ಸೀರೆ, ಧೋತರ ಇಸ್ತ್ರಿ ಮಾಡಿ ಮಡಚುವ ಯಂತ್ರ!

7
ಕಾರ್‌ ಮೆಕ್ಯಾನಿಕ್‌ನ ಸಂಶೋಧನೆ

ಸೀರೆ, ಧೋತರ ಇಸ್ತ್ರಿ ಮಾಡಿ ಮಡಚುವ ಯಂತ್ರ!

Published:
Updated:

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಸೀರೆ, ಧೋತರದಂಥ ಉದ್ದನೆಯ ವಸ್ತ್ರಗಳನ್ನು ಇಸ್ತ್ರಿ ಮಾಡಲು ಇನ್ನು ಕಷ್ಟಪಡಬೇಕಿಲ್ಲ. ವಿದ್ಯುತ್‌ ಚಾಲಿತ ಯಂತ್ರಕ್ಕೆ ಸೀರೆ ಅಥವಾ ಧೋತರ ಅಳವಡಿಸಿದರೆ ಸಾಕು; ಹದಿನೈದು ನಿಮಿಷಗಳಲ್ಲಿ ಬಟ್ಟೆಯು ಇಸ್ತ್ರಿ ಆಗುವುದಲ್ಲದೇ, ನೀಟಾಗಿ ಮಡಚಿಕೊಳ್ಳುತ್ತದೆ ಕೂಡ!

ಸಮೀಪದ ಬೇಡಕಿಹಾಳ ಗ್ರಾಮದ ಅಜೇಯ ರಾಮಚಂದ್ರ ಮಾನೆ,  ಇಂಥಹ ಸ್ವಯಂಚಾಲಿತ ಇಸ್ತ್ರಿ ಯಂತ್ರವನ್ನು ಸಿದ್ಧಪಡಿಸಿದ್ದು ಇಸ್ತ್ರಿ ಕೆಲಸವನ್ನು ಸುಲಭವನ್ನಾಗಿಸಿದ್ದಾರೆ.

ಐಟಿಐ (ಮೆಕ್ಯಾನಿಕಲ್) ಶಿಕ್ಷಣ ಪಡೆದಿರುವ ಅಜೇಯ, ನಾಲ್ಕು ತಿಂಗಳ ನಿರಂತರ ಪ್ರಯೋಗದಿಂದ ₹ 6 ಸಾವಿರ ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಿದ್ದಾರೆ.

ಕಬ್ಬಿಣದ ಸರಳುಗಳನ್ನು ಬಳಸಿ 4.5 X 2 ಅಡಿ ಆಕಾರದ ಚೌಕಟ್ಟು ನಿರ್ಮಿಸಿ, ಅದಕ್ಕೆ ಮಾಮೂಲಿ ಇಸ್ತ್ರಿ ಪೆಟ್ಟಿಗೆ,  ಎಲೆಕ್ಟ್ರಿಕ್ ಸರ್ಕ್ಯೂಟ್‌, ಆಟೋರಿವರ್ಸ್‌ ಸ್ವಿಚ್‌, ಇಸ್ತ್ರಿಪೆಟ್ಟಿಗೆಯೊಂದಿಗೆ ಚಲಿಸುವ ಸಾಧನ, ಮತ್ತು ಎರಡು ಕಬ್ಬಿಣದ ಪೈಪ್‌ಗಳನ್ನು ಬಳಸಿ ತಯಾರಿಸಿರುವ ಈ ವಿದ್ಯುತ್‌ ಚಾಲಿತ ಯಂತ್ರದಿಂದ ಗರಿಷ್ಠ 15 ನಿಮಿಷಗಳಲ್ಲಿ ಒಂದು ಸೀರೆ ಅಥವಾ ಧೋತರ ಇಸ್ತ್ರಿಯಾಗಿ, ಮಡಚಿಕೊಳ್ಳುತ್ತದೆ.

ಆಲ್ಕೋಹಾಲ್ ಡಿಟೆಕ್ಟಿವ್ ಕಾರ್: ಮಹಾರಾಷ್ಟ್ರದ ಇಚಲಕರಂಜಿಯ ಕಂಪನಿಯೊಂದರಲ್ಲಿ ಕಾರ್ ಮೆಕ್ಯಾನಿಕ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಅಜೇಯ ಮಾನೆ, ಕಾರಿನಲ್ಲಿ ಆಲ್ಕೋಹಾಲ್ ಡಿಟೆಕ್ಟರ್ ಅಳವಡಿಸುವ ಹಾಗೂ ಸ್ಕ್ರೀನ್‌ ಟಚ್‌ ತಾಂತ್ರಿಕತೆ ಅಳವಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಇದನ್ನು ತಡೆಯಲು ಕಾರ್‌ನಲ್ಲಿ ಆಲ್ಕೋಹಾಲ್ ಡಿಟೆಕ್ಟಿವ್ ಕಿಟ್‌ ಅಳವಡಿಸುವ ಪ್ರಯೋಗದಲ್ಲಿ ತೊಡಗಿದ್ದು, ಕೆಲವೇ ದಿನಗಳಲ್ಲಿ ಅದು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ. ಈ ಕಿಟ್‌ ಅಳವಡಿಸುವುದರಿಂದ ಮದ್ಯ ಸೇವಿಸಿದ ವ್ಯಕ್ತಿ ಕಾರ್ ಚಾಲನೆ ಮಾಡಲು ಮುಂದಾದರೆ ಕಾರ್ ಎಂಜಿನ್ ಪ್ರಾರಂಭವೇ ಆಗುವುದಿಲ್ಲ. ಕಾರುಗಳು ಕಳ್ಳತನವಾಗುವುದನ್ನು ತಡೆಯಲು ಸ್ಕ್ರೀನ್ ಟಚ್‌ ತಾಂತ್ರಿಕತೆಯನ್ನು ಅಳವಡಿಸಲಾಗುತ್ತಿದೆ’ ಎನ್ನುತ್ತಾರೆ ಅಜೇಯ.

‘ಅಜೇಯ, ಬಾಲ್ಯದಿಂದಲೂ ವೈಜ್ಞಾನಿಕ ಸಂಶೋಧನೆಯತ್ತ ವಿಶೇಷ ಆಸಕ್ತಿ ಹೊಂದಿದ್ದಾನೆ. ಶಿಕ್ಷಣ ಹಂತದಿಂದಲೂ ಬಿಡುವಿನ ವೇಳೆಯಲ್ಲಿ ಹೊಸ ಹೊಸ ತಾಂತ್ರಿಕ ಅವಿಷ್ಕಾರಗಳಲ್ಲೇ ಮಗ್ನನಾಗಿರುತ್ತಿದ್ದ. ಇದೀಗ ಸ್ವಯಂಚಾಲಿತ ಇಸ್ತ್ರಿ ಯಂತ್ರ ಸಂಶೋಧನೆ ಮಾಡಿದ್ದರಿಂದ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಇಂತಹ ಪ್ರತಿಭೆಗಳನ್ನು ಗುರುತಿಸಿ ಸರ್ಕಾರ ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳು ಸೂಕ್ತ ವೇದಿಕೆಯನ್ನು ಕಲ್ಪಿಸಬೇಕು’ ಎನ್ನುತ್ತಾರೆ ಅವರ ಸ್ನೇಹಿತ ಬೇಡಕಿಹಾಳದ ಕೃಷ್ಣಾ ಅರಗೆ.

‘ತಾಂತ್ರಿಕ ಕ್ಷೇತ್ರದಲ್ಲಿ ಏನಾದರೊಂದು ವಿಶೇಷ ಸಾಧನೆ ಮಾಡಬೇಕು ಎಂಬ ಹಂಬಲ ಅಜೇಯನದು. ಆತನ ಆಸಕ್ತಿ, ಅಭಿರುಚಿಯನ್ನು ಗುರುತಿಸಿ ವಿಶೇಷ ಸಂಶೋಧನೆಗೆ ಪ್ರೇರಣೆ ನೀಡುತ್ತಿದ್ದೇವೆ. ಆತನ ಅವಿಷ್ಕಾರಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎನ್ನುತ್ತಾರೆ ಚಿಕ್ಕಪ್ಪ ಶಾಮರಾವ್ ಮಾನೆ.

‘ನಾನು ಉನ್ನತ ತಾಂತ್ರಿಕ ಶಿಕ್ಷಣ ಪಡೆದಿಲ್ಲ. ಆದರೆ, ಪ್ರಯೋಗಗಳ ಮೂಲಕ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಿಕ್ಕಪ್ಪ ಶಾಮರಾವ್ ಮಾನೆ ಮತ್ತು ತಂದೆ–ತಾಯಿ ಸಂಶೋಧನೆಗಳಿಗೆ ಪ್ರೇರಣೆ ನೀಡುತ್ತಾರೆ.’ ಎನ್ನುತ್ತಾರೆ ಅಜೇಯ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !