ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ತೈಲ ದರ ಕುಸಿತ ಸಂಭವ: ಭಾರತಕ್ಕೆ ಹೆಚ್ಚಿನ ಪ್ರಯೋಜನ

ದರ ಇಳಿಕೆ, ಉತ್ಪಾದನೆ ಹೆಚ್ಚಿಸುವ ಸೌದಿ ನಿರ್ಧಾರ
Last Updated 8 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ದುಬೈ: ಸೌದಿ ಅರೇಬಿಯಾ ದೇಶವು ಏಪ್ರಿಲ್‌ನಲ್ಲಿ ಮಾರಾಟ ಮಾಡುವ ಕಚ್ಚಾ ತೈಲ ದರದಲ್ಲಿ ಇಳಿಕೆ ಮಾಡಿದೆ. ಇದುಸೋಮವಾರ ಏಷ್ಯಾದ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರುಕಟ್ಟೆಯ ವಿಶ್ಲೇಷಕರ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ತೈಲ ದರ ಶೀಘ್ರವೇ ಬ್ಯಾರಲ್‌ಗೆ 40 ಡಾಲರ್‌ಗಳಿಗೆ ಇಳಿಕೆ
ಯಾಗಲಿದೆ.ಶುಕ್ರವಾರ ಬ್ರೆಂಟ್ ತೈಲ ದರ ಶೇ 9ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದು, ಒಂದು ಬ್ಯಾರಲ್‌ಗೆ 45.27 ಡಾಲರ್‌ಗೆ ಇಳಿಕೆಯಾಗಿತ್ತು. 11 ವರ್ಷಗಳಲ್ಲಿಯೇ ದಿನದ ವಹಿವಾಟಿನಲ್ಲಿ ಗರಿಷ್ಠ ಕುಸಿತ ಇದಾಗಿದೆ.

‘ಕೋವಿಡ್‌–19’ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ತೈಲ ಬೇಡಿಕೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸಂಘಟನೆಯು (ಒಪೆಕ್‌) ಮತ್ತೊಂದು ಹಂತದಲ್ಲಿ ಉತ್ಪಾದನೆ ತಗ್ಗಿಸಲು ನಿರ್ಧರಿಸಿತ್ತು. ಈ ಸಂಬಂಧ ಶುಕ್ರವಾರ ರಷ್ಯಾದೊಂದಿಗೆ ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿದೆ.

ಉತ್ಪಾದನೆ ತಗ್ಗಿಸುವ ಕುರಿತಾಗಿ ಒಪೆಕ್‌, ರಷ್ಯಾ ಮತ್ತು ಇತರೆ ದೇಶಗಳ ಮಧ್ಯೆ ನಡೆದಿರುವ ಒಪ್ಪಂದವು ಮಾರ್ಚ್‌ಗೆ ಮುಗಿಯಲಿದೆ. ಇನ್ನೊಂದು ಒಪ್ಪಂದ ಮಾಡಿಕೊಳ್ಳಲು ರಷ್ಯಾ ಸಿದ್ಧವಿಲ್ಲ. ಹೀಗಾಗಿ ಸೌದಿ ಅರೇಬಿಯಾವು ಏಪ್ರಿಲ್‌ನಲ್ಲಿ ಮಾರಾಟ ಮಾಡಲಿರುವ ಕಚ್ಚಾ ತೈಲ ದರದಲ್ಲಿ ಬ್ಯಾರಲ್‌ಗೆ 4–5 ಡಾಲರ್‌ಗಳಷ್ಟು ಇಳಿಕೆ ಮಾಡಿದೆ. ಇಷ್ಟೇ ಅಲ್ಲದೆ, ಏಪ್ರಿಲ್‌ನಿಂದ ತೈಲ ಉತ್ಪಾದನೆಯನ್ನು ದಿನಕ್ಕೆ 1 ಕೋಟಿ ಬ್ಯಾರಲ್‌ಗಳಷ್ಟು ಹೆಚ್ಚಿಸಲಿದೆ. ಬೇರೆ ದೇಶಗಳೂ ಏಪ್ರಿಲ್‌ನಿಂದ ಉತ್ಪಾದನೆ ಹೆಚ್ಚಿಸಬಹುದಾಗಿದೆ.

ದರ ಕಡಿಮೆ ಮಾಡಿ, ಉತ್ಪಾದನೆ ಹೆಚ್ಚಿಸುವ ಮೂಲಕ ಯುರೋಪ್‌ ಮತ್ತು ಏಷ್ಯಾದಲ್ಲಿ ರಷ್ಯಾದೊಂದಿಗೆ ಪೈಪೋಟಿ ನಡೆಸಿ ಅದರ ಮಾರುಕಟ್ಟೆಯನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಸೌದಿ ಅರೇಬಿಯಾ ಮುಂದಾಗಿದೆ.ಈ ಹಿಂದೆ 2014–2016ರಲ್ಲಿ ಅಮೆರಿಕದ ಶೇಲ್‌ ತೈಲ ಉತ್ಪಾದನೆ ತಗ್ಗಿಸಲು ಸೌದಿ ಅರೇಬಿಯಾ, ರಷ್ಯಾ ಮತ್ತು ಮಧ್ಯಪ್ರಾಚ್ಯದ ಇತರ ಉತ್ಪಾದಕ ದೇಶಗಳು ಇದೇ ರೀತಿಯ ನಿರ್ಧಾರ ಕೈಗೊಂಡಿದ್ದವು. ಏಷ್ಯಾದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ತೈಲ ಪೂರೈಕೆ ಮಾಡಿದ್ದವು.

ಭಾರತಕ್ಕೆ ಹೆಚ್ಚಿನ ಪ್ರಯೋಜನ
ತೈಲ ದರದಲ್ಲಿ ಇಳಿಕೆ ಆದರೆ, ಇದರಿಂದ ಭಾರತಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ.ಸದ್ಯ, ಭಾರತವು ತನ್ನ ಬೇಡಿಕೆಯ ಶೇ 80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ತೈಲ ದರದಲ್ಲಿ ಇಳಿಕೆಯಾದರೆ ಆಮದು ಹೊರೆಯೂ ಕಡಿಮೆಯಾಗಲಿದೆ.

ಬ್ರೆಂಟ್‌ ಕಚ್ಚಾ ತೈಲ ದರ ಒಂದು ಡಾಲರ್‌ ಕಡಿಮೆಯಾದರೆ, ಅದರಿಂದ ಭಾರತದ ಕಚ್ಚಾ ತೈಲದ ವೆಚ್ಚದಲ್ಲಿ ₹ 14 ಸಾವಿರ ಕೋಟಿಗಳಷ್ಟು ಕಡಿಮೆಯಾಗಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದಲ್ಲಿಯೂ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆ ಆಗುತ್ತದೆ.ಆಮದು ಮತ್ತು ರಫ್ತು ವಹಿವಾಟಿನ ನಡುವಣ ಅಂತರವಾದ ಚಾಲ್ತಿ ಖಾತೆ ಕೊರತೆಯೂ ಇಳಿಕೆಯಾಗಲಿದೆ.

ಗಲ್ಫ್‌ ಷೇರುಪೇಟೆಗಳಲ್ಲಿ ಇಳಿಕೆ
ತೈಲ ದರ ಸಮರದ ಸಾಧ್ಯತೆಯುಗಲ್ಫ್‌ ಷೇರುಪೇಟೆಗಳಲ್ಲಿ ಭಾನುವಾರ ಮಾರಾಟದ ಒತ್ತಡ ಸೃಷ್ಟಿಸಿತು.

ಸೌದಿ ಷೇರುಪೇಟೆ ಸೂಚ್ಯಂಕ ಶೇ 8.3ರಷ್ಟು ಇಳಿಕೆ ಕಂಡಿತು. ಸೌದಿಯ ಪ್ರಮುಖ ತೈಲ ಕಂಪನಿ ಆರಾಮ್ಕೊ ಷೇರುಗಳು ಗರಿಷ್ಠ ಶೇ 9.1ರಷ್ಟು ಇಳಿಕೆ ಕಂಡಿವೆ. ದುಬೈ ಹಣಕಾಸು ಮಾರುಕಟ್ಟೆ ಶೇ 7.9ರಷ್ಟು ಇಳಿಕೆ ಕಂಡು ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿತು. ಅಬುಧಾಬಿ ಮಾರುಕಟ್ಟೆ ಶೇ 5.4 ಹಾಗೂ ಕತಾರ್‌ ಷೇರುಪೇಟೆ ಶೇ 2.9ರಷ್ಟು ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT