ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಹ, ರಿಯಾಲ್ಟಿ ಗಳಿಕೆ: ಸೂಚ್ಯಂಕ ಏರಿಕೆ

Last Updated 27 ಅಕ್ಟೋಬರ್ 2022, 12:49 IST
ಅಕ್ಷರ ಗಾತ್ರ

ಮುಂಬೈ: ಲೋಹ, ರಿಯಾಲ್ಟಿ ಮತ್ತು ಇಂಧನ ವಲಯದ ಷೇರುಗಳ ಗಳಿಕೆಯಿಂದಾಗಿ ಷೇರುಪೇಟೆಗಳಲ್ಲಿ ಗುರುವಾರ ಸಕಾರಾತ್ಮಕ ವಹಿವಾಟು ನಡೆಯಿತು.

ವಿದೇಶಿ ಬಂಡವಾಳದ ಹೊರಹರಿವು ಸೂಚ್ಯಂಕದ ಏರಿಕೆಯನ್ನು ಮಿತಿಗೊಳಿಸಿದರೂ ರೂಪಾಯಿ ಮೌಲ್ಯ ಹೆಚ್ಚಳವು ವಹಿವಾಟಿನ ಏರಿಕೆಗೆ ನೆರವಾಯಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 213 ಅಂಶ ಏರಿಕೆ ಕಂಡು 69,756 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 81 ಅಂಶ ಹೆಚ್ಚಾಗಿ 17,736 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಸೆನ್ಸೆಕ್ಸ್‌ನಲ್ಲಿ ಟಾಟಾ ಸ್ಟೀಲ್‌ ಷೇರು ಶೇ 3.02ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ಐ.ಟಿ. ಮತ್ತು ತಂತ್ರಜ್ಞಾನ ಷೇರುಗಳು ನಷ್ಟ ಕಂಡವು.

ಸರ್ಕಾರಿ ಬಾಂಡ್‌ಗಳ ಅಕ್ಟೋಬರ್ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯ ಆಗುವುದರಿಂದ ಷೇರುಪೇಟೆಯಲ್ಲಿ ಹೆಚ್ಚಿನ ಏರಿಳಿತ ಕಂಡುಬಂದಿತು. ಆದರೆ, ಲೋಹ, ರಿಯಲ್‌ ಎಸ್ಟೇಟ್‌ ಹಾಗೂ ತೈಲ ಮತ್ತು ಅನಿಲ ಷೇರುಗಳ ಮೌಲ್ಯ ಹೆಚ್ಚಳವು ಸೂಚ್ಯಂಕಗಳ ಏರುಮುಖ ಚಲನೆಗೆ ನೆರವಾದವು ಎಂದು ಕೋಟಕ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಈಕ್ವಿಟಿ ಸಂಶೋಧನಾ ವಿಭಾಗದ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಹೂಡಿಕೆದಾರರು ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಹೀಗಾಗಿ ಹಲವು ಬಾಹ್ಯ ಅಡೆತಡೆಗಳ ಹೊರತಾಗಿಯೂ ಷೇರುಪೇಟೆ ವಹಿವಾಟು ಗರಿಷ್ಠ ಮಟ್ಟದಲ್ಲಿದೆ ಎಂದೂ ಅವರು ತಿಳಿಸಿದ್ದಾರೆ.

ಆರ್ಥಿಕತೆ ಮಂದಗತಿಗೆ ತಿರುಗುತ್ತಿರುವ ಕಾರಣ, ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಿಸುವ ವೇಗಕ್ಕೆ ಕಡಿವಾಣ ಹಾಕುವ ಆಲೋಚನೆ ನಡೆಸುತ್ತಿವೆ ಎನ್ನುವ ವದಂತಿಯಿಂದಾಗಿ ಏಷ್ಯಾದ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ದೀಪಕ್‌ ಜಸನಿ ಹೇಳಿದ್ದಾರೆ.

ಏಷ್ಯಾದಲ್ಲಿ ಸೋಲ್‌ ಮತ್ತು ಹಾಂಗ್‌ಕಾಂಗ್ ಷೇರುಪೇಟೆಗಳು ಗಳಿಕೆ ಕಂಡುಕೊಂಡರೆ, ಟೋಕಿಯೊ ಮತ್ತು ಶಾಂಘೈ ಷೇರುಪೇಟೆಗಳ ವಹಿವಾಟು ಇಳಿಕೆ ಕಂಡಿತು. ಬ್ರೆಂಟ್ ಕಚ್ಚಾ ತೈಲ ದರ ಶೇ 0.13ರಷ್ಟು ಏರಿಕೆ ಕಂಡು ಒಂದು ಬ್ಯಾರಲ್‌ಗೆ 95.79 ಡಾಲರ್‌ಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT