ರೂಪಾಯಿ ಇನ್ನಷ್ಟು ಕುಸಿತ: ಎಸ್‌ಬಿಐ ಅಂದಾಜು

7
37 ಪೈಸೆ ಕುಸಿತ; ಡಾಲರ್‌ ವಿನಿಮಯ ದರ 71.58

ರೂಪಾಯಿ ಇನ್ನಷ್ಟು ಕುಸಿತ: ಎಸ್‌ಬಿಐ ಅಂದಾಜು

Published:
Updated:
Deccan Herald

ನವದೆಹಲಿ: ವಿನಿಮಯ ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ ಕಾಣಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿಯಲ್ಲಿ ಅಂದಾಜಿಸಲಾಗಿದೆ.

ರೂ‍ಪಾಯಿಯ ಅಪಮೌಲ್ಯವನ್ನು ತಡೆಗಟ್ಟಲು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಸಾಂಪ್ರದಾಯಿಕ ವಿಧಾನವಾದ ತನ್ನ ಅಲ್ಪಾವಧಿ ಬಡ್ಡಿ ದರ ಹೆಚ್ಚಳ ನೀತಿಗೆ ಮೊರೆ ಹೋಗಬೇಕಾಗುತ್ತದೆ. ಆರ್‌ಬಿಐ, ಜೂನ್‌ನಲ್ಲಿ ಬಡ್ಡಿ ದರಗಳನ್ನು ಹೆಚ್ಚಿಸಿದ ನಂತರದ ದಿನಗಳಲ್ಲಿ ರೂಪಾಯಿ ಬೆಲೆ ಶೇ 6.2ರಷ್ಟು ಕುಸಿತ ಕಂಡಿದೆ. ವಿಶ್ವದ ಇತರ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ ಏರುಗತಿಯಲ್ಲಿಯೇ ಇರುವುದರಿಂದ ರೂಪಾಯಿ ದರ ನಿರಂತರವಾಗಿ ಕುಸಿಯುತ್ತಿದೆ. ಮುಂಬರುವ ದಿನಗಳಲ್ಲಿ ಈ ಕುಸಿತವು ಇನ್ನಷ್ಟು ಮುಂದುವರೆಯಲಿದೆ.

ಬ್ಯಾಂಕ್‌ಗಳ ಬಳಿ ಇರುವ ಹೆಚ್ಚುವರಿ ನಗದನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಆರ್‌ಬಿಐ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಇದನ್ನು ಜಾರಿಗೆ ತರಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಎಸ್‌ಡಿಎಫ್‌ ಕ್ರಮ: ಆರ್‌ಬಿಐ, ಸರ್ಕಾರಿ ಸಾಲ ಪತ್ರಗಳನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಅಡಮಾನ ಇಡದೆ ಅವುಗಳ ಬಳಿ ಇರುವ ಹೆಚ್ಚುವರಿ ಹಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ವ್ಯವಸ್ಥೆಗೆ (ಸ್ಟ್ಯಾಂಡಿಂಗ್‌ ಡಿಪಾಸಿಟ್‌ ಫೆಸಿಲಿಟಿ– ಎಸ್‌ಡಿಎಫ್‌) ಚಾಲನೆ ನೀಡಬೇಕಾಗಿದೆ.

ಈ ಕ್ರಮವು ಹಣಕಾಸು ವ್ಯವಸ್ಥೆಯಲ್ಲಿನ ನಗದು ಹರಿವಿನ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸಲಿದೆ. ಬ್ಯಾಂಕಿಂಗ್‌ ವ್ಯವಸ್ಥೆಯ ಬಹುತೇಕ ಸಮಸ್ಯೆಗಳನ್ನೂ ದೂರ ಮಾಡಲಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ಸದ್ಯದ ಈ ಬಿಕ್ಕಟ್ಟು, ಹೆಚ್ಚುವರಿ ನಗದು ಚಲಾವಣೆಗೆ ಕಡಿವಾಣ ಹಾಕುವ ಮತ್ತು ವಿದೇಶಿ ವಿನಿಮಯ ನಿರ್ವಹಣೆ ನೀತಿಯನ್ನು ಸರಿಪಡಿಸಿಕೊಳ್ಳಲು ಆರ್‌ಬಿಐಗೆ ನೆರವಾಗಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !