ಗುರುವಾರ , ನವೆಂಬರ್ 21, 2019
20 °C
ಆಹಾರ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ: 14 ತಿಂಗಳ ಗರಿಷ್ಠ ಮಟ್ಟಕ್ಕೆ ಸಿಪಿಐ

ಚಿಲ್ಲರೆ ಹಣದುಬ್ಬರ ಏರಿಕೆ

Published:
Updated:
Prajavani

ನವದೆಹಲಿ: ಆಹಾರ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದರಿಂದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 3.99ರಷ್ಟು ಏರಿಕೆಯಾಗಿದೆ. 14 ತಿಂಗಳ ಬಳಿಕ ಈ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಈ ಮಾಹಿತಿ ನೀಡಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ 3.28ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಶೇ 0.71ರಷ್ಟು ಹೆಚ್ಚಾಗಿದೆ. 2018ರ ಸೆಪ್ಟೆಂಬರ್‌ನಲ್ಲಿದ್ದ ಶೇ 3.70ಕ್ಕೆ ಹೋಲಿಸಿದರೆ ಈ ಬಾರಿ ಶೇ 0.29ರಷ್ಟು ಹೆಚ್ಚಾಗಿದೆ. 

ಆಹಾರ ಉತ್ಪನ್ನಗಳ ಬೆಲೆ ಏರಿಕೆಯು ಶೇ 2.99 ರಿಂದ ಶೇ 5.11ಕ್ಕೆ ತಲುಪಿದೆ.

ಚಿಲ್ಲರೆ ಹಣದುಬ್ಬರವನ್ನು ಶೇ 4ರಲ್ಲಿ ನಿಯಂತ್ರಿಸುವಂತೆ ಕೇಂದ್ರ ಸರ್ಕಾರವು ಆರ್‌ಬಿಐಗೆ ಹೇಳಿದೆ. ಸೆಪ್ಟೆಂಬರ್‌ ತಿಂಗಳ ದರವು ಅದರ ಸಮೀಪದಲ್ಲಿ ಇದ್ದರೂ ಡಿಸೆಂಬರ್‌ನಲ್ಲಿ ಇನ್ನೊಂದು ಹಂತದ ಬಡ್ಡಿದರ ಕಡಿತ ಆಗಲಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮಾರುಕಟ್ಟೆಗೆ ಹೊಸ ಬೆಳೆ ಬರಲಿದ್ದು, ಆಹಾರ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಆಗಲಿದೆ. ಇದರಿಂದ ಹಣದುಬ್ಬರದ ಪ್ರಮಾಣವೂ ತಗ್ಗಲಿದೆ. ಇದು ಶೇ 0.25ರಷ್ಟು ಬಡ್ಡಿದರ ಕಡಿತಕ್ಕೆ ದಾರಿ ಮಾಡಿಕೊಡಲಿದೆ ಎಂದು ಎಲಾರಾ ಕ್ಯಾಪಿಟಲ್‌ನ ಉಪಾಧ್ಯಕ್ಷೆ ಗರಿಮಾ ಕಪೂರ್‌ ಅಭಿಪ್ರಾಯಪಟ್ಟಿದ್ದಾರೆ.

ಸಗಟು ಹಣದುಬ್ಬರ ಶೇ 0.33ಕ್ಕೆ ಇಳಿಕೆ

ಆಹಾರಯೇತರ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ ಸಗಟು ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 0.33ಕ್ಕೆ ಇಳಿಕೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಆಗಸ್ಟ್‌ನಲ್ಲಿ ಶೇ 1.08ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಶೇ 0.75ರಷ್ಟು ಇಳಿಕೆಯಾಗಿದೆ.

2018ರ ಸೆಪ್ಟೆಂಬರ್‌ನಲ್ಲಿ ಶೇ 5.22ರಷ್ಟಿತ್ತು. ಇದಕ್ಕೆ ಹೋಲಿಸಿದರೂ ಶೇ 4.44ರಷ್ಟು ಕಡಿಮೆಯಾಗಿದೆ.

ಪ್ರತಿಕ್ರಿಯಿಸಿ (+)