ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶುಚಿತ್ವದಿಂದ ಮಕ್ಕಳ ಆರೋಗ್ಯ ವೃದ್ಧಿ’

ತೀವ್ರತರ ಅತಿಸಾರ ಭೇದಿ ನಿಯಂತ್ರಣಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ
Last Updated 29 ಮೇ 2018, 10:58 IST
ಅಕ್ಷರ ಗಾತ್ರ

ಬಳ್ಳಾರಿ: ‘ಶುಚಿತ್ವದಿಂದ ಮಾತ್ರ ಮಕ್ಕಳ ಆರೋಗ್ಯವನ್ನು ರಕ್ಷಿಸಬಹುದು. ಕೈ. ಬಾಯಿ ಸ್ವಚ್ಛತೆ ಇಲ್ಲದಿದ್ದರೆ ಮಕ್ಕಳು ಹಲವು ಕಾಯಿಲೆಗಳಿಂದ ನರಳಬೇಕಾಗುತ್ತದೆ. ಹೀಗಾಗಿ ಪೋಷಕರು ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಸ್.ಬಿ.ಹಂದ್ರಾಳ್ ಹೇಳಿದರು.

ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಆರೋಗ್ಯ ಇಲಾಖೆಯು ಸೋಮವಾರ ಹಮ್ಮಿಕೊಂಡಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆ ನಿರ್ವಹಣೆ ಅತ್ಯಗತ್ಯ’ ಎಂದು ಹೇಳಿದರು.

‘ಶುಚಿತ್ವದ ಕೊರತೆಯಿಂದಾಗಿ ಮಕ್ಕಳಲ್ಲಿ ಸೋಂಕು ಹೆಚ್ಚುತ್ತದೆ. ಅತಿಸಾರ ಭೇದಿಯಿಂದ ಬಲಹೀನ ಗೊಳ್ಳುವ ಮಕ್ಕಳು ಅದರಿಂದಲೇ ಮರಣ ಹೊಂದುವ ಅಪಾಯವೂ ಇದೆ. ಮಕ್ಕಳ ಮರಣದ ಪ್ರಮಾಣವನ್ನು ತಡೆಯಲೆಂದೇ ಪಾಕ್ಷಿಕವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ದೇಶದಲ್ಲಿ 5 ವರ್ಷದ ಒಳಗಿನ ಮಕ್ಕಳ ಮರಣ ದರ ಪ್ರತಿ ಸಾವಿರಕ್ಕೆ 43 ಇದ್ದರೆ, ಕರ್ನಾಟಕದಲ್ಲಿ 31 ಇದೆ. ಅದಕ್ಕೆ ಅತಿಸಾರ ಭೇದಿಯು ಮುಖ್ಯ ಕಾರಣಗಳಲ್ಲಿ ಒಂದು. 5 ವರ್ಷ ವಯಸ್ಸಿನೊಳಗಿನ ಶೇ 10 ರಷ್ಟು ಮಕ್ಕಳು ಅತಿಸಾರ ಭೇದಿ ಯಿಂದಲೇ ಸಾವಿಗೀಡಾಗುತ್ತಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ರಮೇಶ್‌ಬಾಬು ಮಾಹಿತಿ ನೀಡಿದರು.

‘ಅತಿಸಾರ ಭೇದಿಯನ್ನು ಬಹು ಸುಲಭವಾಗಿ ನಿಯಂತ್ರಿಸಿ ಮರಣವನ್ನು ತಡೆಗಟ್ಟಬಹುದು. ಆ ಬಗ್ಗೆ ಜಾಗೃತಿ ಮೂಡಿಸಲೆಂದೇ ಪಾಕ್ಷಿಕವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ಇದು ಅಪಾಯಕಾರಿ ಕಾಯಿಲೆಯಲ್ಲ. ಆದರೆ, ಸಕಾಲದಲ್ಲಿ ಚಿಕಿತ್ಸೆ ಹಾಗೂ ಮುಂಜಾಗ್ರತೆ ವಹಿಸ ಬೇಕು’ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಓಆರ್‍ಎಸ್ ದ್ರಾವಣ ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು.

ಸಂತಾನೋತ್ಪತ್ತಿ ಮತ್ತು ಶಿಶು ಆರೋಗ್ಯಾಧಿಕಾರಿ ಡಾ.ರವೀಂದ್ರನಾಥ್ ಪಾಕ್ಷಿಕದ ಉದ್ದೇಶ ಕುರಿತು ಮಾತನಾಡಿ ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮಕ್ಕಳ ತಜ್ಞ ಡಾ.ವೀರಶಂಕರ ವಿಶೇಷ ಉಪನ್ಯಾಸ ನೀಡಿದರು.

ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಸೌಭಾಗ್ಯವತಿ, ವೈದ್ಯಾಧಿಕಾರಿಗಳಾದ ಡಾ.ಹೆಚ್. ನಿಜಾಮುದ್ದೀನ್, ಡಾ.ಆರ್.ಅನಿಲ್ ಕುಮಾರ್, ಮಕ್ಕಳ ತಜ್ಞರಾದ ಡಾ. ಸುನೀಲ್, ಹೈದರ ಅಲಿ, ಭಾವನಾ, ಬಸವಪ್ರಭು, ಜಿಲ್ಲಾ ಗುಣಮಟ್ಟ ಖಾತರಿ ಸಲಹೆಗಾರ ಡಾ.ಲಕ್ಷ್ಮಿಕಾಂತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT