6 ತಿಂಗಳ ಗರಿಷ್ಠ ಮಟ್ಟಕ್ಕೆ ಷೇರುಪೇಟೆ

ಶುಕ್ರವಾರ, ಮಾರ್ಚ್ 22, 2019
21 °C
38 ಸಾವಿರ ಅಂಶಗಳ ಗಡಿ ದಾಟಿದ ಸಂವೇದಿ ಸೂಚ್ಯಂಕ

6 ತಿಂಗಳ ಗರಿಷ್ಠ ಮಟ್ಟಕ್ಕೆ ಷೇರುಪೇಟೆ

Published:
Updated:

ಮುಂಬೈ: ಸತತ ಐದನೇ ವಹಿವಾಟಿನಲ್ಲಿಯೂ ಏರಿಕೆ ಕಂಡಿರುವ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಶುಕ್ರವಾರ ವಹಿವಾಟಿನಲ್ಲಿ 38 ಸಾವಿರ ಅಂಶಗಳ ಗಡಿ ದಾಟಿದೆ.

ಬ್ಯಾಂಕಿಂಗ್‌ ಷೇರುಗಳಲ್ಲಿನ ಖರೀದಿ ಭರಾಟೆ, ವಿದೇಶಿ ನಿಧಿಗಳ ಒಳ ಹರಿವಿನಲ್ಲಿನ ಹೆಚ್ಚಳ, ಡಾಲರ್‌ ಎದುರು ರೂಪಾಯಿ ವಿನಿಮಯ ದರ ಚೇತರಿಕೆ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಉತ್ಸಾಹವು ದೇಶಿ ಷೇರುಪೇಟೆಯಲ್ಲಿ ಖರೀದಿ ಭರಾಟೆ ಮೂಡಿಸಿದೆ.

ವಹಿವಾಟಿನ ಒಂದು ಹಂತದಲ್ಲಿ 500 ಅಂಶಗಳ ಹೆಚ್ಚಳ ಕಂಡಿದ್ದ ಸೂಚ್ಯಂಕವು, ದಿನದ ಅಂತ್ಯದಲ್ಲಿ 269 ಅಂಶಗಳ ಏರಿಕೆ ಕಂಡು 38,024 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 83.60 ಅಂಶ ಹೆಚ್ಚಳ ಕಂಡು 11,426 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಸಂವೇದಿ ಸೂಚ್ಯಂಕವು 6 ತಿಂಗಳಲ್ಲಿ ಇದೇ ಮೊದಲ ಬಾರಿಗೆ 38 ಸಾವಿರ ಅಂಶಗಳ ಗಡಿ ದಾಟಿದೆ. 2018ರ ಸೆಪ್ಟೆಂಬರ್‌ 14ರಂದು 38,090ಕ್ಕೆ ತಲುಪಿತ್ತು.

ಕೋಟಕ್‌ ಬ್ಯಾಂಕ್‌ ಷೇರು ಗರಿಷ್ಠ ಶೇ 4.31ರಷ್ಟು ಏರಿಕೆ ದಾಖಲಿಸಿದೆ. ಪವರ್‌ಗ್ರಿಡ್‌, ಟಿಸಿಎಸ್‌, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಎಚ್‌ಸಿಎಲ್‌ ಟೆಕ್‌, ಎನ್‌ಟಿಪಿಸಿ, ಇನ್ಫೊಸಿಸ್‌, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಒ, ಒಎನ್‌ಜಿಸಿ, ವೇದಾಂತ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ ಗರಿಷ್ಠ ಶೇ 2.84ರವರೆಗೆ ಗಳಿಕೆ ಕಂಡಿವೆ.

ಎಚ್‌ಯುಎಲ್‌, ಯೆಸ್‌ ಬ್ಯಾಂಕ್‌, ಐಟಿಸಿ, ಭಾರ್ತಿ ಏರ್‌ಟೆಲ್‌, ಆರ್‌ಐಎಲ್‌, ಸನ್‌ ಫಾರ್ಮಾ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಶೇ 2.16ರವರೆಗೆ ಕುಸಿತ ಕಂಡಿವೆ.

ಬ್ಯಾಂಕ್‌, ತಂತ್ರಜ್ಞಾನ, ತೈಲ ಮತ್ತು ನೈಸರ್ಗಿಕ ಅನಿಲ, ಐ.ಟಿ, ಹಣಕಾಸು ವಲಯದ ಷೇರುಗಳು ಲಾಭ ಬಾಚಿಕೊಂಡಿವೆ. ದೂರ
ಸಂಪರ್ಕ, ಎಫ್‌ಎಂಸಿಜಿ ಮತ್ತು ಇಂಧನ ವಲಯದ ಷೇರುಗಳು ಶೇ 1.79 ರವರೆಗೆ ಕುಸಿತ ದಾಖಲಿಸಿವೆ.

₹ ಬೆಲೆ 24 ಪೈಸೆ ಹೆಚ್ಚಳ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ದರವು ಡಾಲರ್‌ ಎದುರು ಶುಕ್ರವಾರ 24 ಪೈಸೆ ಚೇತರಿಕೆ ಕಂಡಿದೆ.

ವಿದೇಶಿ ಬಂಡವಾಳ ಹರಿವು ಹೆಚ್ಚಳ ಮತ್ತು ಷೇರುಪೇಟೆಯಲ್ಲಿನ ಖರೀದಿ ಭರಾಟೆಯ ಕಾರಣಕ್ಕೆ ರೂಪಾಯಿ ಬೆಲೆ ಚೇತರಿಕೆ ಕಾಣುತ್ತಿದೆ. ವಿದೇಶಗಳಲ್ಲಿ ಇತರ ಕರೆನ್ಸಿಗಳ ಎದುರು ಡಾಲರ್‌ ಬೆಲೆ ದುರ್ಬಲಗೊಂಡಿರುವುದೂ ರೂಪಾಯಿ ಚೇತರಿಕೆಗೆ ಕಾರಣವಾಗಿದೆ.ವಾರದಲ್ಲಿ ರೂಪಾಯಿ ಬೆಲೆ 104 ಪೈಸೆಗಳಷ್ಟು ಹೆಚ್ಚಳಗೊಂಡಿದೆ. ಸತತ ಐದನೇ ವಾರವೂ ಚೇತರಿಕೆ ದಾಖಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !