ಎಸ್‌ಬಿಐ ನಿವ್ವಳ ಲಾಭ ₹ 4,709 ಕೋಟಿ

7

ಎಸ್‌ಬಿಐ ನಿವ್ವಳ ಲಾಭ ₹ 4,709 ಕೋಟಿ

Published:
Updated:

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಪ್ರಸಕ್ತ ಹಣಕಾಸು ವರ್ಷದ (2018–19) ಮೂರನೇ ತ್ರೈಮಾಸಿಕದಲ್ಲಿ
₹ 4,709 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹1,886 ಕೋಟಿ ನಷ್ಟ ಅನುಭವಿಸಿತ್ತು.

‘ಲಾಭ, ವಹಿವಾಟು ಮತ್ತು ಆಸ್ತಿ ಗುಣಮಟ್ಟದಲ್ಲಿ ಸುಧಾರಣೆಗಳಾಗಿವೆ. ಇದು ಡಿಸೆಂಬರ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಪ್ರತಿಫಲಿಸಿದೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ತಿಳಿಸಿದ್ದಾರೆ.

ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣ ಶೇ 10.35 ರಿಂದ ಶೇ 8.71ಕ್ಕೆ ಇಳಿಕೆಯಾಗಿದ್ದರೆ ನಿವ್ವಳ ಎನ್‌ಪಿಎ ಶೇ 5.61 ರಿಂದ ಶೇ 3.95ಕ್ಕೆ ತಗ್ಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹14,171 ಕೋಟಿಯಿಂದ ₹ 8,670 ಕೋಟಿಗೆ ಶೇ 39ರಷ್ಟು ಇಳಿಕೆಯಾಗಿದೆ. 

ನಿವ್ವಳ ಬಡ್ಡಿ ವರಮಾನ ₹ 22,691 ಕೋಟಿಗೆ ಶೇ 21.42ರಷ್ಟು ವೃದ್ಧಿಯಾಗಿದೆ. 

‘ವಿದ್ಯುತ್‌ ಒಳಗೊಂಡು ಒಟ್ಟು 8 ವಲಯಗಳ ಸಾಲ ವಸೂಲಿ ಪ್ರಕ್ರಿಯೆ ಜಾರಿಯಲ್ಲಿದೆ. ಎರಡು ತಿಂಗಳಿನಲ್ಲಿ ಇತ್ಯರ್ಥವಾದರೆ ಸರಾಸರಿ ಎನ್‌ಪಿಎ ಶೇ 7ಕ್ಕಿಂತಲೂ ಕೆಳಗೆ ಹಾಗೂ ನಿವ್ವಳ ಎನ್‌ಪಿಎ ಶೇ 3ಕ್ಕಿಂತಲೂ ಕೆಳಕ್ಕೆ ಇಳಿಕೆಯಾಗಿವೆ ಎಂದು ರಜನೀಶ್‌ ತಿಳಿಸಿದ್ದಾರೆ.

ಠೇವಣಿ ₹ 26.51 ಲಕ್ಷ ಕೋಟಿಯಿಂದ ₹ 28.30 ಲಕ್ಷ ಕೋಟಿಗೆ ಶೇ 6.76ರಷ್ಟು ಹೆಚ್ಚಾಗಿದೆ. ಒಟ್ಟಾರೆ ಮುಂಗಡ ₹ 19.24 ಲಕ್ಷ ಕೋಟಿಯಿಂದ ₹ 21.55 ಲಕ್ಷ ಕೋಟಿಗೆ ಶೇ 11.99ರಷ್ಟು ಏರಿಕೆಯಾಗಿದೆ.

ಎಸ್‍ಬಿಐ: ಯುವ ಸಾಧಕರಿಗೆ ಪ್ರಶಸ್ತಿ

ಬೆಂಗಳೂರು: ತಮ್ಮ ಕೌಶಲ ಹಾಗೂ ಪರಿಣತಿಯಿಂದ ಸಮಾಜ ಬದಲಾಯಿಸಿದ ಯುವ ಸಾಧಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ), ‘ಯೋನೊ ಎಸ್‍ಬಿಐ 20 ಅಂಡರ್ ಟ್ವೆಂಟಿ’ ಪ್ರಶಸ್ತಿ ನೀಡಿ ಗೌರವಿಸಿದೆ.

ಎಸ್‍ಬಿಐ ಅಧ್ಯಕ್ಷ ರಜನೀಶ್ ಕುಮಾರ್,  ಬಾಲಿವುಡ್‌ ನಟಿ ಝಯೀರಾ ವಾಸಿಂ, ರಾಜಸ್ಥಾನದ ಯುವ ಜಾನಪದ ಗಾಯಕ ಜಸು ಖಾನ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉದಯೋನ್ಮುಖ ಸಾಧಕರನ್ನು ಸೋಮವಾರ ಸಂಜೆ ಇಲ್ಲಿ ಸನ್ಮಾನಿಸಿದರು.

10 ವೈವಿಧ್ಯಮಯ ಕ್ಷೇತ್ರಗಳ ಒಟ್ಟು 20 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಾಲಿ ಕುರ್ಚಿಯಲ್ಲೇ ತಮ್ಮ ಜೀವನ ಕಳೆಯುತ್ತಿದ್ದರೂ ಆರು ಆಟಗಾರರ ಚೆಸ್ ಕಂಡುಹಿಡಿದ 16 ವರ್ಷಗಳ ಹೃದಯೇಶ್ವರ ಸಿಂಗ್ ಭಾಟಿ ಅವರು ತೀರ್ಪುಗಾರರ ವಿಶೇಷ ಆಯ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

20 ವರ್ಷದೊಳಗಿನ 10 ಮಂದಿ ಪುರುಷ ಹಾಗೂ 10 ಮಂದಿ ಮಹಿಳಾ ಸಾಧಕರನ್ನು ವಿಭಿನ್ನ 10 ಕ್ಷೇತ್ರಗಳಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !