ಬುಧವಾರ, ಸೆಪ್ಟೆಂಬರ್ 18, 2019
28 °C

ಎಸ್‌ಬಿಐ: ಡೆಬಿಟ್‌ ಕಾರ್ಡ್‌ ಸ್ಥಗಿತಕ್ಕೆ ಕ್ರಮ

Published:
Updated:
Prajavani

ಮುಂಬೈ: ಮುಂಬರುವ ದಿನಗಳಲ್ಲಿ ಡೆಬಿಟ್‌ ಕಾರ್ಡ್‌ಗಳ ಬಳಕೆಯನ್ನು ಕ್ರಮೇಣ ಸ್ಥಗಿತಗೊಳಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಉದ್ದೇಶಿಸಿದೆ.

ಎಟಿಎಂಗಳಿಂದ ನಗದು ಪಡೆಯಲು, ವ್ಯಾಪಾರ ವಹಿವಾಟಿಗೆ ಹಣ ಪಾವತಿಸಲು ಬ್ಯಾಂಕ್‌ನ ಅಸಂಖ್ಯ ಗ್ರಾಹಕರು ಡೆಬಿಟ್‌ ಕಾರ್ಡ್‌ಗಳನ್ನೇ ನೆಚ್ಚಿಕೊಂಡಿದ್ದರೂ, ನಗದುರಹಿತ (ಡಿಜಿಟಲ್‌) ಪಾವತಿ ಸೇವೆ ಉತ್ತೇಜಿಸಲು ಮತ್ತು ಪ್ಲಾಸ್ಟಿಕ್‌ (ಡೆಬಿಟ್‌) ಕಾರ್ಡ್‌ಗಳನ್ನು ಬಳಕೆಯಿಂದ ಕೈಬಿಡಲು ಬ್ಯಾಂಕ್‌ ಈ ನಿರ್ಧಾರ ಕೈಗೊಂಡಿದೆ.

‘ಡೆಬಿಟ್‌ ಕಾರ್ಡ್‌ ಬಳಕೆ ನಿರ್ಮೂಲನೆ ಮಾಡುವುದು ನಮ್ಮ ಆಶಯವಾಗಿದೆ. ನಾವು ಅವುಗಳ ಬಳಕೆ   ಸ್ಥಗಿತಗೊಳಿಸುವ ಬಗ್ಗೆ ನನಗೆ ವಿಶ್ವಾಸ ಇದೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್ ಹೇಳಿದ್ದಾರೆ. ಇಲ್ಲಿ ನಡೆದ ಬ್ಯಾಂಕಿಂಗ್‌ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

‘ಡೆಬಿಟ್‌ ಕಾರ್ಡ್‌ ರಹಿತ ಬ್ಯಾಂಕಿಂಗ್‌ ವ್ಯವಸ್ಥೆಗೆ, ಬ್ಯಾಂಕ್‌ ಈಗಾಗಲೇ ಅಭಿವೃದ್ಧಿಪಡಿಸಿರುವ ಡಿಜಿಟಲ್‌ ಸೇವೆ ಯೋನೊ (You Only Need One-Yono) ಆ್ಯಪ್‌ ನೆರವಾಗಲಿದೆ. ಈ ಆ್ಯಪ್‌ ನೆರವಿನಿಂದ ಎಟಿಎಂಗಳಿಂದ ನಗದು ಪಡೆಯಬಹುದು. ಅಂಗಡಿ ಮಳಿಗೆಗಳಲ್ಲಿ ಹಣ ಪಾವತಿಸಬಹುದು. 

‘ಯೋನೊ ಕ್ಯಾಷ್‌ಪಾಯಿಂಟ್ಸ್‌: ಎಸ್‌ಬಿಐ ಈಗಾಗಲೇ  ‘ಯೋನೊ’ ಆ್ಯಪ್‌ ಮೂಲಕವೇ ನಗದು ಪಡೆಯುವ 68 ಸಾವಿರ ‘ಯೋನೊ ಕ್ಯಾಷ್‌ಪಾಯಿಂಟ್ಸ್‌’ಗಳನ್ನು ಆರಂಭಿಸಿದೆ. ಒಂದೂವರೆ ವರ್ಷದಲ್ಲಿ ಇವುಗಳ ಸಂಖ್ಯೆಯನ್ನು 10 ಲಕ್ಷಕ್ಕೆ ಹೆಚ್ಚಿಸಲಿದೆ. 

‘ಕೆಲ ಸರಕುಗಳನ್ನು ಖರೀದಿಸಲು ಸಾಲ ಮಾಡುವುದಕ್ಕೂ ‘ಯೋನೊ’ ನೆರವಾಗುತ್ತದೆ. ಮುಂದಿನ ಕೆಲ ವರ್ಷಗಳಲ್ಲಿ ಗ್ರಾಹಕರು ತಮ್ಮ ಜೇಬಿನಲ್ಲಿ ಡೆಬಿಟ್‌ ಕಾರ್ಡ್‌ ಹೊಂದುವ ಅನಿವಾರ್ಯತೆ ಕಡಿಮೆಯಾಗಲಿದೆ. ಕ್ಯುಆರ್‌ ಕೋಡ್‌ ಬಳಸಿ ಹಣ ಪಾವತಿಸುವುದೂ ಈಗ ತುಂಬ ಅಗ್ಗದ ವಿಧಾನವಾಗಿದೆ’ ಎಂದು ಅವರು ಹೇಳಿದ್ದಾರೆ.

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ‘ಎಸ್‌ಬಿಐ’ನ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ, ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿ ಇರುವ ಡೆಬಿಟ್‌ ಕಾರ್ಡ್‌ಗಳ ಬಳಕೆ ಕೊನೆಗೊಳ್ಳುವುದಕ್ಕೆ ಚಾಲನೆ ದೊರೆಯಲಿದೆ.

ಯೋನೊ ಕ್ಯಾಷ್‌
ಡೆಬಿಟ್‌ ಕಾರ್ಡ್‌ ಬದಲಿಗೆ ‘ಯೋನೊ’  ಆ್ಯಪ್‌ ಮೂಲಕವೇ ಎಟಿಎಂಗಳಿಂದ ಸುರಕ್ಷಿತವಾಗಿ ಹಣ ಪಡೆಯುವ ‘ಯೋನೊ ಕ್ಯಾಷ್‌’ ಸೌಲಭ್ಯಕ್ಕೆ ಎಸ್‌ಬಿಐ ಮಾರ್ಚ್‌ನಲ್ಲಿ ಚಾಲನೆ ನೀಡಿದೆ.

ಈ ಸೌಲಭ್ಯ ಒಳಗೊಂಡಿರುವ ಬ್ಯಾಂಕ್‌ನ ಎಟಿಎಂಗಳನ್ನು ‘ಯೋನೊ ಕ್ಯಾಷ್‌ ಪಾಯಿಂಟ್‌’ ಎಂದು ಗುರುತಿಸಲಾಗಿದೆ. ಕ್ವಿಕ್‌ ಲಿಂಕ್‌ ವಿಭಾಗದಲ್ಲಿ ಯೋನೊ ಕ್ಯಾಷ್‌ ವಿಭಾಗಕ್ಕೆ ಹೋಗಿ ಹಣ ಪಡೆಯಲು 6 ಅಂಕಿಯ ರಹಸ್ಯ ಸಂಖ್ಯೆ (ಯೋನೊ ಕ್ಯಾಷ್‌ ಪಿನ್‌) ನಮೂದಿಸಬೇಕು. ಪ್ರತಿಯಾಗಿ ಗ್ರಾಹಕರ ಮೊಬೈಲ್‌ಗೆ 6 ಅಂಕಿ ಸಂದೇಶ ಎಸ್‌ಎಂಎಸ್‌ ಮೂಲಕ ಬರು ತ್ತದೆ. ಹತ್ತಿರದಲ್ಲಿನ ‘ಯೋನೊ ಕ್ಯಾಷ್‌ ಪಾಯಿಂಟ್‌’ ಎಟಿಎಂ ನಲ್ಲಿ ಕ್ಯಾಷ್‌ ಪಿನ್‌ ಮತ್ತು ಎಸ್‌ಎಂಎಸ್‌ನಲ್ಲಿ ಬಂದಿರುವ ಸಂಖ್ಯೆ ನಮೂದಿಸಿ ಹಣ 
ಪಡೆಯಬಹುದು.

*
ಡೆಬಿಟ್‌ ಕಾರ್ಡ್‌ ಬಳಕೆ ನಿರ್ಮೂಲನೆ ಮಾಡುವುದು ನಮ್ಮ ಆಶಯವಾಗಿದೆ. ನಾವು ಅವುಗಳ ಬಳಕೆ ಸ್ಥಗಿತಗೊಳಿಸುವ ಬಗ್ಗೆ ನನಗೆ ವಿಶ್ವಾಸ ಇದೆ
-ರಜನೀಶ್‌ ಕುಮಾರ್, ಎಸ್‌ಬಿಐ ಅಧ್ಯಕ್ಷ

**
90 ಕೋಟಿ: ದೇಶದಲ್ಲಿ ಬಳಕೆಯಲ್ಲಿ ಇರುವ ಡೆಬಿಟ್‌ ಕಾರ್ಡ್‌ಗಳ ಸಂಖ್ಯೆ

3 ಕೋಟಿ: ಕ್ರೆಡಿಟ್‌ ಕಾರ್ಡ್‌ಗಳ ಸಂಖ್ಯೆ

Post Comments (+)