ಶನಿವಾರ, ಮೇ 28, 2022
27 °C

ಹಿಂದಿ ಬರದಿರುವುದಕ್ಕೆ ತಮಿಳಿಗನಿಗೆ ರಿಫಂಡ್ ನಿರಾಕರಣೆ: ಝೊಮಾಟೊ ವಿರುದ್ಧ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ದಕ್ಷಿಣ ಭಾರತದಲ್ಲಿ ಫುಡ್‌ ಡೆಲಿವರಿ ಅಪ್ಲಿಕೇಷನ್ ಝೊಮಾಟೊ ವಿರುದ್ಧ ಅಭಿಯಾನ ಆರಂಭವಾಗಿದೆ. ಹಿಂದಿ ರಾಷ್ಟ್ರಭಾಷೆ ಮತ್ತು ದೇಶದ ಎಲ್ಲರೂ ಅದನ್ನು ಕಲಿಯಬೇಕು ಎಂದು ಝೊಮಾಟೊ ಏಜೆಂಟ್ ಹೇಳಿದ್ದು ಮತ್ತು ಅದನ್ನು ಝೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್‌ ಅವರು ಸಮರ್ಥಿಸಿಕೊಂಡಿದ್ದು, ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಆಕ್ರೋಶದ ಪರಿಣಾಮ ಝೊಮಾಟೊ ಷೇರುಮೌಲ್ಯ ಕುಸಿತವಾಗಿದೆ.

ತಮಿಳುನಾಡಿನ ವಿಕಾಸ್ ಎಂಬ ಯುವಕ ಸೋಮವಾರ ಝೊಮಾಟೊದಲ್ಲಿ ಊಟವನ್ನು ಬುಕ್ ಮಾಡಿದ್ದರು. ಊಟ ಬರದೇ ಇದ್ದ ಕಾರಣ, ಪಾವತಿ ಮಾಡಿರುವ ಹಣವನ್ನು ವಾಪಸ್ ಮಾಡಲು ಮನವಿ ಮಾಡಿದ್ದರು. ಆದರೆ ಝೊಮಾಟೊ ಗ್ರಾಹಕ ಸೇವೆಗಳ ಏಜೆಂಟ್‌ ಹಿಂದಿ ಬರದೇ ಇರುವ ಕಾರಣಕ್ಕೆ, ವಿಕಾಸ್‌ ಅವರ ಮನವಿಯನ್ನು ತಿರಸ್ಕರಿಸಿದ್ದರು. ಜತೆಗೆ ಆ ಏಜೆಂಟ್, ‘ಹಿಂದಿ ರಾಷ್ಟ್ರಭಾಷೆ ಎಂಬ ಮಾಹಿತಿ ನಿಮಗೆ ಗೊತ್ತಿರಲಿ. ದೇಶದ ಎಲ್ಲರೂ ಹಿಂದಿಯನ್ನು ಅಲ್ಪಸ್ವಲ್ಪವಾದರೂ ಕಲಿತಿರಬೇಕು’ ಎಂದು ವಿಕಾಸ್‌ ಅವರಿಗೆ ಸಂದೇಶ ಕಳುಹಿಸಿದ್ದರು.

ಇದನ್ನು ವಿರೋಧಿಸಿದ್ದ ವಿಕಾಸ್ ಅವರು, ‘ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ. ಅದನ್ನು ಎಲ್ಲರೂ ಕಲಿಯಬೇಕಿಲ್ಲ. ನೀವು ತಮಿಳುನಾಡಿನಲ್ಲಿ ವ್ಯವಹಾರ ಮಾಡುತ್ತಿದ್ದೀರಿ, ನೀವು ತಮಿಳು ಕಲಿಯಿರಿ’ ಎಂದು ಟ್ವೀಟ್ ಮಾಡಿದ್ದರು. ಜತೆಗೆ ಝೊಮಾಟೊ ಏಜೆಂಟ್ ಕಳುಹಿಸಿದ್ದ ಸಂದೇಶದ ಸ್ಕ್ರೀನ್‌ಶಾಟ್‌ ಅನ್ನು ಹಂಚಿಕೊಂಡಿದ್ದರು. ವಿಕಾಸ್ ಅವರ ಬೆಂಬಲಕ್ಕೆ ತಮಿಳರು, ಕನ್ನಡಿಗರು ಮತ್ತು ಮಲಯಾಳಿಗಳು ಧಾವಿಸಿದರು. ಟ್ವಿಟರ್‌ನಲ್ಲಿ ಈ ವಿಚಾರ ಟ್ರೆಂಡ್ ಆಯಿತು.

ಇದರ ಬೆನ್ನಲ್ಲೇ, ವಿಕಾಸ್ ಅವರ ಕ್ಷಮೆ ಯಾಚಿಸಿ ಝೊಮಾಟೊ ತಮಿಳು ಭಾಷೆಯಲ್ಲಿ ಟ್ವೀಟ್ ಮಾಡಿತು. ‘ವಿಕಾಸ್‌ ಅವರ ಕ್ಷಮೆ ಯಾಚಿಸುತ್ತೇವೆ ಮತ್ತು ಅವರೊಂದಿಗೆ ವ್ಯವಹರಿಸಿದ ಏಜೆಂಟ್ ಅನ್ನು ತೆಗೆದುಹಾಕಿದ್ದೇವೆ’ ಎಂದು ಟ್ವೀಟ್ ಮಾಡಿತು. ಆಗ ವಿವಾದ ತಣ್ಣಗಾಯಿತು.

ಆದರೆ ಮಂಗಳವಾರ ಮಧ್ಯಾಹ್ನದ ವೇಳೆಗೆ ಝೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರು ಟ್ವೀಟ್ ಮಾಡಿದರು. ಅವರ ಟ್ವೀಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

‘ಗ್ರಾಹಕ ಸೇವೆಗಳ ಸೇವೆಯಲ್ಲಿರುವ ನಮ್ಮ ಕಂಪನಿಯ ಕೆಲವು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಹೀಗೆ ಆಗಿದೆ. ಆದರೆ ಇದು ರಾಷ್ಟ್ರಮಟ್ಟದ ವಿವಾದವಾದದ್ದು ವಿಷಾದಕರ. ನಮ್ಮ ದೇಶದಲ್ಲಿ ಸಹಿಷ್ಣುತೆ ಇನ್ನೂ ಹೆಚ್ಚಿನ ಮಟ್ಟದಲ್ಲಿರಬೇಕಿತ್ತು. ಯಾರನ್ನು ದೂರುವುದು?’ ಎಂದು ಒಂದು ಟ್ವೀಟ್‌ ಮಾಡಿದ್ದರು.

‘ಒಂದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ, ನಮ್ಮ ಕಾಲ್‌ಸೆಂಟರ್‌ಗಳಲ್ಲಿ ಕೆಲಸ ಮಾಡುವವರು ಇನ್ನೂ ಯುವಕರು. ಅವರು ತಮ್ಮ ಉದ್ಯೋಗದ ಆರಂಭದ ದಿನಗಳಲ್ಲಿ ಇದ್ದಾರೆ. ಅವರಿನ್ನೂ ಕಲಿಯಬೇಕು. ಅವರು ಭಾಷೆ ಮತ್ತು ಪ್ರಾದೇಶಿಕ ಭಾವನೆಗಳ ವಿಚಾರದಲ್ಲಿ ಪರಿಣತರಲ್ಲ, ನನಗೂ ಅವೆಲ್ಲಾ ಗೊತ್ತಿಲ್ಲ. ಬೇರೆಯವರ ಅಸಾಮರ್ಥ್ಯವನ್ನು ನಾವು ಸಹಿಸಿಕೊಳ್ಳಬೇಕು ಮತ್ತು ಪರಸ್ಪರ ಭಾಷೆ, ಭಾವನೆಗಳನ್ನು ಗೌರವಿಸಬೇಕು. ಆ ಏಜೆಂಟ್ ಅನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಟ್ವೀಟ್ ಮಾಡಿದ್ದರು.

ದೇಶದಲ್ಲಿ ಇನ್ನಷ್ಟು ಸಹಿಷ್ಣುತೆ ಇರಬೇಕಿತ್ತು ಎಂದು ದೀಪಿಂದರ್ ಗೋಯಲ್‌ ಟ್ವೀಟ್ ಮಾಡಿದ್ದಕ್ಕೆ ತಮಿಳರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳರು #Hindi_Theriyathu_Poda, ತಮಿಳರು, ಕನ್ನಡಿಗರು ಮತ್ತು ಮಲಯಾಳಿಗಳು #RejectZomato, ಮತ್ತು # HindiIsNotNationalLanguage ಹ್ಯಾಷ್‌ಟ್ಯಾಗ್‌ಗಳಲ್ಲಿ ಟ್ವೀಟ್ ಮಾಡಿದ್ದಾರೆ. ಝೊಮಾಟೊವನ್ನು ತಿರಸ್ಕರಿಸುವಂತೆ ಕರೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು