ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಿನಾಯಿತಿ ಕಡಿತದ ಸೂಚನೆ ನೀಡಿದ ಬಜಾಜ್

Last Updated 6 ಜುಲೈ 2022, 4:32 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ವಿನಾಯಿತಿ ಪಡೆದಿರುವ ಸರಕು ಹಾಗೂ ಸೇವೆಗಳ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡಲು ಅವಕಾಶಗಳು ಇವೆ ಎಂದು ಕೇಂದ್ರ ರೆವಿನ್ಯು ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಜಿಎಸ್‌ಟಿ ವ್ಯವಸ್ಥೆಯಲ್ಲಿ ಕೆಲವು ಲೋಪಗಳನ್ನು ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ಸರಿಪಡಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಈಚಿನ ತಿಂಗಳುಗಳಲ್ಲಿ ಜಿಎಸ್‌ಟಿ ಸಂಗ್ರಹ ಉತ್ತಮವಾಗಿ ಆಗುತ್ತಿರುವುದಕ್ಕೆ ಕಾರಣ ಹಣದುಬ್ಬರ ಮಾತ್ರವೇ ಅಲ್ಲ. ಆರ್ಥಿಕ ಚಟುವಟಿಕೆಗಳು ಸುಧಾರಿಸಿರುವುದು, ಜಿಎಸ್‌ಟಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿರುವುದರ ಕೊಡುಗೆಯೂ ಇದೆ ಎಂದು ಅವರು ಹೇಳಿದ್ದಾರೆ.

ಜೂನ್‌ನಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯು ಪ್ಯಾಕ್ ಮಾಡಿರುವ, ಲೇಬಲ್ ಇರುವ ಮಾಂಸ, ಮೊಸರು, ಮಜ್ಜಿಗೆ, ಹಪ್ಪಳ ಸೇರಿದಂತೆ ಹಲವು ಉತ್ಪನ್ನಗಳಿಗೆ ಇದ್ದ ತೆರಿಗೆ ವಿನಾಯಿತಿಯನ್ನು ರದ್ದುಮಾಡಿದೆ.

‘ಜಿಎಸ್‌ಟಿ ಮಂಡಳಿಯ 47ನೆಯ ಸಭೆಯಲ್ಲಿ ನಾವು ಹಲವು ವಿನಾಯಿತಿಗಳನ್ನು ಹಿಂಪಡೆದಿದ್ದೇವೆ. ಆದರೂ, ವಿನಾಯಿತಿಗಳು ಒಂದಿಷ್ಟು ಉಳಿದಿವೆ. ಆ ವಿಚಾರವಾಗಿ ಕೆಲಸ ಆಗಬೇಕಿದೆ. ಬಹಳಷ್ಟು ಸೇವೆಗಳಿಗೆ ವಿನಾಯಿತಿ ಇದೆ. ವಿನಾಯಿತಿ ಇರುವ ಸರಕು, ಸೇವೆಗಳ ಪಟ್ಟಿಯನ್ನು ಇನ್ನಷ್ಟು ಚಿಕ್ಕದಾಗಿಸಲು ಸಾಧ್ಯ ಎಂದಾದರೆ ವ್ಯಾಪಾರ, ಉದ್ಯಮ ವಲಯದ ಜೊತೆಗೂಡಿ ಕೆಲಸ ಮಾಡುವುದನ್ನು ಮುಂದುವರಿಸಲಾಗುವುದು’ ಎಂದು ಬಜಾಜ್ ಹೇಳಿದ್ದಾರೆ.

ಆರೋಗ್ಯ ಸೇವೆಯಂತಹ ಕೆಲವು ವಲಯಗಳಿಗೆ ವಿನಾಯಿತಿ ಮುಂದುವರಿಸಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT