ತೀವ್ರಗೊಂಡ ವಾಣಿಜ್ಯ ಸಮರ: ರೂಪಾಯಿ ಬೆಲೆ 72.45ಕ್ಕೆ ಕುಸಿತ

7
ವ್ಯಾಪಾರ ಕೊರತೆ ಹೆಚ್ಚಳ

ತೀವ್ರಗೊಂಡ ವಾಣಿಜ್ಯ ಸಮರ: ರೂಪಾಯಿ ಬೆಲೆ 72.45ಕ್ಕೆ ಕುಸಿತ

Published:
Updated:
Deccan Herald

ಮುಂಬೈ: ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು ಸೋಮವಾರದ ವಹಿವಾಟಿನಲ್ಲಿ 72.45ಕ್ಕೆ ಕುಸಿತ ಕಂಡಿತು.

ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳಲ್ಲಿನ ಹಣಕಾಸು ಬಿಕ್ಕಟ್ಟು ವಿಶ್ವದ ಇತರ ದೇಶಗಳಿಗೆ ಸಾಂಕ್ರಾಮಿಕವಾಗಿ ಹಬ್ಬುವ ಶಂಕೆ ಮತ್ತು ಜಾಗತಿಕ ವಾಣಿಜ್ಯ ಸಮರ ತೀವ್ರಗೊಳ್ಳುತ್ತಿರುವುದರಿಂದ ರೂಪಾಯಿ ವಿನಿಮಯ ದರ ದಾಖಲೆ ಕುಸಿತ ಕಾಣುತ್ತಿದೆ.

ಡಾಲರ್‌ಗೆ ಹೆಚ್ಚಿದ ಭಾರಿ ಬೇಡಿಕೆ ಮತ್ತು ಆಮದುದಾರರಲ್ಲಿ ಕಂಡು ಬಂದ ಆತಂಕದ ಫಲವಾಗಿ ವಹಿವಾಟಿನ ಒಂದು ಹಂತದಲ್ಲಿ ರೂಪಾಯಿ ಬೆಲೆ 94 ಪೈಸೆಗಳಷ್ಟು ಕುಸಿತ ಕಂಡು 72.67ಕ್ಕೆ ಇಳಿದಿತ್ತು. ರೂಪಾಯಿ ಬೆಲೆ ಕುಸಿತ ತಡೆಯಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಧ್ಯಪ್ರವೇಶ ಮಾಡಿತ್ತು. ವಹಿವಾಟಿನ ಅಂತ್ಯದಲ್ಲಿ ಡಾಲರ್‌ ಎದುರು ರೂಪಾಯಿ ದರ 72 ಪೈಸೆ ಕುಸಿತ ಕಂಡು 72.45ಕ್ಕೆ ತಲುಪಿತ್ತು.  ಆಗಸ್ಟ್‌ 13ರ ನಂತರದ ದಿನದ ಗರಿಷ್ಠ ಕುಸಿತ ಇದಾಗಿದೆ.

ಚೀನಾದ ಆಮದಿನ ಮೇಲೆ ಮತ್ತೆ ಹೊಸದಾಗಿ ₹ 19.22 ಲಕ್ಷ ಕೋಟಿಗಳಷ್ಟು ಸುಂಕ ವಿಧಿಸುವುದನ್ನು ಅಮೆರಿಕ ಆಡಳಿತ ಪರಿಶೀಲಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿರುವುದೂ ವ್ಯತಿರಿಕ್ತ ಪರಿಣಾಮ ಬೀರಿದೆ.

ದೇಶಿ ವ್ಯಾಪಾರ ಕೊರತೆ ಹೆಚ್ಚಳ ಕುರಿತ ವ್ಯಾಪಕ ಕಳವಳ, ಅಲ್ಪಾವಧಿ ಸಾಲ ಪಾವತಿ, ಜಾಗತಿಕ ಮಟ್ಟದಲ್ಲಿ ಕಂಡುಬರುತ್ತಿರುವ ಸ್ವಯಂರಕ್ಷಣಾ ವಾಣಿಜ್ಯ ನೀತಿಯು ವಿದೇಶಿ ವಿನಿಮಯ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಕರೆನ್ಸಿ ವಹಿವಾಟುದಾರರು ಹೇಳಿದ್ದಾರೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳ ಕರೆನ್ಸಿಗಳ ಬೆಲೆ ಕುಸಿತ ಮತ್ತು ಜಾಗತಿಕ ಷೇರುಪೇಟೆಗಳಲ್ಲಿ ಕುಸಿದ ವಹಿವಾಟು ಕೂಡ ಕರೆನ್ಸಿ ಮಾರುಕಟ್ಟೆಯಲ್ಲಿ ನಿರುತ್ಸಾಹ ಮೂಡಿಸಿದೆ.

ರೂಪಾಯಿಯ ತೀವ್ರ ಸ್ವರೂಪದ ಅಪಮೌಲ್ಯ ತಡೆಯಲು ಆರ್‌ಬಿಐ ತನ್ನ ಸಂಗ್ರಹದಲ್ಲಿನ ಡಾಲರ್‌ಗಳನ್ನು ಮಾರಾಟ ಮಾಡುತ್ತಿದೆ.  ಇದರಿಂದ ವಿದೇಶಿ ವಿನಿಮಯ ಸಂಗ್ರಹವು ಈಗ
₹ 28.80 ಲಕ್ಷ ಕೋಟಿಗೆ ಇಳಿದಿದೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !