ನವದೆಹಲಿ: ಜರ್ಮನಿ ಮೂಲದ ‘ಮೆಟ್ರೊ ಕ್ಯಾಶ್ ಆ್ಯಂಡ್ ಕ್ಯಾರಿ’ಯ ಭಾರತದ ವಹಿವಾಟನ್ನು ರಿಲಯನ್ಸ್ ಇಂಡಸ್ಟ್ರೀಸ್ ₹ 4,060 ಕೋಟಿಗೆ ಖರೀದಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಮೆಟ್ರೊ ಮಾಲೀಕತ್ವದಲ್ಲಿನ ಸಗಟು ವಿತರಣಾ ಕೇಂದ್ರಗಳು, ಜಮೀನು ಮತ್ತು ಇತರ ಆಸ್ತಿಗಳು ಖರೀದಿಯ ಭಾಗವಾಗಿರಲಿವೆ. ಈ ಖರೀದಿಯು ರಿಲಯನ್ಸ್ ರಿಟೇಲ್ ಕಂಪನಿಗೆ ತನ್ನ ವಹಿವಾಟು ವಿಸ್ತರಿಸಲು ನೆರವಾಗಲಿದೆ.
ರಿಲಯನ್ಸ್ ಮತ್ತು ಮೆಟ್ರೊ ನಡುವೆ ಈ ಖರೀದಿಯ ವಿಚಾರವಾಗಿ ಹಲವು ತಿಂಗಳುಗಳಿಂದ ಮಾತುಕತೆಗಳು ನಡೆಯುತ್ತಿದ್ದವು. ಜರ್ಮನಿಯ ಮಾತೃಸಂಸ್ಥೆಯು ರಿಲಯನ್ಸ್‌ನ ಪ್ರಸ್ತಾವಕ್ಕೆ ಕಳೆದ ವಾರ ಒಪ್ಪಿಗೆ ನೀಡಿದೆ ಎಂದು ಗೊತ್ತಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಮೆಟ್ರೊ ಹಾಗೂ ರಿಲಯನ್ಸ್ ವಕ್ತಾರರು ನಿರಾಕರಿಸಿದ್ದಾರೆ. ಒಟ್ಟು 34 ದೇಶಗಳಲ್ಲಿ ವಹಿವಾಟು ಹೊಂದಿರುವ ಮೆಟ್ರೊ, ಭಾರತದ ಮಾರುಕಟ್ಟೆಯನ್ನು 2003ರಲ್ಲಿ ಪ್ರವೇಶಿಸಿದೆ.
ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ, ತುಮಕೂರು, ಹುಬ್ಬಳ್ಳಿ ಸೇರಿದಂತೆ ಹಲವು ನಗರಗಳಲ್ಲಿ ಮೆಟ್ರೊ ಮಳಿಗೆಗಳನ್ನು ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.