ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲವು ಶೂಲ ಆಗದಿರಲಿ

Last Updated 18 ಡಿಸೆಂಬರ್ 2018, 19:31 IST
ಅಕ್ಷರ ಗಾತ್ರ

ಎಷ್ಟೋ ಸಂದರ್ಭಗಳಲ್ಲಿ ನಾವು ದೊಡ್ಡ ಕನಸು ಕಾಣುತ್ತೇವೆ. ಆದರೆ ಜೇಬು ಚಿಕ್ಕದಿರುತ್ತದೆ. ಕನಸು ಮತ್ತು ಜೇಬಿನ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ಸಣ್ಣ ಮೊತ್ತದ ಸಾಲ ಪಡೆಯಬಹುದು. ಸಾಲಕ್ಕೆ ಅರ್ಜಿ ಹಾಕುವ ಮುನ್ನ ಮಾತ್ರ ಸಾಲ ನೀಡುವ ಸಂಸ್ಥೆಯ ಕುರಿತು ಎಚ್ಚರಿಕೆ ವಹಿಸಬೇಕು. ಅವರ ಷರತ್ತು ಮತ್ತು ಮಾನದಂಡಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಸಾಲವನ್ನು ಏಕೆ, ಹೇಗೆ ಮತ್ತು ಯಾರಿಂದ ಪಡೆಯಬೇಕು ಎಂಬ ತಿಳಿವಳಿಕೆಯನ್ನೂ ಹೊಂದಿರಬೇಕು.

ಸಾಲವು ನಿಮ್ಮ ಕನಸನ್ನು ನನಸಾಗಿಸುತ್ತದೆ. ಒಂದು ಸರಕನ್ನು ಖರೀದಿಸಲೇಬೇಕು ಎನಿಸಿದರೆ ತಕ್ಷಣ ಹಣಕಾಸು ಹೊರೆಯನ್ನು ತಪ್ಪಿಸಲು ಸಾಲ ನೆರವಾಗುತ್ತದೆ. ಇದನ್ನು ನಿಮ್ಮ ಹಣಕಾಸು ಸ್ಥಿತಿಗೆ ಅನುಗುಣವಾಗಿ ಸುಲಭ ಕಂತುಗಳಲ್ಲಿ ಮರುಪಾವತಿ ಮಾಡಬಹುದು. ನೀವು ಮೊದಲ ಬಾರಿ ಸಾಲ ಪಡೆಯುತ್ತೀದ್ದೀರಿ ಎಂದಾದರೆ ನೀವು ತಿಂಗಳ ಕಂತಿನ ರೂಪದಲ್ಲಿ (ಇಎಂಐ) ಎಷ್ಟು ಹಣವನ್ನು ಮರುಪಾವತಿ ಮಾಡಬಹುದು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಿ. ನಿಮ್ಮ ಆದ್ಯತೆಯ ವೆಚ್ಚವನ್ನು ಲೆಕ್ಕ ಮಾಡಿ ಉಳಿದ ಹಣವನ್ನು ಈ ‘ಇಎಂಐ’ ಕಟ್ಟಬಹುದು. ಈ ‘ಇಎಂಐ’ ಮೊತ್ತವು ಖರ್ಚಿಗೆಂದು ನೀವು ಇಟ್ಟಿರುವ ಆದಾಯದ ಮೂರನೇ ಒಂದರಷ್ಟು ಪ್ರಮಾಣಕ್ಕಿಂತ ಹೆಚ್ಚಿರಬಾರದು. ನಿಮ್ಮ ಹಿಂದಿನ ಸಾಲಗಳ ಇತಿಹಾಸ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ಹೆಚ್ಚು ವಿಚಾರಿಸುವ ಸಂಸ್ಥೆಯನ್ನು ನೆಚ್ಚಿಕೊಳ್ಳಬೇಡಿ. ಸುಲಭ ಬಡ್ಡಿ ದರದಲ್ಲಿ ನಿಮಗೆ ಅನುಕೂಲಕರವಾದ ‘ಇಎಂಐ’ಗೆ ಒಪ್ಪಿಕೊಳ್ಳುವ ಸಂಸ್ಥೆಯನ್ನು ನೆಚ್ಚಿಕೊಳ್ಳಿ. ಸಾಲ ಮಂಜೂರಾತಿ ಪ್ರಕ್ರಿಯೆ ಸುಲಭ, ಸರಳ ಮತ್ತು ಪಾರದರ್ಶಕವಾಗಿರಬೇಕು.

ಕ್ರೆಡಿಟ್ ಸ್ಕೋರ್ ಎಂದರೇನು: ಕ್ರೆಡಿಟ್ ಸ್ಕೋರ್ ಅಥವಾ ಕ್ರೆಡಿಟ್ ರೇಟಿಂಗ್ ಮೂರಂಕಿಯ ಒಂದು ಸಂಖ್ಯೆ. ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿ, ಮೊಬೈಲ್ ಫೋನ್ ಪಾವತಿ, ಬ್ಯಾಂಕ್ ಮರುಪಾವತಿ ಇತ್ಯಾದಿಗಳನ್ನು ಇದು ಪ್ರತಿನಿಧಿಸುತ್ತದೆ. ವ್ಯಕ್ತಿಯೊಬ್ಬನಿಗೆ ಸಾಲ ನೀಡಬಹುದೇ ಎಂಬುದನ್ನು ಇದು ನಿರ್ಧರಿಸುತ್ತದೆ. ಸಾಲ ಪಡೆಯಲು ವ್ಯಕ್ತಿ ಅರ್ಹನೇ, ಎಷ್ಟು ಸಾಲ ನೀಡಬೇಕು, ಯಾವ ಬಡ್ಡಿ ದರ ವಿಧಿಸಬೇಕು ಎಂಬ ಅಂಶಗಳನ್ನು ಸಾಲ ಸಂಸ್ಥೆ, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಕಂಪನಿಗಳು ಇದರ ಮೇಲೆಯೇ ನಿರ್ಧರಿಸುತ್ತವೆ.

ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಮೊದಲು ಅರ್ಜಿದಾರನ ಕ್ರೆಡಿಟ್ ಸ್ಕೋರ್‌ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನಿಮ್ಮ ಸ್ಕೋರ್ ಅಧಿಕವಾಗಿದ್ದರೆ ನಿಮಗೆ ಸುಲಭವಾಗಿ ಹೆಚ್ಚು ಸಾಲ ಸಿಗುತ್ತದೆ. ಕಡಿಮೆ ಬಡ್ಡಿಯೂ ಇರುತ್ತದೆ. ಸಾಲವೂ ಬೇಗ ಮಂಜೂರಾಗುತ್ತದೆ. ಅಂದರೆ ನೀವು ಸಾಲ ಮರುಪಾವತಿ ಕಂತನ್ನು ಒಂದು ದಿನವೂ ತಡಮಾಡದೇ ಭರಿಸುತ್ತೀರಿ ಎಂದರ್ಥ.

ಬ್ಯಾಂಕಿಂಗ್‍ಯೇತರ ಹಣಕಾಸು ಸಂಸ್ಥೆಗಳು ಅರ್ಜಿದಾರರ ಕ್ರೆಡಿಟ್ ಸ್ಕೋರ್ ಗಮನಿಸದೆಯೇ ಇತರ ಮಾನದಂಡ ಪರೀಕ್ಷಿಸಿ ಸಾಲ ಮಂಜೂರು ಮಾಡುತ್ತವೆ. ಯಾವ ರೀತಿಯ ಸಾಲ (ಭದ್ರತೆ ಅಥವಾ ಇಲ್ಲದೆಯೇ), ಸಾಲದ ಅವಧಿ, ಮೊತ್ತ, ಅರ್ಜಿದಾರರ ಪ್ರಸ್ತುತ ಆದಾಯ, ಉದ್ಯೋಗ, ಹಿಂದಿನ ಉದ್ಯೋಗ ಇತ್ಯಾದಿಗಳನ್ನು ಈ ಕಂಪನಿಗಳು ಗಮನಿಸುತ್ತವೆ. ಇವುಗಳನ್ನು ಆಧರಿಸಿ ಸಾಲವನ್ನು ನೀಡಬೇಕೇ ತಿರಸ್ಕರಿಸಬೇಕೇ ಎಂಬುದನ್ನು ನಿರ್ಧರಿಸುತ್ತವೆ.

ಯಾವುದೇ ವ್ಯಕ್ತಿಗೆ ಸಾಲ ಮಂಜೂರು ಮಾಡಲು ಇರಬೇಕಾದ ಮೊದಲನೇ ಅರ್ಹತೆ ಎಂದರೆ ಆತನ ಆದಾಯ. ಮೊದಲನೇ ಬಾರಿ ಸಾಲ ಪಡೆಯುವವರಾಗಿದ್ದರೆ ಉದ್ಯೋಗ, ಹಿಂದಿನ ಉದ್ಯೋಗ, ಆತನಿಗಿರುವ ಇತರ ಸಾಲ, ವಯಸ್ಸು, ಮರುಪಾವತಿ ಅವಧಿ ಪರಿಗಣಿಸಲಾಗುತ್ತದೆ. ನಿಮಗೆ ದೀರ್ಘಾವಧಿಯವರೆಗೆ ನಿಯಮಿತವಾದ ಆದಾಯ ಮೂಲ ಇದೆಯೇ ಎಂಬುದನ್ನು ಗಮನಿಸುತ್ತಾರೆ. ಈ ಹಿಂದೆ ಸಾಲ ಪಡೆದಿದ್ದೀರಿ ಎಂದಾದರೆ ಪ್ರಧಾನ ಅರ್ಹತೆಯೇ ಕ್ರೆಡಿಟ್ ಸ್ಕೋರ್.

ನೀವು ಮೊದಲ ಬಾರಿಗೆ ಸಾಲ ಪಡೆಯುತ್ತಿದ್ದೀರಿ ಎಂದಾದರೆ ಸುಲಭವಾಗಿ, ಹೆಚ್ಚಿನ ದಾಖಲೆಗಳನ್ನು ಕೇಳದೆಯೇ ನಿಮ್ಮ ಕನಸು ನನಸು ಮಾಡುವ ಹಣಕಾಸು ಸಂಸ್ಥೆಯನ್ನು ಗುರುತಿಸಿ. ಸಾಲ ನೀಡುವ ಸಂಸ್ಥೆ ನಿಮಗೆ ಅರ್ಜಿ ಸಲ್ಲಿಸುವ ಮೊದಲು ಕಂಪನಿಯ ನಿಬಂಧನೆಗಳನ್ನು ಸ್ಪಷ್ಟವಾಗಿ ವಿವರಿಸಬೇಕು. ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ಸುಲಭವಾಗಿ, ಸರಳವಾಗಿ ಮತ್ತು ಪಾರದರ್ಶಕವಾಗಿ ನಡೆಸಬೇಕು. ಸಾಲ ದಾಖಲೆಗಳನ್ನೆಲ್ ಕ್ಲುಪ್ತ ಸಮಯಕ್ಕೆ ಒದಗಿಸಬೇಕು. ಸಾಲ ಮರುಪಾವತಿಯ ಸಮಯವನ್ನು ನಿಮಗೆ ಮುಂಚಿತವಾಗಿ ತಿಳಿಸಿ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು.

