ಕರ್ನಾಟಕದಲ್ಲಿ ₹ 52 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದ: ಬೊಮ್ಮಾಯಿ

ಬೆಂಗಳೂರು: ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಎರಡು ದೊಡ್ಡ ಕಂಪನಿಗಳು ಕರ್ನಾಟಕದಲ್ಲಿ ₹52 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸಮ್ಮುಖದಲ್ಲಿ ಎರಡೂ ಕಂಪನಿಗಳ ಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಂಧನ ವಲಯದಲ್ಲಿ ₹50 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ರೆನ್ಯೂ ಪವರ್ ಕಂಪನಿ ಹಾಗೂ ₹2 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಲುಲು ಗ್ರೂಪ್ ಇಂಟರ್ ನ್ಯಾಷನಲ್ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ.
‘ಈ ಎರಡೂ ಒಪ್ಪಂದಗಳಿಂದ ಇಂಧನ ವಲಯದ ಅಭಿವೃದ್ಧಿಯಲ್ಲಿ ಮಹಾ ಮೈಲುಗಲ್ಲನ್ನು ತಲುಪಲು ಸಾಧ್ಯ ಹಾಗೂ ಸುಮಾರು 30 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯ ಅವಕಾಶ ತೆರೆದುಕೊಳ್ಳಲಿದೆ. ದಾವೋಸ್ ಭೇಟಿ ಅತ್ಯಂತ ಫಲಪ್ರದವಾಗಿದೆ’ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.
ತೋರಿದ ಕಂಪನಿಗಳು
* ಸೀಮೆನ್ಸ್ ಸಂಸ್ಥೆ: ಬೆಂಗಳೂರಿನಲ್ಲಿ 2 ಯೋಜನೆಗಳನ್ನು ಸೀಮೆನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಬಿಯಾಂಡ್ ಬೆಂಗಳೂರು ಯೋಜನೆಡಿ ಹುಬ್ಬಳ್ಳಿ-ಧಾರವಾಡ, ತುಮಕೂರು ಮತ್ತು ಮೈಸೂರು ನಗರಗಳಲ್ಲಿ ಹೂಡಿಕೆ ಮಾಡುವ ಚರ್ಚೆ ನಡೆದಿದೆ.
* ಡಸ್ಸಾಲ್ಟ್ಸ್ ಸಿಸ್ಟಮ್ಸ್: ವಿದ್ಯುತ್ ವಾಹ ನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ , ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಡಸ್ಸಾಲ್ಟ್ಸ್ಸಿಸ್ಟಮ್ಸ್ ಉತ್ಸಾಹ ತೋರಿದೆ.
* ನೆಸ್ಲೆ ಸಂಸ್ಥೆ: ನಂಜನಗೂಡಿನಲ್ಲಿ ನೆಸ್ಲೆ ಇನ್ಸ್ಟಂಟ್ ಕಾಫಿ ಕಾರ್ಖಾನೆ ನವೀಕರಣ ಹಾಗೂ ವಿಸ್ತರಣಾ ಕಾರ್ಯಕ್ಕೆ ಆಸಕ್ತಿ ತೋರಿದೆ.
* ಭಾರ್ತಿ ಎಂಟರ್ ಪ್ರೈಸಸ್: ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಓ ಸುನಿಲ್ ಭಾರ್ತಿ ಮಿತ್ತಲ್ ಅವರು ರಾಜ್ಯದಲ್ಲಿ ಇನ್ನೊಂದು ಮೆಗಾ ಡೇಟಾ ಸೆಂಟರ್ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
* ಐಕಿಯ ಸ್ಟೋರ್: ಇಂಇಂಗ್ಕಾ ಗ್ರೂಪ್ (ಐಕಿಯ) ಸಿಇಓ. ಜೆಸ್ಪರ್ ಬ್ರಾಡಿನ್ ಅವರು ರಾಜ್ಯದಲ್ಲಿ ಇನ್ನಷ್ಟು ಐಕಿಯ ಸ್ಟೋರ್ ತೆರೆಯುವ ಬಗ್ಗೆ ಆಸಕ್ತಿ ತೋರಿದ್ದಾರೆ. ಇದಲ್ಲದೇ, ನೋಕಿಯಾ, ಹೀರೊ ಮೋಟೋ ಕಾರ್ಪ್, ಎ ಬಿ ಇನ್ ಬೇವ್ ಸಂಸ್ಥೆ, ಆರ್ಸೆಲರ್ ಮಿತ್ತಲ್, ಅದಾನಿ ಗ್ರೂಪ್, ಜಾನ್ಸನ್ ಕಂಟ್ರೋಲ್ಸ್, ಹನಿವೆಲ್ ಕಂಪನಿ, ಐಬಿಎಂ, ಬೈಜೂಸ್, ಮೀಷೊ ಸಂಸ್ಥೆಗಳೊಂದಿಗೆ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಸಮಾಲೋಚನೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.