ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಅಭಿವೃದ್ಧಿ ಕೆಲಸಕ್ಕೆ ಬಂಡವಾಳ ಸಂಗ್ರಹಿಸಲು ಎಸ್‌ಎಸ್‌ಇ

Last Updated 28 ಸೆಪ್ಟೆಂಬರ್ 2021, 16:03 IST
ಅಕ್ಷರ ಗಾತ್ರ

ಮುಂಬೈ: ಸಾಮಾಜಿಕ ಅಭಿವೃದ್ಧಿ ಉದ್ದೇಶದ ಉದ್ದಿಮೆಗಳಿಗೆ ಬಂಡವಾಳ ಸಂಗ್ರಹಿಸಲು ಅವಕಾಶ ಕಲ್ಪಿಸುವ ‘ಸೋಷಿಯಲ್ ಸ್ಟಾಕ್ ಎಕ್ಸ್‌ಚೇಂಜ್’ (ಎಸ್‌ಎಸ್‌ಇ) ಆರಂಭಕ್ಕೆ ಅಗತ್ಯವಿರುವ ನಿಯಮಗಳಿಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಂಗಳವಾರ ಒಪ್ಪಿಗೆ ನೀಡಿದೆ. ಸೆಬಿ ರಚಿಸಿದ್ದ ಎರಡು ಸಮಿತಿಗಳು ನೀಡಿದ ವರದಿ ಆಧರಿಸಿ ಈ ನಿಯಮಗಳನ್ನು ರೂಪಿಸಲಾಗಿದೆ.

ಈಗಿರುವ ಷೇರು ಮಾರುಕಟ್ಟೆಗಳ ಪ್ರತ್ಯೇಕ ಭಾಗವಾಗಿ ಎಸ್‌ಎಸ್‌ಇ ಕೆಲಸ ಮಾಡಲಿದೆ ಎಂದು ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ ಅವರು ಮಂಗಳವಾರ ತಿಳಿಸಿದರು. ಲಾಭದ ಉದ್ದೇಶವಿಲ್ಲದ ಸಂಸ್ಥೆಗಳು (ಎನ್‌ಪಿಒ) ಹಾಗೂ ಲಾಭದ ಉದ್ದೇಶವಿದ್ದರೂ ಸಾಮಾಜಿಕ ಪರಿಣಾಮ ಬೀರುವಂತಹ ಕೆಲಸ ಮಾಡುವ ಉದ್ದಿಮೆಗಳು ಎಸ್‌ಎಸ್‌ಇ ಮೂಲಕ ಬಂಡವಾಳ ಸಂಗ್ರಹಿಸಬಹುದು.

ಸೆಬಿ ಅನುಮೋದನೆ ನೀಡಿರುವ 15 ಸಾಮಾಜಿಕ ಚಟುವಟಿಕೆಗಳ ಪೈಕಿ ಯಾವುದಾದರೂ ಒಂದು ಚಟುವಟಿಕೆಯಲ್ಲಿ ಈ ಸಂಸ್ಥೆಗಳು, ಉದ್ದಿಮೆಗಳು ತೊಡಗಿಸಿಕೊಂಡಿರಬೇಕು. ಎಸ್‌ಎಸ್‌ಇ ಯಾವಾಗ ಕಾರ್ಯ ಆರಂಭಿಸಬಹುದು ಎಂಬ ಪ್ರಶ್ನೆಗೆ ತ್ಯಾಗಿ ಅವರು ಕಾಲಮಿತಿಯನ್ನು ನಿಗದಿ ಮಾಡಲಿಲ್ಲ. ಎಸ್‌ಎಸ್‌ಇ ವಿಚಾರವಾಗಿ ಸೆಬಿ, ಸರ್ಕಾರದ ಜೊತೆ ಕೆಲಸ ಮಾಡಲಿದೆ ಎಂದರು.

ಅರ್ಹ ಎನ್‌ಪಿಒಗಳು ಈಕ್ವಿಟಿ, ಮ್ಯೂಚುವಲ್‌ ಫಂಡ್, ಸಾಮಾಜಿಕ ಪರಿಣಾಮ ಬೀರುವ ಫಂಡ್, ಅಭಿವೃದ್ಧಿ ಬಾಂಡ್‌ಗಳ ಮೂಲಕ ಬಂಡವಾಳ ಸಂಗ್ರಹಿಸಲು ಅವಕಾಶವಿದೆ. ಎನ್‌ಪಿಒಗಳು ಎಸ್‌ಎಸ್‌ಇಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಸಾಮಾಜಿಕ ಉದ್ದಿಮೆಗಳು ತಮ್ಮ ಆಡಳಿತ ವ್ಯವಸ್ಥೆ, ಹಣಕಾಸಿನ ಸ್ಥಿತಿ ಹಾಗೂ ತಮ್ಮಿಂದ ಸಮಾಜದ ಮೇಲೆ ಆಗಿರುವ ಪರಿಣಾಮದ ಬಗ್ಗೆ ವರದಿ ಮಾಡಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಸೆಬಿ ಹೇಳಿದೆ.

ಕಾರ್ಪೊರೇಟ್ ಪ್ರತಿಷ್ಠಾನಗಳು, ರಾಜಕೀಯ ಮತ್ತು ಧಾರ್ಮಿಕ ಸಂಘಟನೆಗಳು ಎಸ್‌ಎಸ್‌ಇಯಲ್ಲಿ ನೋಂದಣಿ ಮಾಡಿಕೊಳ್ಳಬಾರದು ಎಂದು ಸೆಬಿಯ ಸಮಿತಿಯೊಂದು ಮೇ ತಿಂಗಳಿನಲ್ಲಿ ಹೇಳಿದೆ. ಎಸ್‌ಎಸ್‌ಇ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019–20ನೇ ಸಾಲಿನ ಬಜೆಟ್ ಭಾಷಣದಲ್ಲಿ ಮೊದಲ ಬಾರಿಗೆ ಪ್ರಸ್ತಾಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT