ಗುರುವಾರ , ಡಿಸೆಂಬರ್ 12, 2019
17 °C

ಆರ್‌ಬಿಐ ಬಡ್ಡಿ ದರ ಕಡಿತ: ಗೃಹ, ವಾಹನ ಸಾಲ ಅಗ್ಗ?

Published:
Updated:

ಮುಂಬೈ (ಪಿಟಿಐ): ನಿರೀಕ್ಷೆಯಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ಪ್ರಸಕ್ತ ಸಾಲಿನಲ್ಲಿ ಮೂರನೇ ಬಾರಿಗೆ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25 ರಷ್ಟು ತಗ್ಗಿಸಿದೆ.

ರೆಪೊ ಮತ್ತು ರಿವರ್ಸ್ ರೆಪೊ ದರಗಳು ಕ್ರಮವಾಗಿ ಶೇ 5.75 ಮತ್ತು ಶೇ 5.50ಕ್ಕೆ ಕಡಿಮೆಯಾಗಿವೆ. ವಾಣಿಜ್ಯ ಬ್ಯಾಂಕ್‌ಗಳು ಇದರ ಪ್ರಯೋಜ ನವನ್ನು ಗ್ರಾಹಕರಿಗೆ ತ್ವರಿತವಾಗಿ ವರ್ಗಾಯಿಸಲಿವೆ ಎಂದು ನಿರೀಕ್ಷಿಸಲಾಗಿದೆ. ಗೃಹ, ವಾಹನ, ಕಾರ್ಪೊರೇಟ್‌ ಸಾಲಗಳ ಬಡ್ಡಿ ದರಗಳು ಸದ್ಯದಲ್ಲೇ ಅಗ್ಗವಾಗುವ ಸಾಧ್ಯತೆ ಇದೆ.

ಮಂದಗತಿಯಲ್ಲಿ ಸಾಗಿರುವ ದೇಶಿ ಆರ್ಥಿಕತೆಯ ಬೆಳವಣಿಗೆ ದರಕ್ಕೆ ಚೇತರಿಕೆ ನೀಡಲು ಮತ್ತು ಬಂಡವಾಳ ಹೂಡಿಕೆಗೆ ಉತ್ತೇಜನ ದೊರೆಯಲು ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಎಲ್ಲ ಆರು ಮಂದಿ ಸದಸ್ಯರು ಸರ್ವ ಸಮ್ಮತಿಯಿಂದ ಬಡ್ಡಿ ದರ ಕಡಿತವನ್ನು ಅನುಮೋದಿಸಿದ್ದಾರೆ. ಮುಂಬರುವ ದಿನಗಳಲ್ಲೂ ಬಡ್ಡಿ ದರ ಕಡಿತದ ಸಾಧ್ಯತೆಯನ್ನೂ ಮುಕ್ತವಾಗಿ ಇರಿಸಿಕೊಳ್ಳಲಾಗಿದೆ. ರೆಪೊ ದರ ಶೇ 5.75ರಷ್ಟಾಗಿರುವುದು ಒಂಬತ್ತು ವರ್ಷಗಳಲ್ಲಿಯೇ ಕನಿಷ್ಠ ಮಟ್ಟವಾಗಿದೆ. 2010ರಲ್ಲಿ ಈ ದರ ಇದೇ ಮಟ್ಟದಲ್ಲಿತ್ತು.

ಮೂರು ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಗಳಲ್ಲಿ ಬಡ್ಡಿ ದರ ಕಡಿತದ ಒಟ್ಟಾರೆ ಮಟ್ಟವು ಶೇ 0.75
ರಷ್ಟಾಗಿದೆ. ಇದುವರೆಗಿನ ಬಡ್ಡಿ ದರ ಕಡಿತದ ನಿರ್ಧಾರವನ್ನು ಬ್ಯಾಂಕ್‌ಗಳು ಸಮರ್ಪಕ ರೀತಿಯಲ್ಲಿ ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಆಶಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು