ಸೋಮವಾರ, ಅಕ್ಟೋಬರ್ 21, 2019
21 °C

ಸಾಲ, ಉಳಿತಾಯ ಖಾತೆ ಬಡ್ಡಿ ದರ ಕಡಿತಗೊಳಿಸಿದ ಎಸ್‌ಬಿಐ

Published:
Updated:
Prajavani

ಮುಂಬೈ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಸಾಲ ಮತ್ತು ಉಳಿತಾಯ ಖಾತೆಗೆ ಅನ್ವಯಿಸುವ ಬಡ್ಡಿ ದರಗಳನ್ನು ಇಳಿಸಿದೆ.

ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.10ರಷ್ಟು ಮತ್ತು ₹ 1 ಲಕ್ಷಕ್ಕಿಂತ ಕಡಿಮೆ ಮೊತ್ತದ ಉಳಿತಾಯ ಖಾತೆ ಮೇಲಿನ ಬಡ್ಡಿ ದರವನ್ನು ಶೇ 0.25ರಷ್ಟು (ಶೇ 3.50ರಿಂದ 3.25ಕ್ಕೆ) ತಗ್ಗಿಸಿದೆ.

‘ಎಂಸಿಎಲ್‌ಆರ್‌’ ದರ ಕಡಿತವು ಗುರುವಾರದಿಂದ (ಅ. 10) ಮತ್ತು ಉಳಿತಾಯ ಖಾತೆಗಳ ಮೇಲಿನ ಪರಿಷ್ಕೃತ ಬಡ್ಡಿ ದರವು ನವೆಂಬರ್‌ 1ರಿಂದ ಜಾರಿಗೆ ಬರಲಿದೆ.

ಇದನ್ನೂ ಓದಿ: ಜಿಯೊ ಗ್ರಾಹಕರಿಗೆ ಕಹಿ ಸುದ್ದಿ: ಇನ್ನು ಎಲ್ಲ ವಾಯ್ಸ್‌ ಕಾಲ್‌ ಉಚಿತವಲ್ಲ

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ‘ಎಸ್‌ಬಿಐ’, ಈ ವರ್ಷದ ಏಪ್ರಿಲ್‌ನಿಂದೀಚೆಗೆ 6ನೇ ಬಾರಿಗೆ ಸಾಲದ ಮೇಲಿನ ಬಡ್ಡಿ ದರ ಇಳಿಸಿದೆ.

ಈ ತಿಂಗಳಿನಿಂದ ಜಾರಿಗೆ ಬಂದಿರುವ ರೆಪೊ ದರ ಆಧರಿತ ಬಡ್ಡಿ ದರಗಳನ್ನು ಹೊರತುಪಡಿಸಿದ ಇತರ ಎಲ್ಲ ಸಾಲಗಳಿಗೆ ಒಂದು ವರ್ಷದ ‘ಎಂಸಿಎಲ್‌ಆರ್‌’ ಶೇ 8.15 ರಿಂದ ಶೇ 8.05ಕ್ಕೆ ಇಳಿಯಲಿದೆ.

ಹಬ್ಬದ ದಿನಗಳಲ್ಲಿ ಎಲ್ಲ ವಲಯದ ಗ್ರಾಹಕರಿಗೆ ಬಡ್ಡಿ ದರ ಕಡಿತದ ಪ್ರಯೋಜನ ಒದಗಿಸುವ ಉದ್ದೇಶದಿಂದ ‘ಎಂಸಿಎಲ್‌ಆರ್‌’ ಅನ್ನು ಶೇ 0.10ರಷ್ಟು ಇಳಿಸಲಾಗಿದೆ. ಹಣಕಾಸು ವ್ಯವಸ್ಥೆಯಲ್ಲಿ ಸಾಕಷ್ಟು ನಗದು ಇರುವುದರಿಂದ ಉಳಿತಾಯ ಖಾತೆಯಲ್ಲಿನ ₹ 1 ಲಕ್ಷದವರೆಗಿನ ಮೊತ್ತಕ್ಕೆ ಶೇ 3.25 ಬಡ್ಡಿ ನೀಡಲಾಗುವುದು ಎಂದು ಬ್ಯಾಂಕ್‌ ತಿಳಿಸಿದೆ.

ರಿಟೇಲ್‌ ಸ್ಥಿರ ಠೇವಣಿ ಮತ್ತು ₹ 1 ಕೋಟಿಗಿಂತ ಹೆಚ್ಚಿನ ಮೊತ್ತದ ಅವಧಿ ಠೇವಣಿಗಳ ಬಡ್ಡಿ ದರವನ್ನು ಕ್ರಮವಾಗಿ ಶೇ 0.10 ಮತ್ತು ಶೇ 0.30ರಷ್ಟು ತಗ್ಗಿಸಿದೆ. ಒಂದು ವರ್ಷದಿಂದ ಎರಡು ವರ್ಷದ ಒಳಗಿನ ಅವಧಿಗೆ ಈ ಹೊಸ ದರಗಳು ಅನ್ವಯವಾಗಲಿವೆ.

ಬ್ಯಾಂಕ್‌ ತನ್ನ ಗೃಹ, ವಾಹನ ಖರೀದಿ  ಮತ್ತು ಕಿರು, ಸಣ್ಣ ಹಾಗೂ ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳಿಗೆ ನೀಡುವ ಬದಲಾಗುವ ಬಡ್ಡಿ ದರಗಳನ್ನು ಈ ತಿಂಗಳಿನಿಂದ ರೆಪೊ ದರ ಆಧರಿಸಿ ನಿಗದಿಪಡಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಕಳೆದ ವಾರ ರೆಪೊ ದರವನ್ನು ಶೇ 0.25ರಷ್ಟು ಇಳಿಸಿರುವುದರಿಂದ ‘ಎಂಸಿಎಲ್‌ಆರ್‌’ ಕಡಿತ ಮಾಡಲಾಗಿದೆ. ಇದು ಆರ್‌ಬಿಐ ಕಡಿತ ಮಾಡಿರುವ ಪ್ರಮಾಣಕ್ಕಿಂತ ತುಂಬ ಕಡಿಮೆ ಇದೆ.

ಬಡ್ಡಿ ದರ ಕಡಿತ – ಹೊಸ ದರ (%)

ಎಂಸಿಎಲ್‌ಆರ್‌ – 0.10 – 8.05

ಉಳಿತಾಯ ಖಾತೆ – 0.25 – 3.25

Post Comments (+)