ಬುಧವಾರ, ಏಪ್ರಿಲ್ 8, 2020
19 °C
ಕೇರಳ, ಅಲಹಾಬಾದ್‌ ಹೈಕೋರ್ಟ್‌ ಆದೇಶ

ತೆರಿಗೆ ಸಂಗ್ರಹ ಮುಂದೂಡಿಕೆ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜಿಎಸ್‌ಟಿ ಸೇರಿದಂತೆ ವಿವಿಧ ತೆರಿಗೆಗಳ ಸಂಗ್ರಹವನ್ನು ಏಪ್ರಿಲ್‌ 6ರವರೆಗೆ ಮುಂದೂಡಲು ಕೇರಳ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದೆ.

ನ್ಯಾಯಮೂರ್ತಿ ಎ. ಎಂ. ಖನ್ವಿಲ್ಕರ್‌ ನೇತೃತ್ವದಲ್ಲಿನ ಪೀಠವು ಕೇರಳ ಹೈಕೋರ್ಟ್‌ ಗುರುವಾರ ನೀಡಿದ್ದ ಆದೇಶಕ್ಕೆ ಮತ್ತು ಈ ನಿಟ್ಟಿನಲ್ಲಿ ಅಲಹಾಬಾದ್‌ ಹೈಕೋರ್ಟ್‌ ಆರಂಭಿಸಿದ್ದ ಪ್ರಕ್ರಿಯೆಗೆ ತಡೆ ನೀಡಿದೆ.

‘ಕೊರೊನಾ–2’ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ   ತೆರಿಗೆ ವಸೂಲಿ ಮುಂದೂಡಲು ಆದೇಶಿಸುವುದರಿಂದ ಕೇಂದ್ರ ಸರ್ಕಾರದ ಹಣಕಾಸು ಪರಿಸ್ಥಿತಿ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಕಂಡುಬರಲಿದೆ. ಪ್ರತಿ ತಿಂಗಳೂ ₹ 80 ಸಾವಿರ ಕೋಟಿ ಮೊತ್ತದ ಜಿಎಸ್‌ಟಿ ಸೇರಿದಂತೆ ಕೇಂದ್ರದ ಬೊಕ್ಕಸಕ್ಕೆ ₹ 2 ಲಕ್ಷ ಕೋಟಿ ಮೊತ್ತದ ವರಮಾನ ಸೇರ್ಪಡೆಯಾಗುತ್ತದೆ. ನೌಕರರ ವೇತನ ಪಾವತಿಯೂ ಸೇರಿದಂತೆ ತಿಂಗಳ ಹಲವಾರು ಅಭಿವೃದ್ಧಿ ಉದ್ದೇಶದ ವೆಚ್ಚಗಳಿಗೆ ಕೇಂದ್ರವು ಹಣ ಹೊಂದಿಸಬೇಕಾಗಿರುತ್ತದೆ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿಪಾದಿಸಿದ್ದರು.

ದೇಶದಲ್ಲಿ ಸದ್ಯಕ್ಕೆ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಯಾರೊಬ್ಬರಿಗೂ ತೊಂದರೆ ಕೊಡುವ ಉದ್ದೇಶವೂ ಸರ್ಕಾರಕ್ಕಿಲ್ಲ. ಹೈಕೋರ್ಟ್‌ ನಿರ್ದೇಶನದಿಂದಾಗಿ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿತ್ತು ಎಂದು ಅವರು ಹೇಳಿದ್ದಾರೆ.

ಆದಾಯ ತೆರಿಗೆ, ವ್ಯಾಟ್‌, ಜಿಎಸ್‌ಟಿ, ಕಟ್ಟಡ ತೆರಿಗೆ, ವಾಹನ ತೆರಿಗೆ ಮುಂತಾದವುಗಳನ್ನು ಏಪ್ರಿಲ್‌ 6ರವರೆಗೆ ಸಂಗ್ರಹಿಸಲು ಕೇರಳ ಹೈಕೋರ್ಟ್‌ ನಿರ್ಬಂಧಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)