ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ನಿರ್ಬಂಧವಿರುವ ರಷ್ಯಾ ಸಂಸ್ಥೆಗಳ ಜತೆ ಎಸ್‌ಬಿಐ ವಹಿವಾಟು ಸ್ಥಗಿತ

Last Updated 1 ಮಾರ್ಚ್ 2022, 2:36 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾದ ಸಂಸ್ಥೆಗಳ ಜತೆಗಿನ ವಹಿವಾಟನ್ನು ಎಸ್‌ಬಿಐ ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತ ಎಸ್‌ಬಿಐ ಪತ್ರವೊಂದು ‘ರಾಯಿಟರ್ಸ್‌’ ಸುದ್ದಿಸಂಸ್ಥೆಗೆ ದೊರೆತಿದೆ.

ಉಕ್ರೇನ್‌ ಮೇಲೆ ರಷ್ಯಾ ಸೇನಾ ದಾಳಿ ಆರಂಭಿಸಿದ ಬಳಿಕ ಅಮೆರಿಕ ಸೇರಿದಂತೆ ಅನೇಕ ದೇಶಗಳು ರಷ್ಯಾ ವಿರುದ್ಧ ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಿವೆ.

‘ಅಮೆರಿಕ, ಯುರೋಪ್ ಒಕ್ಕೂಟ ಮತ್ತು ವಿಶ್ವಸಂಸ್ಥೆಯಿಂದ ನಿರ್ಬಂಧಕ್ಕೆ ಒಳಪಟ್ಟಿರುವ ಸಂಸ್ಥೆಗಳು, ಬ್ಯಾಂಕ್‌ಗಳು, ಬಂದರು ಅಥವಾ ಹಡಗುಗಳ ಜತೆ ಕರೆನ್ಸಿ ವಹಿವಾಟು ನಡೆಸಲಾಗುತ್ತಿಲ್ಲ’ ಎಂದು ನಿರ್ದಿಷ್ಟ ಗ್ರಾಹಕರಿಗೆ ಎಸ್‌ಬಿಐ ಕಳುಹಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಿರ್ಬಂಧಗಳನ್ನು ಎದುರಿಸುತ್ತಿರುವ ದೇಶಗಳ ಜತೆ ವಹಿವಾಟು ನಡೆಸುವಾಗ ವಿಶೇಷ ಎಚ್ಚರಿಕೆ ವಹಿಸಬೇಕಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ಬಯಸಿ ಮಾಡಿರುವ ದೂರವಾಣಿ ಕರೆ, ಇ–ಮೇಲ್ ಸಂದೇಶಗಳಿಗೆ ಎಸ್‌ಬಿಐ ತಕ್ಷಣಕ್ಕೆ ಉತ್ತರಿಸಿಲ್ಲ.

‘ನಮಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಉಪಸ್ಥಿತಿ ಇದೆ. ಅಮೆರಿಕ, ಯುರೋಪ್ ಒಕ್ಕೂಟಗಳ ನ್ಯಾಯವ್ಯಾಪ್ತಿಯಲ್ಲಿ ನಾವೂ ಇರುವುದರಿಂದ ಅವರ ನಿಯಮಾವಳಿಗಳಿಗೆ ಬದ್ಧತೆ ಪ್ರದರ್ಶಿಸದೇ ಇರಲಾಗುವುದಿಲ್ಲ. ಅವುಗಳನ್ನು ಅನುಸರಿಸಬೇಕಾದ ಅನಿವಾರ್ಯತೆ ಇದೆ’ ಎಂದು ಎಸ್‌ಬಿಐ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಕೈಗೊಂಡಿರುವ ಸೇನಾ ಕಾರ್ಯಾಚರಣೆಯನ್ನು ಅಲ್ಲಿನ ಆಡಳಿತ ‘ವಿಶೇಷ ಕಾರ್ಯಾಚರಣೆ’ ಎಂದು ಹೇಳಿಕೊಂಡಿದೆ. ಇದು ಎರಡನೇ ಮಹಾಯುದ್ಧದ ಬಳಿಕ ಯುರೋಪ್‌ ದೇಶವೊಂದರ ಮೇಲೆ ನಡೆದ ಅತಿದೊಡ್ಡ ಸೇನಾ ಕಾರ್ಯಾಚರಣೆ ಎಂದು ಹೇಳಲಾಗುತ್ತಿದೆ. ರಷ್ಯಾ ಜತೆ ಉತ್ತಮ ರಕ್ಷಣಾ ಬಾಂಧವ್ಯ ಹೊಂದಿರುವ ಭಾರತವು ಈವರೆಗೆ ದಾಳಿಯನ್ನು ಬಹಿರಂಗವಾಗಿ ಖಂಡಿಸಿಲ್ಲ. ರಾಜತಾಂತ್ರಿಕ ಮಟ್ಟದಲ್ಲಿ ಹಾಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಉಭಯ ದೇಶಗಳಿಗೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT