ಬುಧವಾರ, ಡಿಸೆಂಬರ್ 11, 2019
26 °C

ಎಸ್‌ಬಿಐ: ರೆಪೊ ದರ ಆಧಾರಿತ ಗೃಹ ಸಾಲ

Published:
Updated:
Prajavani

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ರೆಪೊ ದರ ಆಧರಿಸಿದ ಗೃಹ ಸಾಲ ಯೋಜನೆಗಳಲ್ಲಿ ಕೆಲ ಬದಲಾವಣೆಗಳನ್ನು ಪ್ರಕಟಿಸಿದೆ.

ರೆಪೊ ದರ ಆಧರಿಸಿದ ಗೃಹ ಸಾಲವನ್ನು ಜುಲೈ ತಿಂಗಳಿನಲ್ಲಿಯೇ ಪ್ರಕಟಿಸಿದ್ದ ಬ್ಯಾಂಕ್‌, ಆನಂತರ ಅದನ್ನು ಹಿಂತೆಗೆದುಕೊಂಡಿತ್ತು. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸುತ್ತೋಲೆ ಪ್ರಕಾರ, ಬ್ಯಾಂಕ್‌ಗಳು ಬದಲಾಗುವ ಬಡ್ಡಿ ದರದ ಗೃಹ, ವಾಹನ ಖರೀದಿ ಮತ್ತು ಇತರ ರಿಟೇಲ್‌ ಸಾಲಗಳಿಗೆ ಅಕ್ಟೋಬರ್‌ 1 ರಿಂದ ಹೊಸ ಬಡ್ಡಿ ದರ ನಿಗದಿಪಡಿಸಬೇಕಾಗಿದೆ. ರೆಪೊ ದರ, 3 ಅಥವಾ 6 ತಿಂಗಳ ಟ್ರೆಷರಿ ಬಿಲ್ ಆದಾಯ ಇಲ್ಲವೆ ಫೈನಾನ್ಶಿಯಲ್ ಬೆಂಚ್‌ಮಾರ್ಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಬಿಐಎಲ್) ಪ್ರಕಟಿಸುವ ಬಡ್ಡಿ ದರದಂತೆ ಬ್ಯಾಂಕ್‌ಗಳು ಸಾಲಗಳಿಗೆ ಬಡ್ಡಿ ವಿಧಿಸಬೇಕು ಎಂದು ಆರ್‌ಬಿಐ ತಿಳಿಸಿದೆ.

ಬದಲಾದ ನಿಯಮಗಳ ಅನ್ವಯ ಎಸ್‌ಬಿಐ, ಆರ್‌ಬಿಐನ ಶೇ 5.40ರಷ್ಟು ಇರುವ ರೆಪೊ ದರದ ಮೇಲೆ ಶೇ 2.65ರವರೆಗೆ ಬಡ್ಡಿ ದರ ವಿಧಿಸಲಿದೆ. ವೇತನ ವರ್ಗದವರು ಪಡೆಯುವ ₹ 30 ಲಕ್ಷವರೆಗಿನ ಗೃಹ ಸಾಲಕ್ಕೆ ಈ ಲೆಕ್ಕದಲ್ಲಿ ಶೇ 8.20ರಷ್ಟು ಬಡ್ಡಿ ಅನ್ವಯವಾಗಲಿದೆ. ₹ 30 ರಿಂದ ₹ 75 ಲಕ್ಷದ ಸಾಲಕ್ಕೆ ಶೇ 8.45 ಬಡ್ಡಿ, ₹ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ 8.55ರಷ್ಟು ಬಡ್ಡಿ ವಿಧಿಸಲಾಗುವುದು. ಮಹಿಳೆಯರು ಪಡೆಯುವ ಗೃಹ ಸಾಲದ ಬಡ್ಡಿ ದರದಲ್ಲಿ ಶೇ 0.05ರಷ್ಟು ರಿಯಾಯ್ತಿ ಇರಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು