ಆರ್‌ಐಎಲ್‌: ₹ 10,251 ಕೋಟಿ ಲಾಭ

7
ತ್ರೈಮಾಸಿಕ ಸಾಧನೆ: ಮೊದಲ ಖಾಸಗಿ ಸಂಸ್ಥೆಯ ಹೆಗ್ಗಳಿಕೆ

ಆರ್‌ಐಎಲ್‌: ₹ 10,251 ಕೋಟಿ ಲಾಭ

Published:
Updated:

ನವದೆಹಲಿ: ತ್ರೈಮಾಸಿಕ ಹಣಕಾಸು ಸಾಧನೆಯಲ್ಲಿ ₹ 10 ಸಾವಿರ ಕೋಟಿಗಿಂತ ಹೆಚ್ಚಿನ ನಿವ್ವಳ ಲಾಭ ಮಾಡಿದ ದೇಶದ ಮೊದಲ ಖಾಸಗಿ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಪಾತ್ರವಾಗಿದೆ.

ಮುಕೇಶ್‌ ಅಂಬಾನಿ ಒಡೆತನದ ‘ಆರ್‌ಐಎಲ್‌’, 2018–19ನೆ ಹಣಕಾಸು ವರ್ಷದ ಡಿಸೆಂಬರ್‌ ಅಂತ್ಯಕ್ಕೆ ಕೊನೆಗೊಂಡಿರುವ ಮೂರನೇ ತ್ರೈಮಾಸಿಕದಲ್ಲಿ ₹ 10,251 ಕೋಟಿ ನಿವ್ವಳ ಲಾಭ ಗಳಿಸಿದೆ. ದೇಶದಲ್ಲಿನ ಯಾವುದೇ ಖಾಸಗಿ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆಯಲ್ಲಿನ ಗರಿಷ್ಠ ನಿವ್ವಳ ಲಾಭ ಇದಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿನ ನಿವ್ವಳ ಲಾಭವು ₹ 9,420 ಕೋಟಿಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ಲಾಭದ ಪ್ರಮಾಣವು ಶೇ 8.8ರಷ್ಟು ಹೆಚ್ಚಳವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅಗ್ಗವಾಗಿದ್ದರಿಂದ ತೈಲ ಶುದ್ಧೀಕರಣ ಘಟಕಗಳ ಲಾಭದಲ್ಲಿ ಕುಸಿತವಾಗಿದ್ದರೂ, ಪೆಟ್ರೊಕೆಮಿಕಲ್ಸ್‌, ರಿಟೇಲ್‌ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿನ ದಾಖಲೆ ಪ್ರಮಾಣದ ಗಳಿಕೆಯಿಂದ ಈ ಭಾರಿ ಪ್ರಮಾಣದ ಲಾಭ ಗಳಿಸಲು ಸಾಧ್ಯವಾಗಿದೆ. ಸಂಸ್ಥೆಯ ವರಮಾನವು ಶೇ 56ರಷ್ಟು ಏರಿಕೆಯಾಗಿ ₹ 1,71,336 ಕೋಟಿಗೆ ತಲುಪಿದೆ.

ಕೊಡುಗೆ: ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ರಿಟೇಲ್‌ ಮಳಿಗೆಗಳನ್ನು ಆರಂಭಿಸಿದೆ. ಜಿಯೊ ಮೊಬೈಲ್‌ಗೆ 2.8 ಕೋಟಿ ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಇವೆಲ್ಲವೂ ಲಾಭದ ಪ್ರಮಾಣವು ಗಣನೀಯವಾಗಿ ಏರಿಕೆಯಾಗಲು ಕಾರಣವಾಗಿದೆ.

 ಕೇಂದ್ರ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) 2013ರ ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡಿದ್ದ ತ್ರೈಮಾಸಿಕದಲ್ಲಿ ₹ 14,513 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿತ್ತು.ಒಂದು ವರ್ಷದ ಸಬ್ಸಿಡಿ ಮೊತ್ತವನ್ನು ಒಂದೇ ತ್ರೈಮಾಸಿಕದಲ್ಲಿ ಪಾವತಿಸಿದ್ದರಿಂದ ಈ ಗರಿಷ್ಠ ಮೊತ್ತದ ಲಾಭ ಸಾಧ್ಯವಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !