತಹ ಪರಿಸ್ಥಿತಿ ಸೃಷ್ಟಿಯಾಗಬೇಕಿರುವುದು ಈ ಸಂದರ್ಭದ ಅಗತ್ಯ’ ಎಂದು ಎಂಪಿಸಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಫೆಬ್ರುವರಿ 3ರಿಂದ 5ರವರೆಗೆ ನಡೆದ ಎಂಪಿಸಿ ಸಭೆಯ ವಿವರಗಳನ್ನು ಆರ್‌ಬಿಐ ಸೋಮವಾರ ಬಹಿರಂಗಪಡಿಸಿದೆ. ರೆಪೊ ದರ ಎಷ್ಟಿರಬೇಕು ಎಂಬುದನ್ನು ತೀರ್ಮಾನಿಸಲು ಎಂಪಿಸಿ ಸಭೆ ಸೇರಿತ್ತು. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ಸೇರಿ ಆರು ಜನ ಈ ಸಮಿತಿಯ ಸದಸ್ಯರು.

‘ಆಹಾರ ಮತ್ತು ಇಂಧನವನ್ನು ಹೊರತುಪಡಿಸಿದರೆ, ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಡಿಸೆಂಬರ್‌ ತಿಂಗಳಲ್ಲಿ ಶೇ 5.5ರ ಮಟ್ಟದಲ್ಲಿ ಇದೆ. ಇದಕ್ಕೆ ಒಂದು ಕಾರಣ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಆಗುತ್ತಿರುವುದು ಹಾಗೂ ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ದೊಡ್ಡ ಪ್ರಮಾಣದಲ್ಲಿ ಪರೋಕ್ಷ ತೆರಿಗೆಗಳು ಇರುವುದು...’ ಎಂದು ದಾಸ್ ಅವರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಬೆಲೆ ಹೆಚ್ಚಳದ ಒತ್ತಡವನ್ನು ನಿಗ್ರಹಿಸಬೇಕು ಎಂದಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ತೆರಿಗೆ ತಗ್ಗಿಸುವುದು ಮುಖ್ಯವಾಗುತ್ತದೆ’ ಎಂದು ಕೂಡ ದಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಆರ್‌ಬಿಐ ಬೇರೆ ಮಾರ್ಗ ಬಳಸಿಯೂ ಹಣದುಬ್ಬರ ನಿಯಂತ್ರಿಸಬಹುದು. ಆದರೆ, ಹಾಗೆ ಮಾಡಿದರೆ ವ್ಯವಸ್ಥೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ. ಸಾಂಕ್ರಾಮಿಕ ತಂದ ಸಂಕಷ್ಟದಿಂದ ಹೊರಬರುವ ಹಂತದಲ್ಲಿ ಆರ್ಥಿಕತೆ ಇರುವಾಗ, ಹಣದ ಸರಾಗ ಹರಿವು ಇರಬೇಕಿರುವುದು ಮಹತ್ವದ್ದು. ಹಣದ ಹರಿವಿಗೆ ತಡೆ ಒಡ್ಡಿದರೆ ಆರ್ಥಿಕ ಬೆಳವಣಿಗೆ ಕುಸಿಯುತ್ತದೆ’ ಎಂದು ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನ ಅಸೋಸಿಯೇಟ್ ಫೆಲೊ ಸಾರ್ಥಕ್ ಪ್ರಧಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ತೈಲ ಬೆಲೆ ಹೆಚ್ಚಳದ ಪರಿಣಾಮವಾಗಿ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಹಣ
ದುಬ್ಬರ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಣದುಬ್ಬರ ಹೆಚ್ಚಳವಾದರೆ ರೆಪೊ ದರ ತಗ್ಗಿಸಲು ಆರ್‌ಬಿಐಗೆ ಅವಕಾಶ ಸಿಗದಂತೆ ಆಗುತ್ತದೆ. ‘ತೈಲೋತ್ಪನ್ನಗಳ ಮೇಲಿನ ಮೌಲ್ಯವರ್ಧಿತ (ವ್ಯಾಟ್‌) ತೆರಿಗೆಯನ್ನು ತಕ್ಷಣಕ್ಕೆ ಇಳಿಸುವ ಸಾಧ್ಯತೆ ಇಲ್ಲ’ ಎಂದು ರಾಜ್ಯ ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು