ನವದೆಹಲಿ: ಠೇವಣಿದಾರರನ್ನು ಆಕರ್ಷಿಸಲು ಹೊಸ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಅಧ್ಯಕ್ಷ ಸಿ.ಎಸ್. ಸೆಟ್ಟಿ ತಿಳಿಸಿದ್ದಾರೆ.
ನಿಶ್ಚಿತ ಠೇವಣಿ (ಆರ್.ಡಿ) ಮತ್ತು ವ್ಯವಸ್ಥಿತ ಹೂಡಿಕೆ (ಎಸ್ಐಪಿ) ಸಂಯೋಜಿತ ಹೊಸ ಯೋಜನೆ ರೂಪಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ.
ಗ್ರಾಹಕರಿಗೆ ಹಣಕಾಸಿನ ವ್ಯವಹಾರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇದೆ. ಇದಕ್ಕೆ ಪೂರಕವಾಗಿ ಬೇಡಿಕೆ ಕೂಡ ಮಂಡಿಸುತ್ತಾರೆ. ಹಾಗಾಗಿ, ನಾವು ಹೊಸ ಹೂಡಿಕೆಯ ವಿಧಾನ ಅನುಸರಿಸುವತ್ತ ದೃಷ್ಟಿ ಹರಿಸಿದ್ದೇವೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆರ್ಥಿಕ ಸಾಕ್ಷರತೆ ಹೆಚ್ಚಾದಂತೆ ಗ್ರಾಹಕರು ಬ್ಯಾಂಕ್‌ನಿಂದ ದೊರೆಯುವ ಪ್ರಯೋಜನಗಳತ್ತ ಎದುರು ನೋಡುತ್ತಾರೆ. ಯಾರೊಬ್ಬರು ಅಪಾಯಕ್ಕೆ ಸಿಲುಕುವ ಸ್ವತ್ತಿನಲ್ಲಿ ಹೂಡಿಕೆಗೆ ಇಚ್ಛಿಸುವುದಿಲ್ಲ. ಗ್ರಾಹಕರಿಗೆ ಇಷ್ಟವಾಗುವಂತಹ ಯೋಜನೆಗಳನ್ನೇ ನಾವು ರೂಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಠೇವಣಿ ಸಂಗ್ರಹ ಹೆಚ್ಚಳಕ್ಕೆ ಸಾಂಪ್ರದಾಯಿಕ ವಿಧಾನ ಅನುಸರಿಸಲು ಮುಂದಾಗಿದ್ದೇವೆ. ಇದರಲ್ಲಿಯೇ ಕೆಲವು ಬದಲಾವಣೆ ತರಲಾಗುವುದು. ಸ್ಥಿರ ಠೇವಣಿ/ ನಿಶ್ಚಿತ ಠೇವಣಿ ಹಾಗೂ ಎಸ್‌ಐಪಿ ಸಂಯೋಜಿತ ಯೋಜನೆ ಜಾರಿಗೊಳಿಸಲಾಗುವುದು. ಗ್ರಾಹಕರಿಗೆ ಡಿಜಿಟಲ್ ಮೂಲಕ ಪಾವತಿಗೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಹೊಸ ತಲೆಮಾರಿನ ಜನರಲ್ಲೂ ಠೇವಣಿ ಯೋಜನೆಗಳನ್ನು ಜನಪ್ರಿಯಗೊಳಿಸಲು ಬ್ಯಾಂಕ್ ತೀರ್ಮಾನಿಸಿದೆ. ಠೇವಣಿ ಸಂಗ್ರಹೆ ಹೆಚ್ಚಳಕ್ಕೆ ಬೃಹತ್ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.