ನೀವು ಬೇರೊಬ್ಬರ ಹೆಸರಿನಲ್ಲಿ ಸಾಲ ಪಡೆದರೆ ನಿಮಗೆ ಪ್ರಯೋಜನಗಳೇನೂ ಸಿಗುವುದಿಲ್ಲ. ಬದಲಾಗಿ ಸಾಲ ಪಡೆದವರು ಯಾವುದೇ ಬಾಕಿ ಉಳಿಸಿಕೊಳ್ಳದೆಯೇ ಸಕಾಲಿಕವಾಗಿ ‘ಇಎಂಐ’ ಪಾವತಿಸಿದರೆ ಅವರಿಗೆ ಪ್ರಯೋಜನಗಳು ಸಿಗುತ್ತವೆ. ಒಂದೊಮ್ಮೆ ನಿಮ್ಮ ಸ್ನೇಹಿತರ ಬಳಿ ಅಗತ್ಯ ದಾಖಲೆಗಳಿಲ್ಲ. ಆದ್ದರಿಂದ ನೀವು ಅವರ ಪರವಾಗಿ ಸಾಲ ಪಡೆಯುತ್ತೀರಿ. ಸ್ನೇಹಿತ ನಿಮಗೆ ಸಕಾಲಿಕವಾಗಿ ಹಣ ವಾಪಸ್ ಮಾಡಿಲ್ಲವೆಂಬ ಕಾರಣಕ್ಕೆ ನೀವೂ ಸಹ ಮರುಪಾವತಿಯನ್ನು ಅಗತ್ಯ ಸಮಯದಲ್ಲಿ ಮಾಡದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಅದು ನಕಾರಾತ್ಮಕ ಪರಿಣಾಮ ಬೀರುತ್ತದೆ.

ಪಡೆದ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ ಮೇಲೆ ಸಾಲ ನೀಡಿದ ಹಣಕಾಸು ಸಂಸ್ಥೆಯು ಯಾವುದೇ ಸಾಲ ಬಾಕಿ ಉಳಿದಿಲ್ಲ (ನೋ ಡ್ಯೂ ಸರ್ಟಿಫಿಕೇಟ್) ಎನ್ನುವ ಪ್ರಮಾಣಪತ್ರ ನೀಡುತ್ತದೆ. ಈ ಪ್ರಮಾಣಪತ್ರ ಪಡೆಯದಿದ್ದರೆ ಅವರು ಹೊಣೆಗಾರಿಕೆಯಿಂದ ಮುಕ್ತರಾಗುವುದಿಲ್ಲ. ಬ್ಯಾಂಕುಗಳು ಮತ್ತು ಬ್ಯಾಂಕಿಂಗ್‍ಯೇತರ ಹಣಕಾಸು ಸಂಸ್ಥೆಗಳು ಸಾಲ ಚುಕ್ತಾ ಮಾಡಿದವರಿಗೆ ಕ್ಲೋಷರ್ ಲೆಟರ್ ನೀಡುತ್ತವೆ. ಇದು ನಿಮ್ಮ ಬಳಿ ಇಲ್ಲದಿದ್ದರೆ ಸಾಲ ಪೂರ್ತಿ ಪಾವತಿಸಿದ್ದೀರಿ ಎನ್ನುವುದಕ್ಕೆ ಯಾವುದೇ ಪುರಾವೆ ಇರುವುದಿಲ್ಲ. ಮುಂದಿನ ಸಾಲ ಪಡೆಯಬೇಕಾದರೆ ಈ ಪ್ರಮಾಣಪತ್ರ ಇರಲೇಬೇಕು.

ಅನೇಕ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಹಲವು ಅವಕಾಶಗಳನ್ನು ನೀಡುತ್ತವೆ. ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಪಾವತಿಸಲು ನೀವು ಅನುಮತಿ ನೀಡಬಹುದು. ಆಗ ‘ಇಎಂಐ’ ಮೊತ್ತ ನೇರವಾಗಿ ನಿಮ್ಮ ಖಾತೆಯಿಂದ ಸಂಸ್ಥೆಗೆ ಸಂದಾಯವಾಗುತ್ತದೆ. ಇಲ್ಲವೇ ನೀವೇ ಹಣವನ್ನು ನಿರ್ದಿಷ್ಟ ಖಾತೆಗೆ ವರ್ಗಾಹಿಸಬಹುದು. ಅಥವಾ ಪಾವತಿ ಪಾಲುದಾರರ ಮೂಲಕ ನಗದು ಪಾವತಿಸಬಹುದು. ಯಾವುದೇ ರೀತಿಯ ಪಾವತಿ ಇದ್ದರೂ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರುವಂತೆ ನೋಡಿಕೊಳ್ಳಿ.

(ಲೇಖಕ: ಹೋಮ್ ಕ್ರೆಡಿಟ್ ಇಂಡಿಯಾದ ಸಂವಹನ ವಿಭಾಗದ ಉಪಾಧ್ಯಕ್ಷ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT