ದಾಖಲೆ ಮಟ್ಟ ಕಾಯ್ದುಕೊಳ್ಳದ ಪೇಟೆ

ಬುಧವಾರ, ಏಪ್ರಿಲ್ 24, 2019
27 °C
ಹೊಸ ಹಣಕಾಸು ವರ್ಷಕ್ಕೆ ಉತ್ಸಾಹದ ಸ್ವಾಗತ

ದಾಖಲೆ ಮಟ್ಟ ಕಾಯ್ದುಕೊಳ್ಳದ ಪೇಟೆ

Published:
Updated:
Prajavani

ಮುಂಬೈ: ದೇಶದ ಷೇರುಪೇಟೆಗಳು ಉತ್ತಮ ಗಳಿಕೆಯೊಂದಿಗೆ ಹೊಸ ಹಣಕಾಸು ವರ್ಷವನ್ನು ಆರಂಭಿಸಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಮಧ್ಯಂತರ ವಹಿವಾಟಿನಲ್ಲಿ 39,115 ಅಂಶಗಳ ದಾಖಲೆ ಮಟ್ಟವನ್ನು ತಲುಪಿತ್ತು. ನಂತರ ಅದನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು.

ದಿನದ ಆರಂಭದಲ್ಲಿ 38,858 ಅಂಶಗಳಲ್ಲಿ ವಹಿವಾಟು ಆರಂಭವಾಯಿತು. ದೇಶಿ ಮತ್ತು ಜಾಗತಿಕ ಮಟ್ಟದ ಸಕಾರಾತ್ಮಕ ಸಂಗತಿಗಳಿಂದಾಗಿ 307 ಅಂಶಗಳಷ್ಟು ಏರಿಕೆ ಕಂಡು 39,115 ಅಂಶಗಳ ಗರಿಷ್ಠ ಮತ್ತು 38,808 ಅಂಶಗಳ ಕನಿಷ್ಠ ಮಟ್ಟವನ್ನು ತಲುಪಿತ್ತು. ದಿನದ ವಹಿವಾಟಿನ ಅಂತ್ಯದಲ್ಲಿ 199 ಅಂಶಗಳ ಏರಿಕೆಯೊಂದಿಗೆ 38,871 ಅಂಶಗಳಿಗೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್‌ಎಸ್‌ಇ) 45 ಅಂಶ ಹೆಚ್ಚಾಗಿ 11,669 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗುರುವಾರ ಹೊಸ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಪರಾಮರ್ಶೆ ನಡೆಸಲಿದೆ. ಹಣಕಾಸು ನೀತಿ ಸಮಿತಿಯು (ಎಂಪಿಸಿ) ಶೇ 0.25ರಷ್ಟು ಬಡ್ಡಿದರ ಕಡಿತ ಮಾಡಲಿದೆ ಎಂದು ಉದ್ಯಮ ವಲಯ ಮತ್ತು ತಜ್ಞರು ಅಂದಾಜು ಮಾಡಿದ್ದಾರೆ. 

ಚೀನಾ, ಅಮೆರಿಕ ವಾಣಿಜ್ಯ ಮಾತುಕತೆ ಪ್ರಗತಿ ಹಾಗೂ ಚೀನಾದ ತಯಾರಿಕಾ ಚಟುವಟಿಕೆ ಹೆಚ್ಚಾಗಿರುವ  ಸಕಾರಾತ್ಮಕ ಸಂಗತಿಗಳು ಸೂಚ್ಯಂಕದ ಏರುಮುಖ ಚಲನೆಗೆ ಉತ್ತೇಜನ ನೀಡಿದವು.

ಬ್ಯಾಂಕ್‌ಗಳಲ್ಲಿ ಹಣಕಾಸು ವರ್ಷದ ವಾರ್ಷಿಕ ಮುಕ್ತಾಯದ ದಿನವಾಗಿರುವುದರಿಂದ ಸೋಮವಾರ ಕರೆನ್ಸಿ ಮತ್ತು ಬಾಂಡ್‌ ಮಾರುಕಟ್ಟೆಗಳು ಮುಚ್ಚಿದ್ದವು.

ರಿಲಯನ್ಸ್‌ ಗಳಿಕೆ
ದಿನದ ವಹಿವಾಟಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಶೇ 3 ರಷ್ಟು ಗಳಿಕೆ ಕಂಡಿವೆ.

ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯ ₹ 18,083 ಕೋಟಿಗಳಷ್ಟು ಹೆಚ್ಚಾಗಿ ₹ 8.82 ಲಕ್ಷ ಕೋಟಿಗೆ ತಲುಪಿದೆ.

ಸದ್ಯ, ಷೇರುಪೇಟೆಯಲ್ಲಿ ಅತ್ಯಂತ ಮೌಲ್ಯಯುತ ಕಂಪನಿ ಇದಾಗಿದೆ. ಟಿಸಿಎಸ್‌ ₹ 7.62 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !