ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತೂರಿನಲ್ಲಿ ಅತ್ಯಾಧುನಿಕ ಸೈನ್ಸ್‌ ಸಿಟಿ

ಜೆಎಸ್‌ಎಸ್‌ ಮಠದಿಂದ 25 ಎಕರೆ ಸ್ಥಳ ನಿಗದಿ–ಕೇಂದ್ರದ ಸಹಯೋಗದಲ್ಲಿ ನಿರ್ಮಾಣ
Last Updated 15 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಮೈಸೂರು: ಕೋಲ್ಕತ್ತದ ಸೈನ್ಸ್‌ ಸಿಟಿ ಮಾದರಿಯಲ್ಲಿ ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ₹ 191 ಕೋಟಿ ವೆಚ್ಚದಲ್ಲಿ ಸೈನ್ಸ್‌ ಸಿಟಿ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.‌

ಕೇಂದ್ರ ಸರ್ಕಾರದ ಸಹಯೋಗದಲ್ಲಿ ನಿರ್ಮಿಸುತ್ತಿರುವ ಬೃಹತ್‌ ಯೋಜನೆಗೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದೆ.

ಸಾಂಸ್ಕೃತಿಕ ನಗರಿಯಿಂದ 28 ಕಿ.ಮೀ ದೂರದಲ್ಲಿರುವ ಸುತ್ತೂರಿನಲ್ಲಿ ಸೈನ್ಸ್‌ ಸಿಟಿಗಾಗಿ 25 ಎಕರೆ ಜಾಗ ಮೀಸಲಿಡಲಾಗಿದೆ. ಸುತ್ತೂರಿನ ಜೆಎಸ್‌ಎಸ್‌ ಮಠ ಈ ಜಾಗ ನೀಡಲಿದೆ. ಜೊತೆಗೆ ವಿವಿಧ ಸೌಲಭ್ಯ ಕಲ್ಪಿಸಲು ಮುಂದೆ ಬಂದಿದೆ.

‘ಸೈನ್ಸ್‌ ಸಿಟಿ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಾನವಾಗಿ ಅನುದಾನ ನೀಡಲಿವೆ. ಡಿಪಿಆರ್‌ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು. ಒಪ್ಪಿಗೆ ಲಭಿಸಿದ ಬಳಿಕ ನಿರ್ಮಾಣ ಪ್ರಕ್ರಿಯೆ ಕೈಗೆತ್ತಿಗೊಳ್ಳುತ್ತೇವೆ’ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವಿಶೇಷ ನಿರ್ದೇಶಕ (ತಾಂತ್ರಿಕ) ಡಾ.ಎಚ್‌.ಹೊನ್ನೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರವಾಸೋದ್ಯಮಿಗಳ ನೆಚ್ಚಿನ ತಾಣವೆಂದು ಹೆಸರು ಪಡೆದಿರುವ ಮೈಸೂರು ಜಿಲ್ಲೆಯು ಈ ಯೋಜನೆಯಿಂದ ವಿಜ್ಞಾನ ಚಟುವಟಿಕೆಗಳ ಕೇಂದ್ರವಾಗಿಯೂ ಹೊರಹೊಮ್ಮುಲಿದೆ.

‘ಬೆಂಗಳೂರಿನಲ್ಲಿರುವ ಜವಾಹರ ಲಾಲ್‌ ನೆಹರೂ ತಾರಾಲಯಕ್ಕಿಂತ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ತಾರಾಲಯವನ್ನು ಸೈನ್ಸ್‌ ಸಿಟಿಯಲ್ಲಿ ಸ್ಥಾಪಿಸಲಾಗುವುದು. ಈಗಾಗಲೇ ಮಂಗಳೂರಿನ ಪಿಳಿಕುಳದಲ್ಲಿ ಇಂಥ ತಾರಾಲಯ ನಿರ್ಮಿಸಲಾಗಿದೆ. ಜೊತೆಗೆ ವಿಜ್ಞಾನ ಮಾದರಿಗಳನ್ನು ಇಡಲಾಗುವುದು. ವಿಜ್ಞಾನದ ಬೆಳವಣಿಗೆ, ವಿಸ್ಮಯ, ಕೊಡುಗೆ, ಯಾವ ರೀತಿ ಸಂಶೋಧನೆ ಕೈಗೆತ್ತಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ಇರಲಿದೆ. ವಿಜ್ಞಾನ ಪ್ರದರ್ಶನದ ಜೊತೆಗೆ ನಿರಂತರ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಇದೆ. ಪ್ರಯೋಗದ ಮೂಲಕ ಜ್ಞಾನ ವಿಸ್ತಾರ ಮಾಡುವ ಕೇಂದ್ರ ಇದಾಗಲಿದೆ’ ಎಂದು ವಿವರಿಸಿದರು.

‘ಮೈಸೂರು ಪ್ರವಾಸಿ ತಾಣ ಕೂಡ. ಜೊತೆಗೆ ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳು ಸಮೀಪ ಇವೆ. ಕೆಆರ್‌ಎಸ್‌ ಜಲಾಶಯವಿದೆ. ಈ ನಿಟ್ಟಿನಲ್ಲಿ ಹೆಚ್ಚು ಜನ ಬರುತ್ತಿರುತ್ತಾರೆ. ಪ್ರವಾಸಿಗರು ಸೈನ್ಸ್‌ ಸಿಟಿಗೂ ಭೇಟಿ ನೀಡಬಹುದು. ನಗರದಿಂದ ಹೊರಗಿರಲಿ ಎಂಬ ಉದ್ದೇಶದಿಂದ ಸುತ್ತೂರು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.

*
ಕೋಲ್ಕತ್ತದಲ್ಲಿ 50 ಎಕರೆ ವಿಶಾಲ ಜಾಗದಲ್ಲಿ ಸೈನ್ಸ್‌ ಸಿಟಿ ನಿರ್ಮಿಸಲಾಗಿದೆ. ಅದೇ ಮಾದರಿಯಲ್ಲಿ ಮೈಸೂರಿನ ಸುತ್ತೂರಿನಲ್ಲೂ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ.
-ಡಾ.ಎಚ್‌.ಹೊನ್ನೇಗೌಡ, ವಿಶೇಷ ನಿರ್ದೇಶಕ (ತಾಂತ್ರಿಕ), ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT