ಷೇರುಪೇಟೆ ವಹಿವಾಟು ಸೂತ್ರಹರಿದ ಗಾಳಿಪಟ

7

ಷೇರುಪೇಟೆ ವಹಿವಾಟು ಸೂತ್ರಹರಿದ ಗಾಳಿಪಟ

Published:
Updated:
Deccan Herald

ಮುಂಬೈ: ದೇಶದ ಷೇರುಪೇಟೆಗಳ ವಹಿವಾಟು ಸೂತ್ರ ಹರಿದ ಗಾಳಿಪಟದಂತಾಗಿದೆ. ತೀವ್ರ ಸ್ವರೂಪದ ಮಾರಾಟದ ಒತ್ತಡಕ್ಕೆ ಸಿಲುಕಿದ ಸಂವೇದಿ ಸೂಚ್ಯಂಕವು, ಗುರುವಾರದ ವಹಿವಾಟಿನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಾಣುತ್ತಿರುವುದರಿಂದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುತ್ತಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 806 ಅಂಶ ಕುಸಿತ ಕಂಡು 35,169 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿದೆ. ಜುಲೈ 2ರ ನಂತರ ದಿನದ ವಹಿವಾಟಿನ ಕನಿಷ್ಠ ಮಟ್ಟದ ಅಂತ್ಯ ಇದಾಗಿದೆ.

ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ, ಬ್ಯಾಂಕಿಂಗ್‌ ಮತ್ತು ವಾಹನ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗಿ ಸೂಚ್ಯಂಕವನ್ನು ಗಮನಾರ್ಹವಾಗಿ ಇಳಿಕೆ ಕಾಣುವಂತೆ ಮಾಡಿವೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 259 ಅಂಶ ಇಳಿಕೆಯಾಗಿ 10,599 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸ್ಥಳೀಯ ಮತ್ತು ವಿದೇಶಿ ನಕಾರಾತ್ಮಕ ಸಂಗತಿಗಳ ಫಲವಾಗಿ ಪೇಟೆಯಲ್ಲಿ ಖರೀದಿ ಉತ್ಸಾಹವೇ ಬತ್ತಿ ಹೋಗಿದೆ.

ತೈಲ ದರ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 86.10 ಡಾಲರ್‌ಗಳಿಗೆ ಏರಿಕೆಯಾಗಿದೆ. ಇದು ನಾಲ್ಕು ವರ್ಷಗಳ ಗರಿಷ್ಠ ಮಟ್ಟವಾಗಿದೆ. ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮಿಡಿಯೇಟ್‌ (ಡಬ್ಲ್ಯುಟಿಐ) ದರ್ಜೆಯ ಕಚ್ಚಾ ತೈಲ ಬ್ಯಾರೆಲ್‌ಗೆ 76.23 ಡಾಲರ್‌ಗಳಿಗೆ ತಲುಪಿದೆ.

ಆರ್‌ಬಿಐ ಸಭೆ: ಆರ್‌ಬಿಐ ಶುಕ್ರವಾರ ಹಣಕಾಸು ನೀತಿ ಪರಾಮರ್ಶೆ ನಡೆಸಲಿದ್ದು, ಬಡ್ಡಿದರ ಏರಿಕೆಯ ನಿರೀಕ್ಷೆ ಹೆಚ್ಚಾಗಿದೆ. 

ಜಾಗತಿಕ ವಿದ್ಯಮಾನ: ಅಮೆರಿಕದ  ಆರ್ಥಿಕತೆ ಚೇತರಿಸಿಕೊಂಡಿದ್ದು, ಬಾಂಡ್‌ ಗಳಿಕೆಯೂ ಹೆಚ್ಚಾಗುತ್ತಿದೆ. ಇದರಿಂದ ಹೂಡಿಕೆದಾರರು ಅಮೆರಿಕದತ್ತ ಮುಖಮಾಡುತ್ತಿದ್ದಾರೆ. ಇದರಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿನ ವಿದೇಶಿ ಹೂಡಿಕೆ ಪ್ರಮಾಣ ಕಡಿಮೆಯಾಗಲಿದೆ.

₹ ದಾಖಲೆ ಕುಸಿತ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ಗುರುವಾರ ಹೊಸ ದಾಖಲೆ ಮಟ್ಟಕ್ಕೆ ( ₹ 73.81) ಕುಸಿದಿತ್ತು. ದಿನದಂತ್ಯದಲ್ಲಿ 24 ಪೈಸೆಗಳ ನಷ್ಟ ಕಂಡು 73.58ಕ್ಕೆ ತಲುಪಿತು. ಮೂರು ದಿನಗಳಲ್ಲಿ 110 ಪೈಸೆಗಳಷ್ಟು ಕುಸಿತ ಕಂಡಿದೆ.

₹ 5 ಲಕ್ಷ ಕೋಟಿ ನಷ್ಟ

ಷೇರುಪೇಟೆ ಸೂಚ್ಯಂಕ ಕುಸಿಯುತ್ತಿರುವುದರಿಂದ ಹೂಡಿಕೆದಾರರ ಸಂಪತ್ತು ಕರಗಲಾರಂಭಿಸಿದೆ.

ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಮೌಲ್ಯದಲ್ಲಿ ₹ 5 ಲಕ್ಷ ಕೋಟಿಯಷ್ಟು ಕರಗಿದೆ. ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹ 140 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಹೂಡಿಕೆದಾರರ ಸಂಪತ್ತು ₹ 14 ಲಕ್ಷ ಕೋಟಿಯಷ್ಟು ಕೊಚ್ಚಿ ಹೋಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !