ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಿ’

ಚುನಾವಣಾ ಸಭೆ: ಸಾಮಾನ್ಯ ವೀಕ್ಷಕರು, ಪೊಲೀಸ್ ವೀಕ್ಷಕರಿಂದ ಸಿದ್ಧತೆ ಪರಿಶೀಲನೆ
Last Updated 29 ಏಪ್ರಿಲ್ 2018, 6:41 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಸಂಬಂಧ ಕೈಗೊಳ್ಳಲಾಗಿರುವ ಸಿದ್ಧತೆಯನ್ನು 4 ವಿಧಾನಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಪರಿಶೀಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ಸಂಬಂಧ ಸಭೆ ನಡೆಯಿತು. ಹನೂರು ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ವಜೀರ್ ಸಿಂಗ್ ಗೋಯಟ್, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವೀಕ್ಷಕ ಲಕ್ಷ್ಮಿ ನಾರಾಯಣ ಸೋನಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವೀಕ್ಷಕ ಮನೋಜ್ ಕುಮಾರ್, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕ ಅನಿಲ್‌ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವೀಕ್ಷಕ  ಡಾ.ರವೀಂದ್ರ ಶಿಶ್ವೆ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ಪಡೆದುಕೊಂಡರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯಲು ಎಲ್ಲ ಅಧಿಕಾರಿಗಳು ಅತ್ಯಂತ ಜಾಗರೂಕರಾಗಿ ಕರ್ತವ್ಯ ನಿರ್ವಹಿಸಬೇಕು. ನಿಷ್ಪಕ್ಷಪಾತವಾಗಿ ಚುನಾವಣಾ ಕಾರ್ಯ ನಿರ್ವಹಿಸಬೇಕು. ಚುನಾವಣಾ ಕೆಲಸದಲ್ಲಿ ಯಾವುದೇ ಲೋಪ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗುವುದು ಎಂದು ವೀಕ್ಷಕರು ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಚುನಾವಣಾ ಸಂಬಂಧ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಚುನಾವಣಾ ಗುರುತಿನ ಚೀಟಿ (ಎಪಿಕ್)ಗಳ ವಿತರಣಾ ಕಾರ್ಯ ನಿರ್ವಹಿಸಲಾಗಿದೆ.

ನೀತಿಸಂಹಿತೆ ಪಾಲನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವೆಲೆನ್ಸ್, ವಿಡಿಯೋ ಸರ್ವೆಲೆನ್ಸ್ ಸೇರಿದಂತೆ ಇತರೆ ಅವಶ್ಯಕ ತಂಡಗಳನ್ನು ರಚಿಸಲಾಗಿದೆ ಎಂದರು.

ಚುನಾವಣಾ ಸಂಬಂಧ ಮಸ್ಟರಿಂಗ್, ಡಿ ಮಸ್ಟರಿಂಗ್, ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಹಾಗೂ ಚುನಾವಣಾ ಎಣಿಕೆ ಕಾರ್ಯಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಕ್ಕೆ ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ಮತಗಟ್ಟೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯವನ್ನು ನಿರ್ವಹಿಸಲಾಗಿದೆ. ಚುನಾವಣೆಗೆ ಅವಶ್ಯವಿರುವ ಎಲ್ಲ ಅವಶ್ಯಕ ವ್ಯವಸ್ಥೆಗೆ ಕ್ರಮ
ವಹಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯಸ್ಥ ಡಾ.ಕೆ.ಹರೀಶ್‌ಕುಮಾರ್ ಮಾತನಾಡಿ, ಮತದಾನ ಜಾಗೃತಿಗಾಗಿ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಮತದಾನ ಪ್ರಮಾಣ ಹೆಚ್ಚಳ ಹಾಗೂ ನೈತಿಕ ಮತದಾನ ಮಾಡಲು ಉತ್ತೇಜಿಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮನೆ ಮನೆಗೂ ತೆರಳಿ ಇನ್ನಷ್ಟು ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು, ಬಂದೋಬಸ್ತ್ ಸೇರಿದಂತೆ ಪೊಲೀಸ್ ಇಲಾಖೆ ವತಿಯಿಂದ ಕೈಗೊಂಡಿರುವ ಇತರೆ ಸಿದ್ಧತೆಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಬಿ.ಫೌಜಿಯಾ ತರನ್ನಮ್, ಇತರೆ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು, ವಿವಿಧ ಸಮಿತಿಯ ನೋಡೆಲ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT