ಮುಂಬೈ : ಅಮೆರಿಕದ ಡಾಲರ್ ಎದುರು 37 ಪೈಸೆ ಕುಸಿತ ದಾಖಲಿಸಿರುವ ರೂಪಾಯಿ ಮೌಲ್ಯವು, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನ ಅಂತ್ಯಕ್ಕೆ ₹84.09ಕ್ಕೆ ತಲುಪಿದೆ. ಅಮೆರಿಕದ ಡಾಲರ್ ಎದುರು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ ಇದಾಗಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಮತ್ತು ಅಮೆರಿಕದಲ್ಲಿನ ಆರ್ಥಿಕ ಹಿಂಜರಿತದ ಆತಂಕದ ನಡುವೆ ಜಾಗತಿಕ ಮಾರುಕಟ್ಟೆಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಈ ಬೆಳವಣಿಗೆ ದಾಖಲಾಗಿದೆ.
ಭಾರತೀಯ ಷೇರು ಮಾರುಕಟ್ಟೆಗಳಲ್ಲಿನ ತೀವ್ರ ಕುಸಿತ ಮತ್ತು ಭಾರತೀಯ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ನಿಧಿಯ ಗಮನಾರ್ಹ ಹೊರಹರಿವಿನ ಜತೆಗೆ ದೇಶೀಯ ಘಟಕದಲ್ಲಿನ ಕುಸಿತವು ರೂಪಾಯಿ ಮೌಲ್ಯ ಕಳೆದುಕೊಳ್ಳಲು ಕಾರಣವಾಯಿತು ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಯಮ ಮಾರುಕಟ್ಟೆಯಲ್ಲಿ ಸ್ಥಳೀಯ ಘಟಕವು ವಿನಿಮಯವನ್ನು ₹83.78ರಿಂದ ಪ್ರಾರಂಭಿಸಿತು. ಆದರೆ, 37 ಪೈಸೆ ಕುಸಿತ ಕಂಡು, ವಹಿವಾಟಿನ ದಿನದ ಅಂತ್ಯಕ್ಕೆ ಡಾಲರ್ ಎದುರು ₹84.09ರ ಕನಿಷ್ಠ ಮಟ್ಟಕ್ಕೆ ಸ್ಥಿರಗೊಂಡಿತು.